ಮಳೆಗಾಲದ ವಿಪತ್ತು ನಿರ್ವಹಣೆಗೆ ಕ್ರಮ ವಹಿಸಿ ಅಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ

Spread the love

ಮಳೆಗಾಲದ ವಿಪತ್ತು ನಿರ್ವಹಣೆಗೆ ಕ್ರಮ ವಹಿಸಿ ಅಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ

ಉಡುಪಿ: ಮಳೆಗಾಲ ಪ್ರಾರಂಭಗೊಂಡ ಹಿನ್ನಲೆಯಲ್ಲಿ ಮಳೆಗೆ ಸಂಬಂದಿಸಿದ ವಿಪತ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರಿಸ್ಥಿತಿ ನಿರ್ವಹಣೆಗೆ ತುರ್ತಾಗಿ ಸ್ಪಂದಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಸೂಚನೆ ನೀಡಿದರು.

ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ಉಡುಪಿ ವಿಧಾನಸಭಾ ಕ್ಷೇತ್ರದ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರ ಉಪಸ್ಥಿತಿಯಲ್ಲಿ 19 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆಗಾಲದ ಪ್ರಾಕೃತಿಕ ವಿಕೋಪ ನಿರ್ವಹಣೆ ಬಗ್ಗೆ ಸಭೆ ನಡೆಸಿದರು.

ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯತ್ ಸಹಿತ ಎಲ್ಲಾ ರಸ್ತೆಗಳ ತೋಡು ಹೂಳೆತ್ತುವುದು, ಗ್ರಾಮ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಮಿತಿ ರಚಿಸಿ ಅಗತ್ಯ ಸಲಕರಣೆ ಒದಗಿಸುವುದು, ಮಳೆ ಹಾನಿ ಸಂದರ್ಭದಲ್ಲಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ತುರ್ತು ಪರಿಹಾರ ಕ್ರಮ ಹಾಗೂ ಸಂತ್ರಸ್ತ ಅರ್ಹ ಕುಟುಂಬಗಳಿಗೆ ಗರಿಷ್ಠ ಪರಿಹಾರ ಮಂಜೂರು ಮಾಡಲು ಆದ್ಯತೆ ನೀಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಹೇಳಿದರು.

ಅಂಗನವಾಡಿ, ಶಾಲಾ ಕಟ್ಟಡಗಳನ್ನು ಪರಿಶೀಲಿಸಿ ಮುಂಜಾಗ್ರತಾ ಕ್ರಮ, ಕಳೆದ ವರ್ಷ ಮಳೆ ಹಾನಿಗೀಡಾದ ಬಾಕಿ ಪರಿಹಾರ ಮೊತ್ತ ಬಿಡುಗಡೆ, ವಿದ್ಯುತ್ ಸರಬರಾಜು ವ್ಯತ್ಯಯವಾಗದಂತೆ ಮೆಸ್ಕಾಂ ಇಲಾಖೆ ಹಾಗೂ ಅಪಾಯಕಾರಿ ಮರಗಳ ತೆರವಿಗೆ ಅರಣ್ಯ ಇಲಾಖೆ ವಿಶೇಷ ಕಾರ್ಯಾಚರಣೆ ಮಾಡುವಂತೆ ಹೇಳಿದರು.

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಲೈಸನ್ಸ್, 9/11, ಜಾತಿ ಆದಾಯ ಪ್ರಮಾಣ ಪತ್ರ, ಸಣ್ಣ ರೈತ, ತ್ಯಾಜ್ಯ ನಿರ್ವಹಣೆ ಸಹಿತ ಸಾರ್ವಜನಿಕರ ಕಡತಗಳನ್ನು ಪರಿಶೀಲಿಸಿ ಶೀಘ್ರ ವಿಲೇವಾರಿಗೆ ಅಗತ್ಯ ಕ್ರಮ ವಹಿಸಲು ಪಂಚಾಯತ್ ಅಭಿವೃಧ್ದಿ ಅಧಿಕಾರಿಗಳಿಗೆ ಹೇಳಿದರು.

ಸಭೆಯಲ್ಲಿ ಉಡುಪಿ ತಹಶೀಲ್ದಾರ್ ಗುರುರಾಜ್, ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ, ಉಡುಪಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ವಿಜಯ ಹಾಗೂ ಬ್ರಹ್ಮಾವರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶ್ರೀ ಇಬ್ರಾಹಿಂಪುರ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love