ಮಳೆ ನಿಂತ ಬಳಿಕ ಹದಗೆಟ್ಟ ಮಣಿಪಾಲ – ತಿರ್ಥಹಳ್ಳಿ ರಾ.ಹೆದ್ದಾರಿ ದುರಸ್ತಿ : ಶೋಭಾ ಕರಂದ್ಲಾಜೆ
ಉಡುಪಿ: ಉಡುಪಿ ಜಿಲ್ಲೆಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 169-ಎ (ಮಲ್ಪೆ – ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ)ಯ ಅಗಲೀಕರಣದ ನಿಮಿತ್ತವಾಗಿ ಭೂ ಸ್ವಾಧೀನ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಭೂ ಸ್ವಾಧೀನ ಪ್ರಕ್ರಿಯೆಯ ಅಂಗವಾಗಿ 3(ಎ) ಅಧಿಸೂಚನೆ ಹೊರಡಿಸಲಾಗಿದ್ದು ದಿನಾಂಕ:31.05.2017 ರಂದು ಸರಕಾರದ ಗಜೆಟ್ನಲ್ಲಿ ಪ್ರಕಟಗೊಂಡಿರುತ್ತದೆ. ಇದರಲ್ಲಿ ಹೆದ್ದಾರಿ ಅಗಲೀಕರಣಕ್ಕಾಗಿ ಬೇಕಾಗುವ ಸ್ಥಳದ ಗ್ರಾಮವಾರು ಮಾಹಿತಿ, ಪೋಲೀಸ್ ಠಾಣಾವಾರು ಗಡಿಗಳು ಮೊದಲಾದ ವಿವರಗಳು ಒಳಗೊಂಡಿರುತ್ತವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಇದಿಷ್ಟೇ ಅಲ್ಲದೆ, ಭೂ ಸ್ವಾಧೀನ ಪ್ರಕ್ರಿಯೆಯಡಿ ಸ್ವಾಧೀನ ಪಡಿಸಿಕೊಳ್ಳಲಾಗುವ ಸ್ಥಳದ ಪ್ರತೀ ಗ್ರಾಮದ ಸರ್ವೆ ನಂಬರ್ ವಾರು ವಿಸ್ತೀರ್ಣದ ನಿಖರವಾದ ವಿವರಗಳುಳ್ಳ 3(ಎ) ಅಧಿಸೂಚನೆ ಹೊರಡಿಸಲು ಎಲ್ಲಾ ಪೂರ್ವ ಸಿದ್ಧತೆಗಳು ಆಗಿದ್ದು ಕೇಂದ್ರ ಸರಕಾರದ ಗಜೆಟ್ನಲ್ಲಿ ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು. ಅದಾದ ಬಳಿಕ ಭೂ ಸ್ವಾಧೀನ ಪ್ರಕ್ರಿಯೆ ವೇಗ ಪಡೆದುಕೊಳ್ಳಲಿದೆ.
ಪ್ರಸ್ತುತ ಕೆಟ್ಟು ಹೋಗಿರುವ ಸದರಿ ರಾಷ್ಟ್ರೀಯ ಹೆದ್ದಾರಿಯ ಮಣಿಪಾಲದ ಸಿಂಡಿಕೇಟ್ ಸರ್ಕಲ್ನಿಂದ ಪರ್ಕಳ ಬಿ.ಇ.ಎಂ. ಶಾಲೆಯವರೆಗಿನ ಭಾಗದ ತುರ್ತು ದುರಸ್ತಿ ಕಾರ್ಯವನ್ನು ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಂತಹ ಅನುದಾನವನ್ನು ಹೊಂದಿಸಿಕೊಂಡು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು. ಈ ಬಗ್ಗೆ ತಾನು ಸೆಪ್ಟಂಬರ್ 25 ರಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿ ರಾಷ್ಟ್ರೀಯ ಹೆದ್ದಾರಿ 169-ಎ ಯ ಕೆಟ್ಟು ಹೋಗಿರುವ ವಿವಿಧ ಭಾಗಗಳ ಸಮಗ್ರ ದುರಸ್ಥಿಗಾಗಿ ರೂಪಾಯಿ 100 ಕೋಟಿಗಳ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದು ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿರುವುದಾಗಿ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಕಳೆದ ಹಲವಾರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪರ್ಕಳ – ಮಣಿಪಾಲ ಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿನ ದುರಸ್ತಿ ಕಾರ್ಯ ವಿಳಂಬವಾಗಿದೆ. ನಾಗರಿಕರು ಸಹನೆಯಿಂದ ಸಹಕರಿಸಬೇಕಾಗಿ ಸಂಸದೆ ಶೋಭಾ ಕರಂದ್ಲಾಜೆ ವಿನಂತಿಸಿದ್ದಾರೆ.