ಮಳೆನೀರ ರಕ್ಷಣೆಗೆ ಮುಂದಾಗಬೇಕಿದೆ–ಡಾ ಹೆಗ್ಗಡೆ
ಮಳೆ ಬೀಳದೆ ಬರಗಾಲ ಬಂದಿದೆ ಎಂದು ಚಿಂತಿಸುವ ಬದಲು ಭೂಮಿಗೆ ಬಿದ್ದ ಜೀವ ಜಲದ ರಕ್ಷಣೆಗೆ ನಾವೆಲ್ಲ ಮುಂದಾಗಬೇಕಿದೆ. ನೀರಿನ ಮೂಲವನ್ನು ಸಂರಕ್ಷಣೆ ಮಾಡುವ ಕೆಲಸ ಅತ್ಯಂತ ಪುಣ್ಯದ ಕೆಲಸವಾಗಿದ್ದು ಜಲ ಮರುಪೂರಣದ ಕಾರ್ಯ ವ್ಯಾಪಕವಾಗಿ ನಡೆಯಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ನುಡಿದರು.
ಅವರು ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಾಯ ಧನದೊಂದಿಗೆ ಹೂಳೆತ್ತಲಾದ ಕೆರೆಗೆ ಬಾಗಿನ ಅರ್ಪಿಸಿ ಶಾಲಾವನ ಉದ್ಘಾಟಿಸಿ ಮಾತನಾಡುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ನಾವು ಎಂಬ ಪದ ಸಂಕುಚಿತಗೊಂಡು ಸ್ವಾರ್ಥ ಹೆಚ್ಚಾಗುತ್ತಿದೆ.ಬದಲಾಗಿ ನಮ್ಮ ಗ್ರಾಮ, ನಮ್ಮಕೆರೆ, ನಮ್ಮ ಪರಿಸರ ಇವೆಲ್ಲವುಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಭಾವನೆ ವೃದ್ಧಿಯಾಗಬೇಕಿದೆ. ಈ ಭಾಗದಲ್ಲಿ ಫಲವತ್ತಾದ ಭೂಮಿಯಿದೆ. ರೈತರ ಶ್ರಮದ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಆದರೆ ರೈತರ ಅತಿಯಾದ ಖರ್ಚಿನಿಂದಾಗಿ ಕೃಷಿ ನಷ್ಠದಾಯಕ ಎಂಬ ಮನೋಭಾವನೆ ಉಂಟಾಗಿದ್ದು ರೈತರು ಕೃಷಿಯಲ್ಲಿ ಉತ್ಪಾದನಾ ವೆಚ್ಚವನ್ನು ಕಡಿತಗೊಳಿಸಬೇಕು.ಇದಕ್ಕೆ ಪೂರಕವಾಗಿ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ತರಬೇತಿಗಳನ್ನು ಗ್ರಾಮ ಮಟ್ಟದಲ್ಲಿ ಆಯೋಜಿಸಲಾಗುತ್ತಿದ್ದು ಪ್ರಯೋಜನ ಪಡೆದುಕೊಳ್ಳಿ ಎಂದರು.
ಹೂಳೆತ್ತಲಾದ ಕೆರೆಯ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದ ಎಂ.ವಿ. ಮಂಜಣ್ಣನವರ್ ಪೂಜ್ಯರಧರ್ಮ ಕಾರ್ಯಗಳು ನಾಡಿನಾದ್ಯಂತ ನಡೆಯುತ್ತಿದ್ದು ಅವೆಲ್ಲವುಗಳಲ್ಲಿ ಜೀವಜಲದ ರಕ್ಷಣೆಗೆ ಒತ್ತು ನೀಡುತ್ತಿರುವುದು ಶ್ಲಾಘನೀಯ ಇದು ನಮ್ಮೆರ ಭಾಗ್ಯ ಎಂದರು.
ಸಮಾರಂಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಎಲ್.ಎಚ್. ಮಂಜುನಾಥ್, ಪ್ರಾದೇಶಿಕ ನಿರ್ದೇಶಕರಾದ ಎನ್. ಜಯಶಂಕರ ಶರ್ಮ, ಕೊಟಬಾಗಿ ಗ್ರಾ.ಪಂ ಅಧ್ಯಕ್ಷೆ ವನಜಾಕ್ಷಿ, ತಾ.ಪಂ ಸದಸ್ಯ ರುದ್ರಗೌಡ ಪಾಟೀಲ್, ಸಚಿವ ವಿನಯ್ ಕುಲಕರ್ಣಿಯವರ ಆಪ್ತ ಸಹಾಯಕ ಪ್ರಶಾಂತ್ ಮುಂತಾದವರು ಉಪಸ್ಥಿತರಿದ್ದರು.
ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಜಿಲ್ಲಾ ನಿರ್ದೇಶಕ ದಿನೇಶ್ ಎಂ.ಪ್ರಸ್ಥಾವಿಸಿ ಸ್ವಾಗತಿಸಿದರೆ, ಶಾಲೆಯ ಮುಖ್ಯೋಪಾಧ್ಯಾಯರಾದ ಬಿ.ಜಿ ಭಜಂತ್ರಿ ಮತ್ತು ವಿದ್ಯಾರ್ಥಿಗಳು ಪ್ರಾರ್ಥನೆಗೀತೆ ಹೇಳಿದರು. ನವಲಗುಂದ ಯೋಜನಾಧಿಕಾರಿ ಸತೀಶ್ಎಚ್. ನಿರೂಪಿಸಿದರು. ಧಾರವಾಡ ಯೋಜನಾಧಿಕಾರಿ ಕುಸುಮಾಧರ ವಂದಿಸಿದರು.