ಮಸಾಜ್ ನೆಪದಲ್ಲಿ ಹನಿಟ್ರಾಪ್ ಮಾಡುತ್ತಿದ್ದ ಆರೋಪಿಗಳ ಸೆರೆ
ಮಂಗಳೂರು ನಗರದ ಮೇರಿಹಿಲ್ ನ ಬಾಡಿಗೆ ಮನೆಯೊಂದರಲ್ಲಿ ಮಸಾಜ್ ಹೆಸರಲ್ಲಿ ಹನಿಟ್ರಾಪ್ ಮಾಡಿ ವ್ಯಕ್ತಿಯೊಬ್ಬರನ್ನು ಸುಲಿಗೆ ಮಾಡಿದ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ದಸ್ತಗಿರಿ ಮಾಡಿ ಹನಿಟ್ರಾಪ್ ಪ್ರಕರಣವೊಂದನ್ನು ಭೇದಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ದಿನಾಂಕ: 20-03-2018 ರಂದು ಮಂಗಳೂರು ನಗರದ ವ್ಯಕ್ತಿಯೊಬ್ಬರಿಗೆ ಮಸಾಜ್ ಮಾಡುವ ನೆಪದಲ್ಲಿ ಬಾಡಿಗೆ ಮನೆಯೊಂದಕ್ಕೆ ಕರೆಯಿಸಿಕೊಂಡು ನಂತರ ಮನೆಗೆ ಹೋದ ಕೂಡಲೇ 2-3 ಅಪರಿಚಿತ ಯುವಕರು ಏಕಾಎಕಿ ಮನೆಗೆ ಪ್ರವೇಶಿಸಿ ವ್ಯಕ್ತಿಯನ್ನು ಬಲತ್ಕಾರವಾಗಿ ನಗ್ನಗೊಳಿಸಿ ಯುವತಿಯರ ಜೊತೆ ವೀಡಿಯೋ ಹಾಗೂ ಫೋಟೋ ತೆಗೆದು ರೂ 3 ಲಕ್ಷ ಹಣಕ್ಕೆ ಬ್ಲಾಕ್ ಮೇಲ್ ಮಾಡಿ ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್ಬುಕ್, ಯೂಟ್ಯೂಬ್ ಗಳಲ್ಲಿ ಹರಿದುಬಿಡುವುದಾಗಿ ಬೆದರಿಕೆ ಹಾಕಿ ನಂತರ ಸಂತ್ರಸ್ತ ವ್ಯಕ್ತಿಯಿಂದ ರೂ 3 ಲಕ್ಷ ಹಣವನ್ನು ಸುಲಿಗೆ ಮಾಡಿದ್ದು, ಈ ಬಗ್ಗೆ ಸಂತ್ರಸ್ತ ವ್ಯಕ್ತಿಯು ನೀಡಿದ ದೂರಿನಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಶಾಂತಾರಾಮ್ ರವರ ನೇತ್ರತ್ವದ ತಂಡ ಈ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳಾದ ಮೂಡಿಗೆರೆ ನಿವಾಸಿ ರವಿ ಗೌಡ (೪೨), ಬಿಜೈ ನಿವಾಸಿ ಪ್ರೀತೆಶ್ (೩೬), ಪಡೀಲ್ ನಿವಾಸಿ ರಮೇಶ್ ಎಂದು ಗುರುತಿಸಲಾಗಿದೆ.
ಆರೋಪಿಗಳ ಪೈಕಿ ರವಿ ಗೌಡ ಎಂಬಾತನು ಈ ಹಿಂದೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಹಾಗೂ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದನು. ಆರೋಪಿಗಳು ಇತರ ಕೆಲವು ವ್ಯಕ್ತಿಗಳಿಗೆ ಇದೇ ರೀತಿ ಹನಿಟ್ಯ್ರಾಪ್ ಪ್ರಕರಣದಲ್ಲಿ ಭಾಗಿಯಾಗಿರುವ ಸಾಧ್ಯತೆಯಿದ್ದು, ಈ ಬಗ್ಗೆ ತನಿಖೆ ಮುಂದುವರಿಯುವುದು. ಆರೋಪಿಗಳ ವಶದಿಂದ ನಗದು ಹಣ ರೂ. 1,50,000/- ಮತ್ತು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಮಂಗಳೂರು ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಶಾಂತರಾಮ್, ಪಿಎಸ್ಐ ಶ್ಯಾಮ್ ಸುಂದರ್, ಎಎಸ್ಐ ಶಶಿಧರ ಶೆಟ್ಟಿ, ಹರೀಶ್ ಹಾಗೂ ಸಿಬ್ಬಂದಿಯರವರಾದ ರಾಮ ಪೂಜಾರಿ, ಗಣೇಶ್, ಚಂದ್ರಶೇಖರ, ಶೀನಪ್ಪ, ಚಂದ್ರ, ಸುಬ್ರಹ್ಮಣ್ಯ, ಚಂದ್ರಹಾಸ, ಯೋಗೀಶ್, ರಾಜೇಂದ್ರ ಪ್ರಸಾದ್, ಅಬ್ದುಲ್ ಜಬ್ಬಾರ್, ಮಣಿ, ಪ್ರಶಾಂತ್ ಶೆಟ್ಟಿ, ಅಶಿತ್ ಡಿ ಸೋಜಾ, ತೇಜಕುಮಾರ್ ಹಾಗೂ ರಿತೇಶ್ ರವರುಗಳು ಇದ್ದು, ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.