ಮಸೀದಿಗಳು ಸಾಮಾಜಿಕ ಬದ್ಧತೆಯ ಕೇಂದ್ರಗಳಾಗಲಿ ; ಮೌಲನಾ ಉಬುದೆಲ್ಲಾ ನದ್ವಿ
ಉಡುಪಿ: ಮಸೀದಿಗಳು ಕೇವಲ ನಮಾಝಿಗೆ ಸೀಮಿತವಾಗಿರದೆ ಸಾಮಾಜಿಕ ಬದ್ದತೆಯ ಕಾರ್ಯಕ್ರಮಗಳ ಕೇಂದ್ರಗಳಾಗಬೇಕು ಅಲ್ಲದೆ ಸಮಾಜದಲ್ಲಿ ಶಾಂತಿ ಸ್ಥಾಪಿಸುವವರ ಜೊತೆ ಕೈಜೋಡಿಸಬೇಕು ಎಂದು ಕುಂದಾಪುರ ಕಂಡ್ಲೂರಿನ ಝೀಯಾ ಏಜುಕೇಶನ್ ಟ್ರಸ್ಟ್ ಇದರ ಸ್ಥಾಫಕ ಮೌಲನಾ ಉಬುದೆಲ್ಲಾ ನದ್ವಿ ಅವರು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಉದ್ಯಾವರ ಪೇಟೆಯ ಸಮೀಪ ನವೀಕೃತಗೊಂಡಿರುವ ಸಿದ್ದಿಕ್-ಎ-ಅಕ್ಬರ್ ಜಾಮೀಯಾ ಮಸೀದಿಯ ಉದ್ಘಾಟನೆಯ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಪ್ರವಾದಿ ಕಾಲದಲ್ಲಿ ಮಸೀದಿಗಳು ಬಡವರ, ನಿರ್ಗತಿಕರ ಕಷ್ಟಗಳಿಗ ಸ್ಪಂದಿಸುವ ಕೇಂದ್ರಗಳಾಗಿದ್ದವು. ಅಲ್ಲದೆ ಅನ್ಯಧರ್ಮಿಯರಿಗೆ ಉಳಿದುಕೊಳ್ಳುವ ಆಶ್ರಯ ತಾಣಗಳಾಗಿದ್ದವು. ಒಟ್ಟಿನಲ್ಲಿ ಮಸೀದಿ ಸಮಾಜದ ಸರ್ವ ಚಟುವಟಿಕೆಗಳೊಂದಿಗೆ ನಿಕಟ ಸಂಬಂಧ ಇಟ್ಟುಕೊಂಡಿದ್ದವು. ಈ ನಿಟ್ಟಿನಲ್ಲಿ ಪ್ರಸ್ತುತ ಶಾಂತಿ, ಸುವ್ಯವಸ್ಥೆ ಕಾಪಾಡುವವರೊಂದಿಗೆ ಕೈಜೋಡಿಸಿ ಸಾಮಾಜಿಕ ಕಳಕಳಿಯ ಮಸೀದಿ ನಿರ್ಮಾಣ ಮಾಡೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಸೀದಿಯ ಗೌರಾವಧ್ಯಕ್ಷ ಹಾಗೂ ಹಲಿಮಾ ಸಾಬ್ಜು ಚಾರೀಟೇಬಲ್ ಟ್ರಸ್ಟ್ ಇದರ ಅಬ್ದುಲ್ ಜಲೀಲ್ ಸಾಹೇಬ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ದಾವಣಗೆರೆ ಪೂರ್ವ ವಲಯದ ಐಜಿಪಿ ಡಾ ಎಂ ಎ ಸಲೀಮ್, ಉದ್ಯಾವರ ಜಾಮೀಯ ಮಸೀದಿಯ ಇಮಾಮ್ ಅಬ್ದುಲ್ ರಶೀದ್ ರೆಹಮಾನಿ, ಉದ್ಯಾವರ ಜಾಮೀಯಾ ಮಸೀದಿಯ ಇಮಾಮ್ ಮೌಲಾನಾ ಅಬ್ದುಲ್ ರಶೀದ್ ರೆಹಮಾನಿ, ಉದ್ಯಾವರ ಸೈಂಟ್ ಝೇವಿಯರ್ ಚರ್ಚಿನ ಧರ್ಮಗುರುಗಳಾದ ವಂ ರೋಕ್ ಡಿಸೋಜಾ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧೀ ನಿಗಮದ ಅಧ್ಯಕ್ಷರಾದ ಎಂ ಎ ಗಫೂರ್, ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ ಬಾಬು, ಕಾಪು ಮಾಜಿ ಶಾಸಕರಾದ ಲಾಲಾಜಿ ಆರ್. ಮೆಂಡನ್, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಗಂಧಿ ಶೇಖರ್, ಉಪಾಧ್ಯಕ್ಷ ರಿಯಾಝ್ ಪಳ್ಳಿ, ಮಲ್ಪೆಯ ಉದ್ಯಮಿ ಎಫ್ ಎಂ ಯಾಕುಬ್ ಖಾನ್, ಮಸೀದಿಯ ಅಧ್ಯಕ್ಷರಾದ ಅಫ್ಜಲ್ ರಶೀದ್, ಉದ್ಯಾವರ ಮುಸ್ಲಿಂ ಯಂಗ್ ಮೇನ್ಸ್ ಅಸೋಶಿಯೇಶನ್ ಅಧ್ಯಕ್ಷ ಮಹಮ್ಮದ್ ಸುಹೈಲ್ ಭಾಗವಹಿಸಿದ್ದರು.
ಮಸೀದಿಯ ಪ್ರಧಾನ ಕಾರ್ಯದರ್ಶಿ ಖಾಲಿಕ್ ಹೈದರ್ ಸ್ವಾಗತಿಸಿ, ಮೌಲಾನ ಮಹಮ್ಮದ್ ಅಲಿ ಕಿರಾಅತ್ ಪಠಿಸಿದರು. ಅನ್ಸಾರ್ ಅಝೀಝ್ ವಂದಿಸಿದರು. ಅಬಿದ್ ಆಲಿ ಕಾರ್ಯಕ್ರಮ ನಿರೂಪಸಿದರು.
ಆಲ್ ಹಾಜ್ ಅಬ್ದುಲ್ ಜಲೀಲ್ ಸಾಹೇಬ್ ಅವರ ಗೌರವಾಧ್ಯಕ್ಷತೆಯಲ್ಲಿ ಮಸೀದಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಬ್ದುಲ್ ಸತ್ತಾರ್ ಅಝೀಜ್ ಮತ್ತು ಆಡಳಿತ ಮಂಡಳಿಯ ಸರ್ವ ಸದಸ್ಯರ ಮುತುವರ್ಜಿಯಲ್ಲಿ ಹಾಗೂ ಉದ್ಯಾವರ ಮುಸ್ಲಿಂ ಯುನಿಟಿ ದುಬೈ ಯುಎಇ ಮತ್ತು ಊರ ದಾನಿಗಳ ಸಹಕಾರದೊಂದಿಗೆ ಕೇವಲ 8 ತಿಂಗಳ ಅವಧಿಯಲ್ಲಿ ವಿಸ್ತಾರವಾದ ಮಸೀದಿಯನ್ನು ಆಕರ್ಷಕವಾಗಿ ನಿರ್ಮಿಸಲಾಗಿದೆ. ಪ್ರಾರ್ಥನೆ ಸಲ್ಲಿಸುವ ಸ್ಥಳವನ್ನು ಮರದ ಕೆತ್ತನೆಯಿಂದ ವಿಶೇಷವಾಗಿ ನಿರ್ಮಿಸಲಾಗಿದ್ದು, ಮಸೀದಿಯ ಮೇಲ್ಭಾಗದಲ್ಲಿ ರಚಿಸಲಾದ ಗೋಲಗುಮ್ಮಟ ನೋಡುಗರನ್ನು ಆಕರ್ಷಿಸುಸ್ತಿದೆ.ಮಸೀದಿಯಲ್ಲಿ ಮಹಿಳೆಯರಿಗೆ ಪ್ರಾರ್ಥನೆ ಸಲ್ಲಿಸಲು ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗಿದೆ.