ಮಸ್ಕತ್ ಕರ್ನಾಟಕ ಸಂಘದ ಯುಗಾದಿ ಸಂಭ್ರಮ!
“ಎಲ್ಲಾದರೂ ಇರು ಎಂತಾದರೂ ಇರು
ಎಂದೆಂದಿಗೂ ನೀ ಕನ್ನಡವಾಗಿರು…” ಎಂಬ ಕವಿವಾಣಿಯನ್ನು ಅಕ್ಷರಷ ಪಾಲಿಸಿ ಓಮಾನಿನ ಮರುಭೂಮಿಯಲ್ಲಿ ಕನ್ನಡದ ಕಂಪನ್ನು ಹರಿಸುತ್ತಿರುವವರು ಮಸ್ಕತ್ ಕನ್ನಡಿಗರು. ಅವರಿಗೆ ಈ ಕಾಯಕಕ್ಕೆ ಅವಕಾಶವನ್ನು ಇಲ್ಲಿನ ಭಾರತೀಯ ಸಾಮಾಜಿಕವೇದಿಕೆಯ ಕರ್ನಾಟಕ ವಿಭಾಗ ಒದಗಿಸುತ್ತಿದೆ.
ಇತ್ತೀಚೆಗೆ ಆಯ್ಕೆಯಾದ ಹೊಸ ಆಡಳಿತ ಮಂಡಳಿಯ ಮೊದಲ ಕಾರ್ಯಕ್ರಮವಾಗಿ 28/04/2017 ರ ಶುಕ್ರವಾರದಂದು ಮಸ್ಕತ್ತಿನಲ್ಲಿ “ಯುಗಾದಿ ಸಂಭ್ರಮ” ಕಾರ್ಯಕ್ರಮವನ್ನು ಇಲ್ಲಿನ ರುವಿಯಲ್ಲಿರುವ ಅಲ್ ಮಾಸಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಪ್ರಯುಕ್ತ ಸಂಘದ ವಿವಿಧ ತಂಡಗಳಿಂದ ನಾಡಗೀತೆಯ ಗಾಯನ,ಜಾನಪದ ನೃತ್ಯ , ಭರತನಾಟ್ಯ, ಯಕ್ಷಗಾನ, ಕಿರುನಾಟಕ, -ಮುಂತಾದ ಕಾರ್ಯಕ್ರಮಗಳಿಗೆ ಭರದಿಂದ ಅಭ್ಯಾಸ ನಡೆದಿದೆ. ಬೆಳಿಗ್ಗೆಯಿಂದ ಮದ್ಯಾಹ್ನದ ತನಕ ನಡೆಯುವ ಸಾಂಸ್ಕ್ರತಿಕ ಕಾರ್ಯಕ್ರಮಗಳ ಬಳಿಕ ಸದಸ್ಯರಿಗೆ ಸಾಂಪ್ರದಾಯಿಕ ಹಬ್ಬದ ಔತಣವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮಕ್ಕಾಗಿ ಸಂಘದ ಸದಸ್ಯರು ಉತ್ಸಾಹದಿಂದ ಸಿದ್ಧತೆ ನಡೆಸುತ್ತಿದ್ದಾರೆ , ಈಗಷ್ಟೇ ಶಾಲೆಯ ಪರೀಕ್ಷೆಗಳನ್ನು ಮುಗಿಸಿ ಬಿಡುವಿನಲ್ಲಿರುವ ಮಕ್ಕಳು ಆಸ್ಥೆಯಿಂದ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಸಂಘದ ಪ್ರಸಕ್ತ ಅಧ್ಯಕ್ಷರಾದ ಶ್ರೀ ಕರುಣಾಕರ್ ರಾವ್ ಅವರು ತಿಳಿಸಿದ್ದಾರೆ.
ವರದಿ- ಸುಧಾ ಶಶಿಕಾಂತ್