ಮಹಿಳಾ ದಿನಾಚರಣೆಯಲ್ಲಿ ಮತದಾನ ಜಾಗೃತಿ

Spread the love

ಮಹಿಳಾ ದಿನಾಚರಣೆಯಲ್ಲಿ ಮತದಾನ ಜಾಗೃತಿ

ಉಡುಪಿ :ಎಲ್ಲ ಕ್ಷೇತ್ರಗಳಲ್ಲೂ ಮಹಿಳೆ ಇಂದು ತನ್ನ ಸಾಧನೆಯನ್ನು ದಾಖಲಿಸಿದ್ದು, ಮೀಸಲಾತಿಯಿಂದಾಗಿ ರಾಜಕೀಯದಲ್ಲೂ ಮಹಿಳೆಯರು ಪುರುಷರಿಗೆ ಸಮಾನವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶೀಲಾ ಕೆ ಶೆಟ್ಟಿ ಹೇಳಿದರು.

ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಜಿಲ್ಲೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟ ಹಾಗೂ ಸ್ತ್ರೀಶಕ್ತ ಒಕ್ಕೂಟ ಉಡುಪಿ ಜಿಲ್ಲೆ, ಪರ್ಯಾಯ ಶ್ರೀ ಪಲಿಮಾರು ಮಠ ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ರಾಜಕೀಯ ಕ್ಷೇತ್ರದಲ್ಲಿ ಇಂದು ಮಹಿಳೆಯರಿಗೆ ಅವಕಾಶಗಳ ಬಾಗಿಲು ತೆರೆದಿದ್ದು, ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಶೇ.33 ರಷ್ಟು ಮೀಸಲಾತಿ ನೀಡಲಾಗಿದೆ. ಮಹಿಳೆಯರಿಗೆ ಮೀಸಲಾಗಿರಿಸಿದ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಬಂದ ಅವಕಾಶವನ್ನು ಸದ್ಬಳಕೆ ಮಾಡಬೇಕು ಎಂದರು.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಮಹಿಳೆಯರು ಹಕ್ಕುಗಳನ್ನು ಬಳಸಿಕೊಂಡು ತಮ್ಮ ಕರ್ತವ್ಯವನ್ನು ನಿರ್ವಹಿಸಿದರೆ ಸಬಲೀಕರಣ ಸಾಧ್ಯ ಎಂದರು. ನಮ್ಮ ಸಂವಿಧಾನದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಲಾಯಿತು. ಆದರೆ ಮತದಾನದ ಹಕ್ಕನ್ನು ಮಹಿಳೆಯರು ಎಷ್ಟು ಕರ್ತವ್ಯ ನಿಷ್ಠೆಯಿಂದ ಚಲಾಯಿಸಿದ್ದೇವೆ ಎಂದು ಯೋಚಿಸಬೇಕು. ಏಕೆಂದರೆ ಮಹಿಳೆಯರು ಮತದಾನದ ಹಕ್ಕನ್ನು ಚಲಾಯಿಸದೆ ನಮಗೆ ಶೋಷಣೆಯಾಗುತ್ತಿದೆ; ನಮ್ಮ ಹಕ್ಕುಗಳು ನಮಗೆ ಸಿಗುತ್ತಿಲ್ಲ ಎಂದು ದೂರುವುದರಿಂದ ಏನೂ ಪ್ರಯೋಜನವಿಲ್ಲ. ಹಾಗಾಗಿ ಮಹಿಳೆಯರು ಸಮಾಜದಲ್ಲಿ ಸರಿಸಮಾನವಾಗಿರಲು ಹಾಗೂ ತಮ್ಮ ಹಕ್ಕು ಪಡೆದುಕೊಳ್ಳಲು ನೈತಿಕ ಮತದಾನದ ಮೂಲಕ ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಮತ ಚಲಾಯಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಶಿವಾನಂದ ಕಾಪಶಿ ಮತದಾನದ ಪ್ರತಿಜ್ಞಾವಿಧಿಯನ್ನು ಬೋಧಿಸಿ, ಮತದಾನದ ಪ್ರಕ್ರಿಯೆ, ಎಪಿಕ್ ಕಾರ್ಡ್, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಖಾತರಿಪಡಿಸಿಕೊಳ್ಳಿ ಎಂದರು. ಚುನಾವಣಾ ಆಯೋಗದ ವೆಬ್‍ಸೈಟಿನಲ್ಲಿ ಅಥವಾ ಎಸ್.ಎಂ.ಎಸ್ ಮೂಲಕ ತಮ್ಮ ಹೆಸರು ಇರುವುದನ್ನು ಪರಿಶೀಲಿಸಿಕೊಳ್ಳಬೇಕು. ಎಸ್.ಎಂ.ಎಸ್ ಮಾಡುವವರು 9731979899 ಈ ನಂಬರಿಗೆ ತಮ್ಮ ಎಪಿಕ್ ನಂಬರ್ ಹಾಕಿ ಮೆಸೇಜ್ ಮಾಡಿ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎಂಬುವುದನ್ನು ಖಚಿತಪಡಿಸಿಕೊಳ್ಳಬಹುದು ಎಂದರು.

ಪ್ರೊ. ನಿತ್ಯಾನಂದ ಅವರು ‘ಮಹಿಳಾ ಸಬಲೀಕರಣ ಮತ್ತು ನೈತಿಕ ಮತದಾನ’ ದ ಕುರಿತು ಮಾಹಿತಿ ನೀಡಿ, ಮಹಿಳೆಯರಿಂದ ಎಲ್ಲವೂ ಸಾಧ್ಯ. ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಮಹಿಳೆಯರು ನೀಡಿದ ಕೊಡುಗೆಯನ್ನು ವಿವರಿಸಿದರು. ನೈತಿಕ ಮತದಾನದ ಮಹತ್ವವನ್ನೂ ವಿವರಿಸಿದರು.

‘ಮಹಿಳೆ ಮತ್ತು ಕಾನೂನು ಮಾಹಿತಿ’ ಕುರಿತು ಜ್ಯೋತಿ ಪಿ ನಾಯಕ್ ಕಾನೂನು ಅಧಿಕಾರಿ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ ಬಾಬು ಅವರು ಮಹಿಳಾ ದಿನಾಚರಣೆಯ ಶುಭಾಶಯವನ್ನು ತಿಳಿಸಿದರು. ತಾಲೂಕು ಪಂಚಾಯತ್ ಅಧ್ಯಕ್ಷರಾದ ನಳಿನಿ ಪ್ರದೀಪ್ ಅವರು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿಗಳ ಪಟ್ಟಿಯೊಂದಿಗೆ ಇತರ ಕ್ಷೇತ್ರಗಳ ಮಹಿಳಾ ಸಾಧಕರನ್ನು ಸ್ಮರಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಲತಾ, ವಸಂತಿ ರಾವ್, ಸರಳ ಕಾಂಚನ, ರಾಧದಾಸ್, ಧನಲಕ್ಷ್ಮಿ, ಎಡಿಷನಲ್ ಎಸ್ ಪಿ ಕುಮಾರ ಚಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಗ್ರೇಸಿ ಎಲ್.ಗೊನ್ಸಾಲ್ವಿಸ್ ಉಪಸ್ಥಿತರಿದ್ದರು.


Spread the love