Home Mangalorean News Kannada News ಮಹಿಳಾ ಪರ ಯೋಜನೆಗಳನ್ನು ಸಾಮಾನ್ಯರಿಗೂ ತಲುಪಿಸಲು ಡಿಸಿ ಸಸಿಕಾಂತ್ ಸೆಂಥಿಲ್‍ ಸೂಚನೆ 

ಮಹಿಳಾ ಪರ ಯೋಜನೆಗಳನ್ನು ಸಾಮಾನ್ಯರಿಗೂ ತಲುಪಿಸಲು ಡಿಸಿ ಸಸಿಕಾಂತ್ ಸೆಂಥಿಲ್‍ ಸೂಚನೆ 

Spread the love

ಮಹಿಳಾ ಪರ ಯೋಜನೆಗಳನ್ನು ಸಾಮಾನ್ಯರಿಗೂ ತಲುಪಿಸಲು ಡಿಸಿ ಸಸಿಕಾಂತ್ ಸೆಂಥಿಲ್‍ ಸೂಚನೆ 

ಮಂಗಳೂರು :ಮಹಿಳೆಯರಿಗೆ ಸಂಬಂಧಿಸಿದ ಸರ್ಕಾರದ ಪ್ರತಿಯೊಂದು ಯೋಜನೆಯ ಪ್ರಯೋಜನ ಪ್ರತಿಯೊಬ್ಬ ಮಹಿಳೆಗೂ ದೊರಕಬೇಕು. ಯಾವುದೇ ಒಬ್ಬ ಮಹಿಳೆಯು ವಂಚಿತರಾಗದಂತೆ ಮತ್ತು ಅವರಿಗೆ ಸರಿಯಾದ ಸಮಯದಲ್ಲಿ ದೊರಕುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲೆ ಇದೆ. ಹಾಗಾಗಿ ಶಿಸ್ತುಬದ್ಧವಾಗಿ ಕರ್ತವ್ಯ ನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‍ರವರು ಅಧಿಕಾರಿಗಳಿಗೆ ಸೂಚಿಸಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕು ಮಟ್ಟದ ಅಧಿಕಾರಿಗಳಿಂದ ಮಹಿಳೆಯರಿಗೆ ಸಂಬಂಧಿಸಿದ ಕೂಂದುಕೊರತೆ ಮತ್ತು ಸಮಸ್ಯೆಗಳ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಸರ್ಕಾರದಿಂದ ಲಭಿಸುವ ಎಲ್ಲಾ ಯೋಜನೆಗಳು ದೊರಕುವಂತೆ ಮಾನವೀಯ ದೃಷ್ಠಿಕೊನದಲ್ಲಿ ಮಾಡಬೇಕು. ಸಾಮಾನ್ಯ ಮಹಿಳೆಯರಿಗೂ ಸರಕಾರದ ಯೋಜನೆಗಳ ಲಾಭ ದೊರಕುವಂತೆ ಎಲ್ಲಾ ಜಿಲ್ಲಾ ಮಟ್ಟದ ಸಮಿತಿಗಳು ಮಹಿಳಾ ಸಬಲೀಕರಣ ಹಾಗೂ ಮಹಿಳೆಯರ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಸುಂದರ ಪೂಜಾರಿ ಮಾತನಾಡಿ, ಪ್ರಧಾನ ಮಂತ್ರಿ ಮಹಿಳಾ ಶಕ್ತಿ ಕೇಂದ್ರ ಜಿಲ್ಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅದರಲ್ಲಿ 3ಜನ ಮಹಿಳೆಯರನ್ನು ಸಂಯೋಜಕರಾಗಿ ನೇಮಿಸಿ ಅವರ ಜೊತೆ ಮಹಿಳಾ ಕಲ್ಯಾಣ ಅಧಿಕಾರಿಯನ್ನು ಮಹಿಳಾ ಯೋಜನೆಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯ ಪ್ರಾರಂಭವಾಗಿದೆ ಎಂದು ಹೇಳಿದರು.

ಈಗಾಗಲೇ ಸುಮಾರು 20ಕ್ಕೂ ಹೆಚ್ಚು ಮಹಿಳೆಯರಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳಾಗಿವೆ. ಅದರ ಜೊತೆಗೆ ಜಿಲ್ಲಾ ಮಟ್ಟದಲ್ಲಿ ಸಖೀ ಕೇಂದ್ರದಲ್ಲಿ ಸಂತ್ರಸ್ತ ಮಹಿಳೆಯರಿಗೆ ಕಾನೂನು ನೆರವು, ಚಿಕಿತ್ಸೆ, ಭದ್ರತೆ ಮತ್ತು ಒಂದೇ ಸೂರಿನ ಅಡಿಯಲ್ಲಿ ಮೂಲಸೌಕರ್ಯ ದೊರಕುತ್ತಿದೆ. ಸಖೀಕೇಂದ್ರ ಕಟ್ಟಡ ನಿರ್ಮಾಣಕ್ಕೆ ರೂ. 48 ಲಕ್ಷ ಬಿಡುಗಡೆ ಗೊಂಡಿದ್ದು, ಸ್ವಾದಾರ ಗೃಹದಲ್ಲಿ 13 ಜನ ಮಹಿಳಾ ಮಾನಸಿಕ ರೋಗಿಗಳಿದ್ದಾರೆ. ಈ ರೋಗಿಗಳಿಗೆ ಎಲ್ಲಾ ರೀತಿಯ ಚಿಕಿತ್ಸೆಗಳು ಲಭಿಸುತ್ತಿದೆ. ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಒಂದು ಗಂಡು ಹಾಗೂ 5 ಜನ ಹೆಣ್ಣು ಮಕ್ಕಳ ಸೇರಿದಂತೆ ಒಟ್ಟು 6 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿದೆ ಎಂದರು.

ಸಭೆಯಲ್ಲಿ ಕುಟುಂಬ ಕಲ್ಯಾಣ ಅಧಿಕಾರಿ ಸಿಖಂದರ್ ಪಾಶಾ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು, ಎನ್.ಜಿ.ಓ ಗಳು, ಮಹಿಳಾ ಸಂಘ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.


Spread the love

Exit mobile version