ಮಹಿಳಾ ಸಬಲೀಕರಣಕ್ಕೆ ಮಹಿಳಾ ಒಗ್ಗಟ್ಟು ಅಗತ್ಯ; ವಿದ್ಯಾ ದಿನಕರ್

Spread the love

ಮಹಿಳಾ ಸಬಲೀಕರಣಕ್ಕೆ ಮಹಿಳಾ ಒಗ್ಗಟ್ಟು ಅಗತ್ಯ; ವಿದ್ಯಾ ದಿನಕರ್

ಮೂಡುಬಿದ್ರೆ: ದೌರ್ಜನ್ಯಮುಕ್ತ ಸ್ವಾಸ್ಥ್ಯ ಸಮಾಜ ಕಟ್ಟುವಲ್ಲಿ ಸರಕಾರ ಮಹಿಳೆಯರ ಪರವಾಗಿ ನಿಂತು ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಬೇಕು. ಮಾತ್ರವಲ್ಲ ಮಹಿಳೆಯರಿಗೆ ನೀಡಿದ ಮತ್ತು ನೀಡುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಸ್ತ್ರೀಯರು ಸಕ್ರಿಯರಾಗಬೇಕು ಎಂದು  ಚಿಂತಕಿ ವಿದ್ಯಾ ದಿನಕರ್ ಹೇಳಿದರು.

ಆಳ್ವಾಸ್ ಪದವಿ ಕಾಲೇಜಿನ ವುಮೆನ್ ಡೆವೆಲಪ್‍ಮೆಂಟ್‍ಸೆಲ್ ವತಿಯಿಂದ ಮಹಿಳಾ ದಿನಾಚರಣೆಯ ಪ್ರಯುಕ್ತ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.

ಮಹಿಳೆಯು ತಾನು ಸಬಲಳಾಗಿದ್ದರೂ, ದೊರಕುವ ಅವಕಾಶಗಳಿಂದ ಹಿಂಜರಿಯುತ್ತಿರುವುದರಿಂದ  ಬೆಳವಣಿಗೆಯ ಮೈಲಿಗಲ್ಲನ್ನು ದಾಟುವಲ್ಲಿ ವಿಫಲಳಾಗುತ್ತಿದ್ದಾಳೆ. ಹೆಣ್ಣಿನ ಜೀವನ ಕೇವಲ ಅಡುಗೆ ಕೋಣೆಗೆ ಸೀಮಿತವಾದುದಲ್ಲ. ಅವಳು ಅಂತರಾಷ್ಟ್ರೀಯ ಮಟ್ಟಕ್ಕೂ ಏರಬೇಕಿದೆ. ಜೀವನದಲ್ಲಿ ಎದುರು ಬರುವ ಅಡ್ಡಿ, ಆತಂಕ ಹಾಗೂ ಅಡೆತಡೆಗಳನ್ನು ದೂರೀಕರಿಸಿ ಸಧೈರ್ಯದಿಂದ ಮುನ್ನುಗ್ಗಿದರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ ಪರಸ್ಪರ ಒಬ್ಬರನ್ನೊಬ್ಬರು ಅರಿತು ಬದುಕಿದರೆ ಮಾತ್ರ ಜೀವನದಲ್ಲಿ ಸಂತಸವನ್ನು ಕಂಡುಕೊಳ್ಳಬಹುದು. ಕುಟುಂಬದ ಸುಗಮವಾದ ಮುನ್ನಡೆಗೆ ಹೆಣ್ಣಿನ ಪಾತ್ರ ಅತ್ಯಂತ ಹಿರಿದಾದುದು. ಸಣ್ಣ ಪುಟ್ಟ ಸಮಸ್ಯೆಗಳನ್ನು ವೈಭವೀಕರಿಸದೆ  ಸ್ಥಿತ ಪ್ರಜ್ಞೆಯಿಂದ ಮುಂದುವರಿದಲ್ಲಿ ಸಂಸಾರವು ಆನಂದಮಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಆಳ್ವಾಸ್ ಪತ್ರಿಕೋದ್ಯಮ ವಿಭಾಗದಿಂದ ವಿದ್ಯಾರ್ಥಿಗಳು ತಯಾರಿಸಿದ ಕಿರುಚಿತ್ರ ಪ್ರದರ್ಶನ ಮಾಡಲಾಯಿತು. ಆಳ್ವಾಸ್ ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥೆ ಡಾ. ಮೌಲ್ಯ ಜೀವನ್ ರಾಂ,  ವುಮೆನ್ ಡೆವೆಲಪ್‍ಮೆಂಟ್‍ಸೆಲ್‍ನ  ಸಂಯೋಜಕಿ ಶಾಝಿಯಾ ಉಪಸ್ಥಿತರಿದ್ಧರು. ಉಪನ್ಯಾಸಕಿ  ನೂರಜಹನ್ ಸ್ವಾಗತಿಸಿ, ಪತ್ರಿಕೋದ್ಯಮ ವಿದ್ಯಾರ್ಥಿನಿ ವಿಭಾ ಡೋಂಗ್ರೆ ಕಾರ್ಯಕ್ರಮ ನಿರೂಪಿಸಿದರು.


Spread the love