ಮಹಿಳೆಗೆ ಚುಡಾಯಿಸಿದ ಪ್ರಕರಣದ ಆರೋಪಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಮೃತ್ಯು

Spread the love

ಮಹಿಳೆಗೆ ಚುಡಾಯಿಸಿದ ಪ್ರಕರಣದ ಆರೋಪಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಮೃತ್ಯು

ಬ್ರಹ್ಮಾವರ: ಮಹಿಳೆಗೆ ಚುಡಾಯಿಸಿದ ಆರೋಪದಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಗೆ ಕರೆ ತಂದಿದ್ದ ಕೇರಳ ಮೂಲದ ಕಾರ್ಮಿಕರೊಬ್ಬರು ಇಂದು ನಸುಕಿನ ವೇಳೆ ಸೆಲ್ ನ ಬಾತ್ ರೂಮಿನೊಳಗೆ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮೃತರನ್ನು ಕೇರಳ ರಾಜ್ಯ ಕೊಲ್ಲಂ ಮೂಲದ ಬಿಜು ಮೋಹನ್(42) ಎಂದು ಗುರುತಿಸಲಾಗಿದೆ. ಇವರು ಹಂಗಾರಕಟ್ಟೆ ಮೀನು ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಮೂರು ದಿನಗಳ ಹಿಂದೆಯಷ್ಟೆ ಇಲ್ಲಿಗೆ ಕೆಲಸಕ್ಕೆ ಸೇರಿಕೊಂಡಿದ್ದರು. ಸೂರಬೆಟ್ಟು ಎಂಬಲ್ಲಿನ ಬಾಡಿಗೆ ಮನೆಯಲ್ಲಿ ವಾಸವಿದ್ದ ಬಿಜು ಮೋಹನ್, ನ.9ರಂದು ರಾತ್ರಿ ವೇಳೆ ಅಲ್ಲೇ ಸಮೀಪದ ಮನೆಯಲ್ಲಿ ವಾಸವಿದ್ದ ಮಹಿಳೆಯನ್ನು ಚುಡಾಯಿಸಿದ್ದರು ಎಂದು ಆರೋಪಿಸಲಾಗಿದೆ.

ಆ ವೇಳೆ ಮಹಿಳೆ ಬೊಬ್ಬೆ ಹಾಕಿದ್ದು, ಸ್ಥಳೀಯರು ಜಮಾಯಿಸಿ ಬಿಜು ಮೋಹನ್ ನನ್ನು ಹಿಡಿದು ಮನೆಯೊಳಗೆ ಕೂಡಿ ಹಾಕಿದ್ದರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದು, ಠಾಣೆಗೆ ಕರೆದೊಯ್ದಿದ್ದರು ಎಂದು ತಿಳಿದುಬಂದಿದೆ.

ಮದ್ಯ ಸೇವಿಸಿದ್ದರೆನ್ನಲಾದ ಬಿಜು ಮೋಹನ್ ರನ್ನು ಸೆಲ್ ನಲ್ಲಿ ಇರಿಸಲಾಗಿದ್ದು, ಇಂದು ನಸುಕಿನ ವೇಳೆ 3:30ರ ಸುಮಾರಿಗೆ ಆತ ಸಮೀಪದ ಬಾತ್ ರೂಮಿನಲ್ಲಿ ಕುಸಿದುಬಿದ್ದಿರುವುದು ಕಂಡುಬಂದಿದೆ. ತಕ್ಷಣ ಆತನನ್ನು ಬ್ರಹ್ಮಾವರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು, ಪರೀಕ್ಷಿಸಿದಾಗ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಅವರು   ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕೇರಳ ಮೂಲದ ವ್ಯಕ್ತಿಯ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿ ಮೃತರ ಮನೆಯವರಿಗೆ ಮಾಹಿತಿ ನೀಡಲಾಗಿದೆ. ಕೇರಳದಿಂದ ಆಗಮಿಸುತ್ತಿರುವ ಮೃತರ ಕುಟುಂಬಸ್ಥರು ಮುಂದೆ ನೀಡುವ ದೂರನ್ನು ಆಧರಿಸಿ ಕ್ರಮ ಜರುಗಿಸಲಾಗುವುದು ಎಂದು  ತಿಳಿಸಿದ್ದಾರೆ.

ಇದೊಂದು ಲಾಕಪ್ ಡೆತ್ ಪ್ರಕರಣ ಆಗಿರುವುದರಿಂದ ಇದರ ತನಿಖೆಯನ್ನು ಸಿಐಡಿ ವಹಿಸಿಕೊಳ್ಳಲಿದೆ. ಮರಣೋತ್ತರ ಪರೀಕ್ಷೆಯನ್ನು ಎರಡು ತಂಡಗಳು ನೆರವೇರಿಸಲಿದ್ದು, ಅದರ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಗುವುದು. ನ್ಯಾಯಾಧೀಶರ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮಹಿಳೆ ಹಾಗೂ ಮಕ್ಕಳಿಗೆ ದೌರ್ಜನ್ಯ ಎಸಗಿದ ಆರೋಪದಲ್ಲಿ ಆರೋಪಿ ಕೇರಳ ರಾಜ್ಯದ ಕೊಲ್ಲಂ ಮೂಲದ ಬಿಜು ಮೋಹನ್ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅದರಂತೆ ಆತನನ್ನು ವಿಚಾರಣೆಗಾಗಿ ಠಾಣೆಗೆ ಕರೆತಂದು ಠಾಣೆಯ ಲಾಕಪ್ ನಲ್ಲಿ ಇರಿಸಲಾಗಿತ್ತು. ನಸುಕಿನ ವೇಳೆ ಲಾಕಪ್ ನಲ್ಲೇ ಆತ ಮೃತಪಟ್ಟಿರುವುದು ಕಂಡುಬಂದಿದೆ ಎಂದು ಎಸ್ಪಿ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments