Home Mangalorean News Kannada News ಮಹಿಳೆಯರನ್ನು ಹೀಯಾಳಿಸುವುದೇ ಕಾಂಗ್ರೆಸ್ ಸಂಸ್ಕೃತಿ: ಮಂಜುಳಾ ರಾವ್

ಮಹಿಳೆಯರನ್ನು ಹೀಯಾಳಿಸುವುದೇ ಕಾಂಗ್ರೆಸ್ ಸಂಸ್ಕೃತಿ: ಮಂಜುಳಾ ರಾವ್

Spread the love

ಮಹಿಳೆಯರನ್ನು ಹೀಯಾಳಿಸುವುದೇ ಕಾಂಗ್ರೆಸ್ ಸಂಸ್ಕೃತಿ: ಮಂಜುಳಾ ರಾವ್

ಮಂಗಳೂರು: ಮಹಿಳಾ ಶಕ್ತಿಯನ್ನು ಅವಮಾನಿಸಿ ಅಗೌರವಿಸುವುದೇ ಕಾಂಗ್ರೆಸ್‌ ಸಂಸ್ಕೃತಿ ಎಂದು ಬಿಜೆಪಿ ಮಹಿಳಾ ಮೋರ್ಚಾ ವಾಗ್ದಾಳಿ ನಡೆಸಿದೆ.

ಇಂದು ಪಕ್ಷದ ಲೋಕಸಭಾ ಚುನಾವಣೆ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ರಾವ್ ಅವರು, ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ಸಚಿವ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ಧೇಶ್ವರ ಅವರ ಬಗ್ಗೆ ಆಡಿದ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿದರು.

ಗಾಯತ್ರಿ ಸಿದ್ದೇಶ್ವರ ಅಡುಗೆ ಮಾಡುವುದಕ್ಕಷ್ಟೇ ಲಾಯಕ್ಕು ಎಂದು ಶಾಮನೂರು ಶಿವಶಂಕರಪ್ಪ ನೀಡಿದ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಕಾಂಗ್ರೆಸ್‌ ಸರಕಾರ ಬಂದಾಗಲೆಲ್ಲ ಮಹಿಳೆಯರಿಗೆ ಅವಮಾನ, ಅತ್ಯಾಚಾರದಂತಹ ಕೃತ್ಯಗಳು ಹೆಚ್ಚಾಗುತ್ತವೆ. ಅಂತಹ ದುರುಳರಿಗೆ ಕಾಂಗ್ರೆಸ್‌ ಸರಕಾರದ ಶ್ರೀರಕ್ಷೆ ಇರುವುದು ಇಂತಹ ಕೃತ್ಯಗಳು ಹೆಚ್ಚಲು ಕಾರಣ ಮಂಜುಳಾ ರಾವ್ ಹೇಳಿದರು.

ಮಹಿಳೆಯರು ಅಡುಗೆ ಮನೆಗೆ ಮಾತ್ರ ಸೀಮಿತವಾಗಿಲ್ಲ. ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರ ಮೀಸಲಾತಿ ನೀಡಿರುವುದು ಬಿಜೆಪಿ ಸರಕಾರ. ಹಿಂದೆ ವಿದೇಶಾಂಗ ಸಚಿವೆಯಾಗಿ ಅತ್ಯಂತ ಸಮರ್ಥವಾಗಿ ಕೆಲಸ ಮಾಡಿದವರು ಸುಷ್ಮಾ ಸ್ವರಾಜ್ ಬಿಜೆಪಿ ನಾಯಕಿಯಾಗಿದ್ದರು. ಅತ್ಯಂತ ಹಿಂದುಳಿದ ಬುಡಕಟ್ಟು ಸಮುದಾಯಕ್ಕೆ ಮಹಿಳೆಯೊಬ್ಬರನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿರುವುದು ಬಿಜೆಪಿ ಎಂದು ಈ ಸಸಂದರ್ಭದಲ್ಲಿ ಅವರು ನೆನಪಿಸಿದರು.

ಮಹಿಳೆಯರಿಗೆ ಬಿಜೆಪಿ ಉತ್ತಮ ಅವಕಾಶಗಳು ಮತ್ತು ಜವಾಬ್ದಾರಿಯನ್ನು ನೀಡಿದೆ. ಆದರೆ ಕಾಂಗ್ರೆಸ್‌ ಮಹಿಳೆಯನ್ನು ಅವಮಾನಿಸುತ್ತಿದೆ ಎಂದು ಅವರು ಹರಿಹಾಯ್ದರು.

ಕಾಂಗ್ರೆಸ್ ಸರಕಾರ ಗೃಹಲಕ್ಷ್ಮಿ ಹೆಸರಿನ ಯೋಜನೆ ತಂದಿದ್ದರೂ ಅದನ್ನು ಸಮರ್ಥವಾಗಿ ಜಾರಿ ಮಾಡಿಲ್ಲ. ಅಷ್ಟಕ್ಕೂ ಕುಟುಂಬದ ಪುರುಷರ ಆದಾಯಕ್ಕೇ ಕತ್ತರಿ ಹಾಕಿ ಅದನ್ನೇ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಮೂಲಕ ನೀಡಿ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿರುವುದು ಕಾಂಗ್ರೆಸ್ ಸರಕಾರ ಎಂದು ಅವರು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂಧ್ಯಾ ವೆಂಕಟೇಶ್, ಉಪ ಮೇಯರ್ ಸುನೀತಾ,, ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ, ಕೋಶಾಧಿಕಾರಿ ಸುಮನ ಶರಣ್ ಹಾಗೂ ಅಶಿತಾ ಶೆಟ್ಟಿ ಉಪಸ್ಥಿತರಿದ್ದರು.


Spread the love

Exit mobile version