ಮಹಿಳೆಯರಿಗೆ ಶಬರಿಮಲೆ ಪ್ರವೇಶ; ಮೇಲ್ಮನವಿ ಸಲ್ಲಿಸಲು ಸಂಸದ ನಳಿನ್ ಆಗ್ರಹ
ಮಂಗಳೂರು : ಶಬರಿಮಲೆಗೆ ಮಹಿಳೆಯರು ಪ್ರವೇಶಿಸಬಹುದೆಂದು ಸುಪ್ರಿಂಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಕೇರಳ ಸರ್ಕಾರ ತಕ್ಷಣ ಮೇಲ್ಮನವಿ ಸಲ್ಲಿಸಬೇಕು. ದೇಶದ ಕೋಟ್ಯಾಂತರ ಹಿಂದೂಗಳ ಭಾವನೆಯನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‍ಗೆ ಮನವರಿಕೆ ಮಾಡಬೇಕೆಂದು ದ.ಕ.ಸಂಸದ ನಳಿನ್‍ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.
ಹಿಂದೂ ಸಮಾಜ ಮಹಿಳಾ ವಿರೋಧಿಯಲ್ಲ. ಆದರೆ ಹಿಂದೂ ದೇವಾಲಯಗಳಿಗೆ ತನ್ನದೇ ಆದ ನಿಯಮವಿದ್ದು, ಭಕ್ತರ ನಂಬಿಕೆಯನ್ನು ಪ್ರಶ್ನಿಸುವುದು ಸರಿಯಲ್ಲ. ಕೇರಳ ಸರ್ಕಾರ ಶಬರಿಮಲೆಯಲ್ಲಿ ಮಹಿಳಾ ಪೊಲೀಸರ ನಿಯೋಜನೆ ಮೂಲಕ ತೀರ್ಪು ಜಾರಿಗೆ ಮುಂದಾಗಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಪರ ರಾಜ್ಯದ ಮಹಿಳಾ ಪೊಲೀಸರ ಸೇವೆ ಪಡೆಯಲು ಕೂಡಾ ಕೇರಳ ಸರ್ಕಾರ ನಿರ್ಧರಿಸಿದೆ ಎನ್ನುವ ಮಾಹಿತಿ ಇದೆ. ಯಾವುದೇ ಕಾರಣಕ್ಕೂ ಕರ್ನಾಟಕ ಸರ್ಕಾರ ಇಲ್ಲಿನ ಮಹಿಳಾ ಪೊಲೀಸರನ್ನು ಕೇರಳಕ್ಕೆ ಕಳುಹಿಸ ಬಾರದೆಂದು ಸಂಸದರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.