Home Mangalorean News Kannada News ಮಾಜಿ ಕೇಂದ್ರ ಸಚಿವ ಎಂ ವಿ ರಾಜಶೇಖರನ್ ನಿಧನ

ಮಾಜಿ ಕೇಂದ್ರ ಸಚಿವ ಎಂ ವಿ ರಾಜಶೇಖರನ್ ನಿಧನ

Spread the love

ಮಾಜಿ ಕೇಂದ್ರ ಸಚಿವ ಎಂ ವಿ ರಾಜಶೇಖರನ್ ನಿಧನ

ಬೆಂಗಳೂರು: ಬಹು ಅಂಗಾಗ ವೈಫಲ್ಯದಿಂದ ಬಳಲುತ್ರಿದ್ದ ಕೇಂದ್ರ ಸರ್ಕಾರದ ಮಾಜಿ ಸಚಿವ ಎಂ.ವಿ.ರಾಜಶೇಖರ್ ಸೋಮವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಅವರಿಗೆ 92 ವರ್ಷ ವಯಸ್ಸಾಗಿತ್ತು.ಅವರು ಪತ್ನಿ ಗಿರಿಜಾ ರಾಜಶೇಖರ್, ಇಬ್ಬರು ಪುತ್ರಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.

ಎಂ. ವಿ. ರಾಜಶೇಖರನ್ ನಿಧನಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ. ರಾಜಶೇಖರನ್ ಅವರು ಸರಳತೆ, ಸಜ್ಜನಿಕೆಯ ಪ್ರಬುದ್ಧ ರಾಜಕಾರಣಿಯಾಗಿದ್ದರು. ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಅಳಿಯನಾದ ಅವರು, ಗ್ರಾಮೀಣ ಆರ್ಥಿಕತೆಯ ವಿಚಾರದಲ್ಲಿ ಆಳವಾದ ಜ್ಞಾನ ಹೊಂದಿದ್ದರು. ಗ್ರಾಮೀಣ ಅಭಿವೃದ್ಧಿ ಕುರಿತು ಅಧ್ಯಯನ ಸಂಸ್ಥೆಯೊಂದನ್ನು ಸ್ಥಾಪಿಸಿದ್ದರು.

ಲೋಕಸಭೆ, ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಸದಸ್ಯರಾಗಿ ಅತ್ಯುತ್ತಮ ಸಂಸದೀಯ ಪಟುವಾಗಿ ಗುರುತಿಸಿಕೊಂಡಿದ್ದರು. ಡಾ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕೇಂದ್ರ ಯೋಜನೆ ಮತ್ತು ಅಂಕಿ ಅಂಶ ಖಾತೆಯ ರಾಜ್ಯ ಸಚಿವರಾಗಿ ಹೊಣೆಗಾರಿಕೆ ನಿಭಾಯಿಸಿದ್ದರು ಎಂದು ಮುಖ್ಯಮಂತ್ರಿಗಳು ಸ್ಮರಿಸಿಕೊಂಡಿದ್ದಾರೆ.

ಮೌಲ್ಯಾಧಾರಿತ ರಾಜಕಾರಣ ದಿಂದಾಗಿಯೆ ಗುರುತಿಸಿಕೊಂಡಿದ್ದರು. ಅವರ ನಿಧನ ಅತ್ಯಂತ ದುಃಖದ ಸಂಗತಿ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬ ವರ್ಗ, ಅಭಿಮಾನಿ ಬಳಗಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಎಂ.ವಿ ರಾಜಶೇಖರನ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

ಎಂ.ವಿ. ರಾಜಶೇಖರನ್ ಅವರು ಕಾಂಗ್ರೆಸ್ ಪಕ್ಷವನ್ನು ಕಟ್ಟಿದ ನಾಯಕರಲ್ಲಿ ಒಬ್ಬರು. ಪಕ್ಷಕ್ಕೆ ಅವರ ಕೊಡುಗೆ ಅಪಾರ. ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ ಹಾಗೂ ರಾಜ್ಯ ಸಭೆಯ ಸದಸ್ಯರಾಗಿದ್ದ ಅವರ ಪಕ್ಷನಿಷ್ಠೆ ಆದರ್ಶನೀಯ.

ಅವರು ಪಕ್ಷದ ಶಿಸ್ತಿನ ಸಿಪಾಯಿ. ಜೀವನದಲ್ಲೂ ಬಹಳ ಶಿಸ್ತು ಬದ್ಧರಾಗಿದ್ದರು. ಪ್ರತಿಯೊಬ್ಬರ ಜತೆಗೂ ಸ್ನೇಹದಿಂದ ಬೆರೆಯುತ್ತಿದ್ದರು. ಅಜಾತಶತ್ರುವಾಗಿ ಬದುಕಿದರು ಎಂದು ಶಿವಕುಮಾರ್ ಅವರು ಸ್ಭರಿಸಿದ್ದಾರೆ.

ಅವರ ಬದುಕು ನಮಗೆ ಆದರ್ಶ. ಅವರು ಮಾರ್ಗದರ್ಶಕರಾಗಿ ನಮ್ಮನ್ನು ಮುನ್ನಡೆಸಿದ್ದರು. ಇಂದು ಅವರನ್ನು ಕಳೆದುಕೊಂಡಿದ್ದೇವೆ. ಇದು ನಮಗೆ ತುಂಬಲಾರದ ನಷ್ಟ.

ಕೆಲ ದಿನಗಳ ಹಿಂದಷ್ಟೇ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ್ದೆ. ಅವರು ಇಂದು ನಮ್ಮನ್ನು ಅಗಲಿದ್ದಾರೆ ಎಂಬ ಸುದ್ದಿ ಕೇಳಿ ಮನಸಿಗೆ ಬಹಳ ಬೇಸರವಾಗಿದೆ. ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು, ಬೆಂಬಲಿಗರಿಗೆ ಆ ಭಗವಂತ ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಡಿ.ಕೆ. ಶಿವಕುಮಾರ್ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.


Spread the love

Exit mobile version