ಮಾಜಿ ಸೈನಿಕರು, ಬಿಜೆಪಿ ನಗರಯುವ ಮೋರ್ಚಾದಿಂದ ಕಾರ್ಗಿಲ್ ಹುತಾತ್ಮರಿಗೆ ಗೌರವ ನಮನ
ಉಡುಪಿ: ಭಾರತೀಯ ಸೈನ್ಯದ ಶೌರ್ಯ, ಸೈನಿಕರ ಸಾಹಸವನ್ನು ನೆನಪಿಸುವ ಹಾಗೂ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸುವ 18ನೇ ಕಾರ್ಗಿಲ್ ವಿಜಯೋತ್ಸವ ದಿನವನ್ನು ಭಾರತೀಯ ಜನತಾ ಪಾರ್ಟಿ ನಗರ ಯುವ ಮೋರ್ಚಾ ಹಾಗೂ ಮಾಜಿ ಸೈನಿಕರ ವೇದಿಕೆ ಜಂಟಿ ಆಶ್ರಯದಲ್ಲಿ ಹುತಾತ್ಮರ ಸ್ಮಾರಕದಲ್ಲಿ ಬುಧವಾರ ಆಚರಿಸಲಾಯಿತು.
ಹುತಾತ್ಮ ಸ್ಮಾರಕಕ್ಕೆ ಪುಷ್ಪಗುಚ್ಚಗಳನ್ನು ಇಡುವುದರ ಮೂಲಕ ಹುತಾತ್ಮ ಯೋಧರಿಗೆ ಬಿಜೆಪಿ ನಾಯಕರು ಹಾಗೂ ಮಾಜಿ ಯೋಧರ ಸಂಘದ ಪದಾಧಿಕಾರಿಗಳು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮಾಜಿ ಸೈನಿಕರಾದ ಬಿ ರಾಮಚಂದ್ರ ರಾವ್ ದೇಶದಲ್ಲಿ ನಾವು ಸುರಕ್ಷಿತವಾಗಿ ಜೀವಿಸುತ್ತಿದೇವೆ ಎಂದರೆ ಅದಕ್ಕೆ ಸೈನಿಕರ ಕೊಡುಗೆ ದೊಡ್ಡದು. ಪ್ರತಿದಿನ ನೆರೆಯ ದೇಶಗಳಾದ ಪಾಕಿಸ್ತಾನ, ಚೀನಾ, ಬಾಂಗ್ಲಾದೇಶದಿಂದ ಭಯೋತ್ಪದಕರು, ಸೈನಿಕರು ದಾಳಿ ಮಾಡುತ್ತಲೇ ಇದ್ದಾರೆ ಅವರಿಂದ ನಮ್ಮ ದೇಶ ರಕ್ಷಿಸುವ ಹೊಣೆ ಸೈನಿಕರದ್ದು ಅವರಿಗೆ ಗೌರವ ನೀಡುವ ಮೂಲಕ ದೇಶ ಕಾಯುವ ಸೈನಿಕರ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ನಿವೃತ್ತ ಯೋಧರುಗಳಾದ ಬಿ ರಾಮಚಂದ್ರ ರಾವ್, ಗಣೇಶ್ ರೈ, ಕರ್ನಲ್ ರೊಡ್ರಿಗಸ್, ಗಣಪಯ್ಯ ಶೇರಿಗಾರ್, ವಾಸುದೇವ ಶೇರಿಗಾರ್, ದೊರತಿ, ಬಿಜೆಪಿ ನಾಯಕರಾದ ಶೀಲಾ ಕೆ ಶೆಟ್ಟಿ, ಮಟ್ಟಾರ್ ರತ್ನಾಕರ ಹೆಗ್ಡೆ, ಯಶ್ಪಾಲ್ ಸುವರ್ಣ, ಕಿರಣ್ ಕುಮಾರ್, ಅಕ್ಷಿತ್ ಶೆಟ್ಟಿ ಹೆರ್ಗ, ರೋಶನ್ ಶೆಟ್ಟಿ, ಶ್ರೀಶ ನಾಯಕ್, ರಂಜಿತ್ ಸಾಲಿಯಾನ್, ಶ್ಯಾಮಲ ಕುಂದರ್, ಗೀತಾಂಜಲಿ ಸುವರ್ಣ, ಸುಪ್ರಸಾದ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.