ಮಾದಕ ವಸ್ತುಗಳ ದುಷ್ಪರಿಣಾಮಗಳ ಅರಿವು ಪ್ರತಿ ಮನೆಗಳಿಂದಲೇ ಪ್ರಾರಂಭವಾಗಬೇಕು- ನಳಿನಿ ಪ್ರದೀಪ್
ಉಡುಪಿ: ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಪ್ರತಿ ಮನೆ ಮನೆಗಳಿಂದ ಆರಂಭವಾಗಬೇಕು ಎಂದು ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಹೇಳಿದ್ದಾರೆ.
ಅವರು ಬುಧವಾರ, ಎಂಜಿಎಂ ಕಾಲೇಜಿನನ ನೂತನ ರವೀಂದ್ರ ಮಂಟಪದಲ್ಲಿ, ಜಿಲ್ಲಾಡಳಿತ ಉಡುಪಿ ಜಿಲ್ಲೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಡುಪಿ, ಎಂ.ಜಿ.ಎಂ. ಕಾಲೇಜು ಉಡುಪಿ, ಮಹಾತ್ಮ ಗಾಂಧೀ ಸ್ಮಾರಕ ನಿಧಿ ಎಂ.ಜಿ.ಎಂ, ರಾಷ್ಟ್ರೀಯ ಸೇವಾ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಮಾದಕ ವಸ್ತು ವಿರೋಧಿ ಸಪ್ತಾಹದ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮನೆಗಳಲ್ಲಿ ಪೋಷಕರು ಧೂಮಪಾನ, ಮದ್ಯಪಾನ ಮಾಡುತ್ತಿದ್ದರೆ ಅದರ ಪರಿಣಾಮ ಮಕ್ಕಳ ಮೇಲೆ ಆಗುತ್ತದೆ ಆದ್ದರಿಂದ ಪೋಷಕರು ಮಾದಕ ವಸ್ತುಗಳ ಸೇವನೆಯಿಂದ ದೂರವಿದ್ದು, ಮಕ್ಕಳಿಗೆ ಇವುಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಬೇಕು, ಭಾರತದಲ್ಲಿ 3/1 ಭಾಗ ಅಪಘಾತಗಳು ಮದ್ಯಪಾನ ಸೇವನೆ ಮಾಡಿ ವಾಹನ ಚಲಾಯಿಸುವುದರಿಂದ ಮತ್ತು 4/1 ಭಾಗ ಆತ್ಮಹತ್ಯೆ ಪ್ರಕರಣಗಳು ಮಾದಕ ವಸ್ತುಗಳ ವ್ಯಸನದ ಕಾರಣದಿಂದ ನಡೆಯುತ್ತಿವೆ ಅಲ್ಲದೇ ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳಿಗೂ ಸಹ ಮಾದಕ ವಸ್ತುಗಳ ಸೇವನೆಯೇ ಪ್ರಮುಖ ಕಾರಣ, ಮಾದಕ ವಸ್ತುಗಳಿಂದ ದೂರವಿದ್ದು, ಸ್ವಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ಯುವ ಜನತೆಯ ಪಾತ್ರ ಅತ್ಯಂತ ಮಹತ್ವವಾಗಿದೆ ಎಂದು ನಳಿನಿ ಪ್ರದೀಪ್ ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮಾತನಾಡಿ, ಯುವ ಜನತೆ ಮಾದಕ ವಸ್ತುಗಳ ಕ್ಷಣಿಕ ಸುಖಕ್ಕೆ ಬಲಿಯಾಗದೇ, ಜೀವನದಲ್ಲಿ ಸ್ಪಷ್ಟ ಗುರಿ ಉದ್ದೇಶ ಹೊಂದಿರಬೇಕು, ಮಾದಕ ವ್ಯಸನಿಗಳನ್ನು ಗುರುತಿಸಿ ಅವರನ್ನು ವ್ಯಸನ ಮುಕ್ತರನ್ನಾಗಿ ಮಾಡಬೇಕು, ಮಾದಕ ವಸ್ತುಗಳ ವಿರುದ್ದ ಸ್ವಯಂ ನಿಯಂತ್ರಣ ಮಾಡಿಕೊಂಡಲ್ಲಿ, ಇದಕ್ಕೆ ಬಲಿಯಾಗಲು ಸಾಧ್ಯವಿಲ್ಲ, ವಿದ್ಯಾರ್ಥಿಗಳು ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.
ಎಂಜಿಎಂ ಕಾಲೇಜಿನ ಗಾಂಧೀ ಅಧ್ಯಯನ ಸಂಸ್ಥೆಯ ಸಂಶೋಧಕ ವಿನೀತ್ ರಾವ್ ಮಾತನಾಡಿ, ಮಹಾತ್ಮ ಗಾಂಧೀಜಿಯವರು 1920 ರಲ್ಲಿ ರೂಪಿಸಿದ ತಮ್ಮ ರಚನಾತ್ಮಕ ಸಾಮಾಜಿಕ ಚಳುವಳಿಯಲ್ಲಿ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಬಗ್ಗೆ ತಿಳಿಸಿದ್ದು, ಆದರೆ ಇಂದಿಗೂ ಸಹ ಈ ಸಮಸ್ಯೆ ಬಗೆಹರಿದಿಲ್ಲ, ಆತ್ಮಬಲದೊಂದಿಗೆ ಆತ್ಮಶುದ್ದಿ ಹೊಂದಿದ್ದರೆ ಮಾದಕ ವಸ್ತುಗಳ ಪ್ರಭಾವಕ್ಕೆ ಒಳಗಾಗಲು ಸಾಧ್ಯವಿಲ್ಲ, ವೈದ್ಯಕೀಯ ಉಪಯೋಗಕ್ಕೆ ಮಾತ್ರವಲ್ಲದೇ ಇತರೇ ಉದ್ದೇಶಕ್ಕೆ ಮಾದಕ ವಸ್ತುಗಳ ಬಳಕೆ ಸಲ್ಲದು ಎಂಬ ಸಂವಿಧಾನದ ಆಶಯ ಪಾಲಿಸಬೇಕು ಎಂದು ಹೇಳಿದರು.
ಮಣಿಪಾಲ ಕೆಎಂಸಿಯ ಮನೋವಿಜ್ಞಾನ ವಿಭಾಗದ, ಮನೋ ವೈದ್ಯರು ಹಾಗೂ ಸಹಾಯಕ ಪ್ರಾಧ್ಯಾಪಕ ಡಾ. ರವೀಂದ್ರ ಮನೋಳಿ, ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಎಂ.ಜಿ.ವಿಜಯ್ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇದರ ಕಾರ್ಯದರ್ಶಿ ರೋಹಿಣಿ ಕೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಹಿರಿಯ ತಾಂತ್ರಿಕ ಮೇಲ್ವಿಚಾರಕಿ ಪೂರ್ಣಿಮಾ ನಿರೂಪಿಸಿದರು, ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಷಾ ವಂದಿಸಿದರು.