ಮಾದರಿ ಕೈಗಾರಿಕಾ ಪ್ರದೇಶವಾಗಿ ಬೈಕಂಪಾಡಿ ಅಭಿವೃದ್ಧಿ: ಮೊಹಿದೀನ್ ಬಾವಾ

Spread the love

ಮಾದರಿ ಕೈಗಾರಿಕಾ ಪ್ರದೇಶವಾಗಿ ಬೈಕಂಪಾಡಿ ಅಭಿವೃದ್ಧಿ: ಮೊಹಿದೀನ್ ಬಾವಾ

ಮಂಗಳೂರು: ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಎಲ್ಲಾ ರೀತಿಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ಮಾದರಿಯಾಗಿಸಲು ಒತ್ತು ನೀಡಲಾಗಿದೆ ಎಂದು ಮಂಗಳೂರು ಉತ್ತರ ಶಾಸಕ ಬಿ.ಎ. ಮೊಹಿದೀನ್ ಬಾವಾ ತಿಳಿಸಿದ್ದಾರೆ.

ಅವರು ಸುಮಾರು 11.98 ಕೋಟಿ ರೂ. ವೆಚ್ಚದಲ್ಲಿ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಮುಖ್ಯ ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿಗೆ ಬೈಕಂಪಾಡಿ ಕೆಐಎಡಿಬಿ ಕಚೇರಿ ಸಮೀಪ ಚಾಲನೆ ನೀಡಿ ಮಾತನಾಡಿದರು. ಕೈಗಾರಿಕೆಗಳ ಬೆಳವಣಿಗೆಯಿಂದ ಉದ್ಯೋಗಸೃಷ್ಟಿ ಹೆಚ್ಚಲಿದ್ದು, ಇದರಿಂದ ಸ್ಥಳೀಯ ಹಾಗೂ ವಿದ್ಯಾವಂತ ನಿರುದ್ಯೋಗಿಗಳಿಗೂ ಹೆಚ್ಚಿನ ಉದ್ಯೋಗ ಸಿಗಲಿದೆ. ರಸ್ತೆ, ನೀರಿ, ವಿದ್ಯುತ್ ಸೇರಿದಂತೆ ಮೂಲಸೌಕರ್ಯಗಳ ಬಲವರ್ಧನೆಯಿಂದ ಹೆಚ್ಚು ಹೆಚ್ಚು ಉದ್ಯಮಗಳು ಸ್ಥಾಪನೆಯಾಗಲಿದೆ ಎಂದು ಅವರು ಹೇಳಿದರು.

ಬೈಕಂಪಾಡಿ ಕೈಗಾರಿಕಾ ಪ್ರದೇಶದ 3.39 ಕಿ.ಮೀ. ಮುಖ್ಯ ರಸ್ತೆಯನ್ನು 11.98 ಕೋಟಿ ರೂ.ಗಳ ಈ ಯೋಜನೆಯಲ್ಲಿ ಅಗಲೀಕರಣಗೊಳಿಸಿ, ಕಾಂಕ್ರಿಟೀಕರಣಗೊಳಿಸಲಾಗುವುದು. 10 ತಿಂಗಳಲ್ಲಿ ಈ ಕಾಮಗಾರಿ ಮುಗಿಯಲಿದೆ. ಇದಲ್ಲದೆ, ಬೈಕಂಪಾಡಿ ಕೈಗಾರಿಕಾ ಪ್ರದೇಶದ ಎಲ್ಲಾ ಒಳ ರಸ್ತೆಗಳ ಅಭಿವೃದ್ಧಿಗೆ ರೂ. 22 ಕೋಟಿ ಯೋಜನೆ ಸಿದ್ಧಗೊಳಿಸಲಾಗಿದೆ ಎಂದು ಶಾಸಕ ಮೊಹಿದೀನ್ ಬಾವಾ ತಿಳಿಸಿದರು.

ಸುರತ್ಕಲ್-ಎಂಆರ್‍ಪಿಎಲ್ ರಸ್ತೆಯಲ್ಲಿ ಈಗಾಗಲೇ 5 ಕೋಟಿ ವೆಚ್ಚದಲ್ಲಿ ಆರುಪಥಗಳ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಕಾನಾ-ಕೈಕಂಬದವರೆಗೆ ವಿಸ್ತರಿಸಲು ರೂ. 58 ಕೋಟಿ ರೂ. ಯೋಜನೆ ರೂಪಿಸಲಾಗಿದೆ. ರಾಜ್ಯದಲ್ಲೇ ಮೊದಲ ಬಾರಿಗೆ 50 ಕೋಟಿ ರೂ. ವೆಚ್ಚದಲ್ಲಿ ಸುರತ್ಕಲ್ ಮಾರುಕಟ್ಟೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಶಾಸಕರು ತಿಳಿಸಿದರು.

ಮಂಗಳೂರು ಉತ್ತರ ಕ್ಷೇತ್ರದ ಗುರುಪುರ ಹೋಬಳಿಯ ಗ್ರಾಮೀಣ ಪ್ರದೇಶಗಳ ರಸ್ತೆಗಳನ್ನು ಸುಮಾರು 89 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟಕರಣಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆಯಡಿ ರೂ. 46 ಕೋಟಿಯನ್ನು ಗ್ರಾಮೀಣ ರಸ್ತೆ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿದೆ ಎಂದು ಮೊಹಿದೀನ್ ಬಾವಾ ಹೇಳಿದರು.

ಕಾರ್ಯಕ್ರಮದಲ್ಲಿ ಬೈಕಂಪಾಡಿ ಕಾರ್ಪೋರೇಟರ್ ಪುರುಷೋತ್ತಮ ಚಿತ್ರಾಪುರ, ಕಾರ್ಪೋರೇಟರ್ ಕುಮಾರ್ ಮೆಂಡನ್, ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಗೌರವ್ ಹೆಗ್ಡೆ, ಕೆಐಎಡಿಬಿ ಅಧಿಕಾರಿ ಸಿದ್ಧರಾಮಯ್ಯ, ಸ್ಥಳೀಯ ಉದ್ಯಮಿಗಳು ಮತ್ತಿತರರು ಇದ್ದರು.


Spread the love