ಮಾಧ್ಯಮ ಮಿತ್ರರೊಂದಿಗೆ ಕ್ರಿಸ್ಮಸ್ ಸ್ನೇಹ ಕೂಟ ಆಚರಿಸಿದ ಉಡುಪಿ ಧರ್ಮಾಧ್ಯಕ್ಷ ಜೆರಾಲ್ಡ್ ಲೋಬೊ
ಉಡುಪಿ: ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ವತಿಯಿಂದ ಬುಧವಾರ ನಗರದಲ್ಲಿನ ಮಾಧ್ಯಮ ಮಿತ್ರರೊಂದಿಗೆ ಧರ್ಮಾಧ್ಯಕ್ಷ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರು ಕ್ರಿಸ್ಮಸ್ ಸ್ನೇಹ ಕೂಟವನ್ನು ಆಚರಿಸಿದರು.
ಕಾರ್ಯಕ್ರಮವನ್ನು ಕೇಕ್ ಕತ್ತರಿಸುವುದರ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಅವರು ಅಂದು ಏಸು ಕ್ರಿಸ್ತರು ಸಾರಿದ ಪ್ರೀತಿ ಮತ್ತು ದಯೆ, ಇಂದು ಪ್ರಪಂಚದಾದ್ಯಂತ ಅತೀಹೆಚ್ಚು ಬೇಕಾಗಿರುವ ಗುಣವಾಗಿದೆ. ಅಸೂಯೆಯಿಂದ ಏನನ್ನೂ ಸಾಧಿಸುವುದು ಸಾಧ್ಯವಿಲ್ಲ, ಅದು ಕೆಂಡದಂತೆ ತನ್ನನ್ನೇ ಸುಡುತ್ತದೆ, ಪರಸ್ಪರ ಪ್ರೀತಿಸಿದರೇ ಮಾತ್ರ ಬದುಕು ಉನ್ನತಿಗೇರುತ್ತದೆ. ಏಸುವಿನ ಈ ಸಂದೇಶ ಇಂದು ಹೆಚ್ಚು ಪ್ರಸ್ತುತವಾಗುತ್ತದೆ ಎಂದವರು ಹೇಳಿದರು.
ಮತ್ತೋರ್ವ ಮುಖ್ಯ ಅತಿಥಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ. ನಿಂಬರಗಿ ಮಾತನಾಡಿ, ಸಂತೋಷವನ್ನು ಬೇರೆಯವರೊಂದಿಗೆ ಹಂಚಿದಾಗ ಇನ್ನೂ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಸಂತೋಷದ ಹಬ್ಬ ಕ್ರಿಸ್ಮಸ್ ಆಚರಣೆಯನ್ನು ಇತರ ಧರ್ಮದವರೊಂದಿಗೆ ಸೇರಿ ಆಚರಿಸುವುದು ಹೆಚ್ಚು ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೋ, ಪ್ರೀತಿಯ ನಿಜವಾದ ಅರ್ಥ ಇತರಿಗಾಗಿ ಮಾಡುವ ತ್ಯಾಗದಲ್ಲಿದೆ, ಪ್ರಭು ಏಸು ಇತರಿಗಾಗಿ ತನ್ನ ಜೀವನವನ್ನು ತ್ಯಾಗ ಮಾಡಿದರು, ಇದಕ್ಕಿಂತ ದೊಡ್ಡ ಪ್ರೀತಿ ಬೇರೆ ಇಲ್ಲ, ಆದ್ದರಿಂದಲೇ ಕ್ರಿಸ್ಮಸ್ ಹಬ್ಬ ಪ್ರೀತಿಯನ್ನು ಹಂಚುವ ಹಬ್ಬವಾಗಿದೆ ಎಂದರು.
ಉಡುಪಿ ಧರ್ಮಪ್ರಾಂತ್ಯವು ಕಳೆದೊಂದು ವರ್ಷದಲ್ಲಿ ಸಾಮಾಜಿಕ ಹೊಣೆಯನ್ನು ನಿಭಾಯಿಸುವ 3 ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಅರಣ್ಯ ಇಲಾಖೆಯ ಸಹಯೋಗದಲ್ಲಿ ಹಸಿರು ಬೆಳೆಸುವ ಉದ್ದೇಶದಿಂದ ೫೦ ಸಾವಿರ ಗಿಡಗಳನ್ನು ನೆಡಲಾಗಿದ್ದು, ಅದನ್ನು ಪೋಷಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದೆ ಮತ್ತು ಪ್ರತಿ ಚರ್ಚಿನ ವ್ಯಾಪ್ತಿಯ ಮನೆಗಳಲ್ಲಿ ನೀರು ಇಂಗಿಸುವ ಕೆಲಸ ನಡೆಸಲಾಗುತ್ತಿದೆ. ಧರ್ಮಪ್ರಾಂತ್ಯದ ಪ್ರಾಥಮಿಕ ಶಾಲೆಯ 7000ಕ್ಕೂ ಅಧಿಕ ವಿದ್ಯಾರ್ಥಿಗಳ ಕಣ್ಣಿನ ತಪಾಸಣೆ ನಡೆಸಿ, ದೃಷ್ಟಿ ದೋಷ ಇರುವ 734 ಮಕ್ಕಳಿಗೆ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಸಹಕಾರದಲ್ಲಿ ಸೌಹಾರ್ದ ಶಾಂತಿ ಸಮಿತಿಗಳನ್ನು ರಚಿಸಿ, ಅದರ ಮೂಲಕ ತಾಲೂಕು ಮಟ್ಟದಲ್ಲಿ ಎಲ್ಲಾ ಧರ್ಮಗಳ ಹಬ್ಬಗಳನ್ನು ಆಚರಿಸಲಾಗುತ್ತಿದೆ ಎಂದವರು ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ ಪ್ರಸಾದ್ ಪಾಂಡೇಲು ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಳೆನೀರು ಕೊಯ್ಲು ತಜ್ಞ ಜೋಸೆಫ್ ರೆಬೆಲ್ಲೊ ಮತ್ತು ಆವೆ ಮಣ್ಣಿನ ಕಲಾವಿದ ಲಾರೆನ್ ಪಿಂಟೊ ಅವರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ಧರ್ಮಪ್ರಾಂತ್ಯದ ನೂತನ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಫಾ. ರೋಯ್ಸನ್ ಫೆರ್ನಾಂಡಿಸ್ ಅವರಿಗೆ ಧರ್ಮಾಧ್ಯಕ್ಷರು ಅಧಿಕಾರ ಹಸ್ತಾಂತರಿಸಿದರು.
ಸಾರ್ವಜನಿಕ ಸಂಪರ್ಕಾಧಿಕಾರಿ ಫಾ. ರೋಯ್ಸನ್ ಸ್ವಾಗತಿಸಿದರು. ಉಜ್ವಾಡ್ ಪತ್ರಿಕೆಯ ಸಂಪಾದಕ ಫಾ. ಚೇತನ್ ಲೋಬೊ ಕಾರ್ಯಕ್ರಮ ಸಂಯೋಜಿಸಿದರು. ಧರ್ಮಪ್ರಾಂತ್ಯದ ಮಾಧ್ಯಮ ಸಂಚಾಲಕ ಮೈಕಲ್ ರೊಡ್ರಿಗಸ್ ವಂದಿಸಿದರು.