ಮಾನವೀಯತೆಗೆ ತಲೆಬಾಗೋಣ ಮಾನವ ಧರ್ಮವನ್ನು ಉಳಿಸೋಣ: ಡಿಸಿಎಂ ಡಿ.ಕೆ.ಶಿವಕುಮಾರ್ ಕರೆ

Spread the love

ಮಾನವೀಯತೆಗೆ ತಲೆಬಾಗೋಣ ಮಾನವ ಧರ್ಮವನ್ನು ಉಳಿಸೋಣ: ಡಿಸಿಎಂ ಡಿ.ಕೆ.ಶಿವಕುಮಾರ್ ಕರೆ

ಕಾಪು (ಉಡುಪಿ): “ನಾವೆಲ್ಲರೂ ಮಾನವೀಯತೆಗೆ ತಲೆಭಾಗಬೇಕು. ಮಾನವ ಧರ್ಮವನ್ನು ಉಳಿಸಿಕೊಳ್ಳಬೇಕು. ಯಾರಿಗೂ ತೊಂದರೆ ಕೊಡದಂತೆ ನಮ್ಮ ಧರ್ಮದ ದಾರಿಯಲ್ಲಿ ನಾವು ಬದುಕಬೇಕು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಭಾನುವಾರ ನಡೆದ ಇತಿಹಾಸ ಪ್ರಸಿದ್ಧ ಶ್ರೀ ಹೊಸಮಾರಿಗುಡಿಯ ಬ್ರಹ್ಮ ಕಳಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು‌.

“ಮಾರಿಯಮ್ಮ ಎಲ್ಲರೂ ನೀಡುವ ಹಣ್ಣು, ಹೂವು ಜೊತೆಗೆ ಕೋಳಿಯನ್ನು ಸಹ ಅರ್ಪಿಸಿಕೊಳ್ಳುತ್ತಾಳೆ ಎಂದು ಪುರೋಹಿತರು ಹೇಳಿದರು. ಏಕೆಂದರೆ ಭಕ್ತರು ಭಕ್ತಿಯಿಂದ ನೀಡಿದ್ದನ್ನು ತಾಯಿ ಬೇಡ ಎನ್ನುವುದಿಲ್ಲ. ಭಕ್ತಿಗೆ ದೊಡ್ಡ ಶಕ್ತಿಯಿದೆ” ಎಂದರು.

“ಸರ್ಕಾರದ ಸಹಾಯವಿಲ್ಲದೇ ಭಕ್ತರ ಸಣ್ಣ ಹಾಗೂ ದೊಡ್ಡ ನೆರವಿನಿಂದ ಅತ್ಯದ್ಭುತವಾಗಿ ಮಾರಿಗುಡಿಯನ್ನು ನಿರ್ಮಾಣ ಮಾಡಲಾಗಿದೆ. ಇಂತಹ ವಿಜೃಂಭಣೆಯಿಂದ ಕೂಡಿರುವ ದೇವಸ್ಥಾನವನ್ನು ನಾನು ಕರ್ನಾಟಕದಲ್ಲಿ ಎಲ್ಲಿಯೂ ನೋಡಿಲ್ಲ” ಎಂದು ಹೇಳಿದರು.

“ನಮ್ಮ ಸಂಸ್ಕೃತಿಯಲ್ಲಿ ಸ್ತ್ರೀ ದೇವತೆಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗಿದೆ. ಪ್ರತಿ ಊರಿಗೆ ಹೋದಾಗಲೂ ಮೊದಲು ಕೇಳುವುದು ಇಲ್ಲಿನ ಗ್ರಾಮ ದೇವತೆ ಯಾವುದು ಎಂದು. ಪ್ರತಿ ದೇವರ ಹೆಸರಿನ ಮುಂಭಾಗ ಪತ್ನಿಯರ ಹೆಸರನ್ನು ಸೇರಿಸಿ ಕರೆಯಲಾಗುತ್ತದೆ. ಉದಾಹರಣೆಗೆ ಲಕ್ಷ್ಮೀ ವೆಂಕಟೇಶ್ವರ, ಶಿವ ಪಾರ್ವತಿ ಎಂದು ಹೇಳುತ್ತೇವೆ. ನಾವು ಹುಟ್ಟಿದ ದೇಶವನ್ನು ಮಾತೃಭೂಮಿ ಎಂದರೆ, ಮಾತಾಡುವ ಭಾಷೆಯನ್ನು ಮಾತೃಭಾಷೆ ಎನ್ನುತ್ತಾರೆ” ಎಂದು ತಿಳಿಸಿದರು.

“ಎಲ್ಲಾ ಜಾತಿ,‌ ಧರ್ಮ, ಪಂಥ, ಪಂಗಡಗಳ ಜನರನ್ನು ರಕ್ಷಣೆ ಮಾಡುವ ತಾಯಿ ಕಾಪುವಿನ ಮಾರಿಯಮ್ಮ ದೇವಿಯ ದರ್ಶನವನ್ನು ಪಡೆಯಲೇ ಬೇಕು ಎಂದು ನನ್ನ ಕುಟುಂಬ ಹಾಗೂ ಪತ್ನಿಯನ್ನು ದೇವಸ್ಥಾನಕ್ಕೆ ಭೇಟಿ ನೀಡಬೇಕು ಎಂದು ಸೂಚಿಸುವೆ” ಎಂದರು.

“ಭಕ್ತ ಹಾಗೂ ಭಗವಂತನಿಗೆ ವ್ಯವಹಾರ ನಡೆಯುವ ಸ್ಥಳ ದೇವಸ್ಥಾನ. ಮನುಷ್ಯನಿಗೆ ಕಷ್ಟಗಳು ಬಂದಾಗ, ದುಃಖ ಉಂಟಾದಾಗ ದೂರ ಮಾಡುವವಳು ದುರ್ಗಾ ದೇವಿ. ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೇ, ದೇವನೊಬ್ಬ ನಾಮ‌ಹಲವು. ಮಾರಿಯಮ್ಮ ದೇವಿಯ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನ್ನ ಜೀವನದ ಪುಣ್ಯದ ಘಳಿಗೆ” ಎಂದರು.

“ಮನುಷ್ಯ ಹುಟ್ಟಿದ ಮೇಲೆ ಒಂದು ದಿನ ಸಾಯಲೇ ಬೇಕು. ನಮ್ಮ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಇದರ ನಡುವೆ ಏನನ್ನು ಸಾಧನೆ ಮಾಡುತ್ತೇವೆ ಎನ್ನುವುದು ಮುಖ್ಯವಾಗುತ್ತದೆ” ಎಂದು ಹೇಳಿದರು.

“ದೇವರು ವರ, ಶಾಪ ಎರಡೂ ಕೊಡುವುದಿಲ್ಲ. ಆದರೆ ಅವಕಾಶವನ್ನು ಕೊಡುತ್ತಾನೆ. ನಾನೂ ಸೇರಿದಂತೆ ಅನೇಕ ಭಕ್ತರಿಗೆ ದೇವಿಯ ಸೇವೆ ಮಾಡಲು ಅವಕಾಶ ಸಿಕ್ಕಿರುವುದು ನಮ್ಮ ಭಾಗ್ಯ. ಭಕ್ತರ ನೆರವಿನಿಂದ ಇಡೀ ದೇವಸ್ಥಾನವನ್ನು ಸುಮಾರು ₹99 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿದೆ ಎಂದು ತಿಳಿದು ಸಂತೋಷವಾಯಿತು” ಎಂದು ಹೇಳಿದರು.

“ನಾನು ಈ ದೇವಸ್ಥಾನಕ್ಕೆ ಉಪಮುಖ್ಯಮಂತ್ರಿಯಾಗಿ ಬಂದಿಲ್ಲ. ದೇವಿಯ ಭಕ್ತವಾಗಿ ಇಲ್ಲಿಗೆ ಭೇಟಿ ನೀಡಿದ್ದೇನೆ. ಸ್ನೇಹಿತರಾದ ಉದಯ್ ಕುಮಾರ್ ಶೆಟ್ಟಿಯವರು, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಅವರ ಆಹ್ವಾನ ಮನ್ನಿಸಿ ಬಂದಿದ್ದೇನೆ. ಮುಂಬೈ, ದುಬೈ, ಬೆಂಗಳೂರು ಸೇರಿದಂತೆ ಹೊರ ಊರುಗಳಲ್ಲಿ ಇರುವ ಅನೇಕರು ದೇವಿಯ ಶಕ್ತಿಯ ಸೆಳೆತಕ್ಕೆ ಒಳಗಾಗಿ ಬಂದಿದ್ದೀರಿ. ಇದೇ ತಾಯಿಯ ಪವಾಡ” ಎಂದರು.

“ಇಡೀ ದೇವಸ್ಥಾನದ ಶಿಲ್ಪಕಲೆ ಚೆನ್ನಾಗಿ ಮೂಡಿಬಂದಿದೆ. ಕೆತ್ತನೆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ಇಳಕಲ್ಲಿನ ಕೆಂಪು ಕಲ್ಲನ್ನು ಬಳಸಲಾಗಿದೆ. ನಾನಾ ಭಾಗದ ಜನರು ಕೈ ಜೋಡಿಸಿ ತಾಯಿಯ ಆಶೀರ್ವಾದಕ್ಕೆ ಭಾಜನರಾಗಿದ್ದಾರೆ. ದೇವಸ್ಥಾನ ಇನ್ನೂ ಬೆಳೆಯಲಿ ಎಂದು ಆಶಿಸುತ್ತೇನೆ” ಎಂದರು.

ಕಾರ್ಯಕ್ರಮದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಅವರು, “ಎಲ್ಲರನ್ನೂ ಕಾಪಾಡುವ ಮಾರಮ್ಮನ ಪವಿತ್ರವಾದ ಕ್ಷೇತ್ರ ಕಾಪು. ಇಲ್ಲಿಗೆ ಬಂದಿರುವುದು ನನ್ನ ದೊಡ್ಡ ಭಾಗ್ಯ. ನಾನು ನೂರಾರು ದೇವಾಲಯ ನೋಡಿದ್ದೇನೆ. ಆದರೆ ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿರುವ ರೀತಿ ಬೇರೆ ಯಾವುದನ್ನೂ ನಾನು ನೋಡಿಲ್ಲ. ಶಿಲ್ಪಿಗಳು ಅದ್ಭುತವಾಗಿ ಕಲ್ಲು, ಮರದ ಕೆಲಸ ಮಾಡಿದ್ದಾರೆ. ಈ ದೇವಾಲಯ ಹಾಗೂ ಈ ದೇವಿಗೆ ಜಾತಿ ತಾರತಮ್ಯ ಇಲ್ಲ. ಮೇಲ್ಜಾತಿಯವರಿಂದ ಕೆಳ ಜಾತಿವರೆಗೂ ಎಲ್ಲರಿಗೂ ಇಲ್ಲಿ ಅವಕಾಶವಿದೆ. ಇಲ್ಲಿ ಮಾನವ ಜಾತಿ ಮಾತ್ರ ಇದೆ. ನಾನು ನಂಬಿರುವ ನಮ್ಮ ಗುರುಗಳು ನನಗೆ, ‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಸಿಗಲಿ’ ಎಂದು ಮಾರ್ಗದರ್ಶನ ನೀಡಿದ್ದಾರೆ. ಈ ತತ್ವ ಈ ದೇವಾಲಯದಲ್ಲಿ ಎದ್ದು ಕಾಣುತ್ತಿದೆ” ಎಂದು ಹೇಳಿದರು.


Spread the love
Subscribe
Notify of

0 Comments
Inline Feedbacks
View all comments