ಮಾನವೀಯ ಗುಣ ಹೊಂದಿದ ಪ್ರತಿಯೊಬ್ಬ ಪೂಜೆ ನಡೆಸಲು ಅರ್ಹ : ಬಾರ್ಕೂರು ಮಹಾ ಸಂಸ್ಥಾನದಲ್ಲಿ ಸಿದ್ದರಾಮಯ್ಯ

Spread the love

ಮಾನವೀಯ ಗುಣ ಹೊಂದಿದ ಪ್ರತಿಯೊಬ್ಬ ಪೂಜೆ ನಡೆಸಲು ಅರ್ಹ :  ಬಾರ್ಕೂರು ಮಹಾ ಸಂಸ್ಥಾನದಲ್ಲಿ ಸಿದ್ದರಾಮಯ್ಯ

ಬ್ರಹ್ಮಾವರ: ಮನುಷ್ಯ ಸ್ವಾರ್ಥಕ್ಕಾಗಿ ಮಾಡಿಕೊಂಡ ಜಾತಿ ಎನ್ನುವ ಶ್ರೇಣಿಕೃತ ವ್ಯವಸ್ಥೆ ದೂರವಾಗಿ ಸಮನಾಂತರ ಸಮಾಜದ ನಿರ್ಮಾಣವಾಗಬೇಕಿದೆ. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ನಮ್ಮ ಸಮಾಜದಲ್ಲಿ ಬೇರೂರಿರುತ್ತದೋ ಅಲ್ಲಿಯವರೆಗೆ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಿಲ್ಲ. ದೇವರ ದೃಷ್ಟಿಯಲ್ಲಿ ಜಾತಿ ಎನ್ನುವುದೆ ಇಲ್ಲ ಇದು ನಾವು ಮಾಡಿಕೊಂಡ ವ್ಯವಸ್ಥೇ ಅಷ್ಟೆ. ಇಂತವರು ಮಾತ್ರ ಪೂಜೆ ಮಾಡಬೇಕು ಇಂತವರು ಮಾಡಬಾರದು ಎನ್ನುವುದು ಅಮಾನವೀಯತೆ. ಅಂತರಂಗ ಶುದ್ಧವಾಗಿರುವ ಮಾನವೀಯ ಗುಣಗಳಿರುವ ಯಾರೂ ಪೂಜೆ ನಡೆಸಲು ಅರ್ಹನಾಗಿದ್ದಾನೆ ಎಂದು ರಾಜ್ಯದ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಹೇಳಿದರು.

 ಅವರು ಶುಕ್ರವಾರದಂದು ಬಾರ್ಕೂರು ಭಾರ್ಗವ ಬೀಡು ಇಲ್ಲಿ ಆಯೋಜಿಸಲಾದ ಶ್ರೀ ನಾಗದೇವರ ಮತ್ತು ಮೂಲ ದೈವಗಳ ಪುನರ್ ಪ್ರತಿ ಷ್ಠಾಪನೆ ಮತ್ತು ಪರಮ ಪವಿತ್ರ ಮಹಾನಾಗಮಂಡಲೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಬಾರ್ಕೂರು ಮಹಾ ಸಂಸ್ಥಾನಂ ಭಾರ್ಗವ ಬೀಡು ಬಾರ್ಕೂರು ಇದರ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಬಂಟರು ಸಾಹಸ ಪ್ರವೃತ್ತಿ ಇರುವ ಸಮುದಾಯದವರು, ಅವರ ಸಾಹಸ ಪ್ರವೃತ್ತಿಯೇ ಅವರನ್ನು ಇಂದು ವಿವಿಧ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವಂತೆ ಮಾಡಿದೆ. ಬಸವಣ್ಣನವರು 17ನೇ ಶತಮಾನದಲ್ಲಿ ಸ್ತ್ರೀ ಪುರುಷ ಸಮಾನತೆಯ ಬಗ್ಗೆ ತಿಳಿಸಿದ್ದರು ಆದರೆ ಬಂಟ ಸಮುದಾಯ ಹಲವಾರು ವರ್ಷಗಳಿಂದಲೇ ಸ್ತ್ರೀ ಪುರುಷ ಸಮಾನತೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಂದಿದ್ದಾರೆ. ಯಾವುದೇ ಧಾರ್ಮಿಕ ಕೇಂದ್ರ ಬೆಳೆಯಬೇಕಾದರೆ ಬಹುಮುಖ್ಯವಾಗಿ ಅದು ಜನಪರವಾಗಿರಬೇಕು, ಜನರ ಸಹಕಾರ ಬೆಂಬಲವಿದ್ದರೇ ಧಾರ್ಮಿಕ ಕೇಂದ್ರಗಳು ಅಭಿವೃದ್ಧಿ ಸಾಧ್ಯವಿದೆ. ಇಂದು ಎಲ್ಲರ ಬೆಂಬಲ ಪಡೆದ ಸ್ವಾಮೀಜಿಯವರು ಈ ಸಂಸ್ಥಾನದ ನೇತೃತ್ವ ವಹಿಸಿ ಇತಿಹಾಸ ನಿರ್ಮಿಸಿರುವುದು ನಿಜಕ್ಕೂ ಶ್ಲಾಘನಾರ್ಹ. ಇತಿಹಾಸ ತಿಳಿದವರಿಗೆ ಮಾತ್ರ ಭವಿಷ್ಯ ನಿರ್ಮಾಣ ಸಾಧ್ಯವಿದೆ, ಸ್ವಾಮೀಜಿಯವರು ಇತಿಹಾಸ ತಿಳಿದು ಭವಿಷ್ಯದ ಚಿಂತನೆ ಮನದಲ್ಲಿರಿಸಿ ಪ್ರಯತ್ನ ಶೀಲರಾಗಿ ಸಫಲರಾಗಿದ್ದಾರೆ ಎಂದರು.

 ನಾನು ನಾಸ್ತಿಕನಲ್ಲ, ಆದರೆ ಅನೇಕ ಆಸ್ತಿಕರಲ್ಲಿರುವ ಡೊಂಗಿತನ ನನ್ನಲ್ಲಿ ಇಲ್ಲ, ನಾನು ಗುರು, ಧರ್ಮ, ದೇವರುಗಳ ವಿರೋಧಿಯಲ್ಲ ನಾನು ಮನುಷ್ಯತ್ವದ ಮೇಲೆ ನಂಬಿಕೆ ಇರಿಸಿದವ. ಇಂದು ದೇವರು ಮತ್ತು ಭಕ್ತರ ನಡುವೆ ಕಂದಕ ಸೃಷ್ಠಿಸುವ ಮಧ್ಯವರ್ತಿಗಳ ಹೆಚ್ಚಾಗಿದ್ದಾರೆ. ಧರ್ಮ ಅಂದರೆ ನಾನು ಬದುಕಬೇಕು ನನ್ನಂತೆ ಉಳಿದವರು ಬದುಕಬೇಕು ಎನ್ನುವುದು. ಇದನ್ನು ಬಸವಣ್ಣನವರು ತಮ್ಮ ಅನುಭವ ಮಂಟಪದಲ್ಲಿ ತಿಳಿಸಿದ್ದಾರೆ. ನಮ್ಮ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರು ಸಮಾನರು ಎನ್ನುವುದಿದೆ ಅದರ ಮೂಲ ರೂಪ ಅನುಭವ ಮಂಟಪ. ಧರ್ಮ ಹೆಸರಿನಲ್ಲಿ ಮನುಷ್ಯ ಮನುಷ್ಯನ ನಡುವೆ ಒಡುಕು ತರುವ ಕೆಲಸ ಮಾಡುವುದು ಅಧರ್ಮ. ಹುಟ್ಟಿನಿಂದ ನಾವು ಜಾತಿಯ ಹಣೆಪಟ್ಟಿ ಕಟ್ಟಿಕೊಂಡು ಜೀವನ ಪರ್ಯಂತ ಅದರೊಂದಿಗೆ ಜೀವಿಸುತ್ತೇವೆ, ಇದನ್ನು ತೊಡೆದುಹಾಕುಲು ಇರುವ ಒಂದೆ ಮಾರ್ಗ ಅದು ಮಾನವೀಯತೆ ಎಂದರು.

  ಬಾರ್ಕೂರು ಮಹಾಸಂಸ್ಥಾನದ ವಿಶ್ವ ಸಂತೋಷ ಭಾರತಿ ಶ್ರೀಪಾದರು ಸಂಸ್ಥಾನ ವಾಣಿ ನೀಡಿ, ಭಕ್ತಿಯಿಂದ ಶ್ರದ್ಧೆಯಿಂದ ಮಾಡುವ ಆರಾಧನೆಯೇ ಭೂತರಾಧನೆ. ಆಡು ಭಾಷೆಯಲ್ಲಿಯೇ ಪೂಜೆ ಸಲ್ಲಿಸಲು ಅವಕಾಶವಿರುವ ಏಕೈಕ ಪದ್ಧತಿ ಅದು ಭೂತರಾಧನೆ ಪದ್ಧತಿ. ಇಂದು ಲೋಕಾರ್ಪಣೆಗೊಂಡ ಬಾರ್ಕೂರು ಮಹಾಸಂಸ್ಥಾನವು ಬಂಟರಿಂದ ನಿರ್ಮಾಣವಾಗಿದ್ದರೂ ಕೂಡ ಎಲ್ಲ ವರ್ಗದ ದೈವರಾಧಕರಿಗೂ ಇಲ್ಲಿ ಸೇವೆ ಸಲ್ಲಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಇಂದು ನಗರೀಕರಣದಿಂದಾಗಿ ದೈವರಾಧನೆಗೆ ಹೊಡೆತ ಬಿದ್ದಿದೆ, ದೈವರಾಧನೆಯನ್ನು ಉಳಿಸಿ ಮುಂದುವರಿಸಬೇಕಾದದ್ದು ಗುರುಗಳ ಧರ್ಮ ಎಂದರು. ಮಂಗಳೂರು ಮಾತೃ ಸಂಘದ ಮಾಲಾಡಿ ಅಜಿತ್ ರೈ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಹುಬ್ಬಳ್ಳಿ ಮೂರು ಸಾವಿರ ಮಠದ ಶ್ರೀ ಶ್ರೀ ಶ್ರೀ ಜಗದ್ಗುರು ಗುರು ಸಿದ್ಧರಾಜ ಯೋಗೀಂದ್ರ ಮಹಾಸ್ವಾಮಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 ಮುಖ್ಯ ಅತಿಥಿಗಳಾಗಿ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮುಜರಾಯಿ ಮತ್ತು ಜವುಳಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಶಕುಂತಲಾ ಶೆಟ್ಟಿ, ಮಾಜಿ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್, ಉದ್ಯಮಿ ಬಾರ್ಕೂರು ಸುಧಾಕರ ಶೆಟ್ಟಿ, ಮುಂಬೈ ಉದ್ಯಮಿ ಕರುಣಾಕರ ಎಂ.ಶೆಟ್ಟಿ, ಬಂಟರ ಸಂಘದ ವಿಶ್ವನಾಥ ಶೆಟ್ಟಿ, ಬಾರ್ಕೂರು ಮಹಾ ಸಂಸ್ಥಾನ ಟ್ರಸ್ಟ್(ರಿ) ಕಾರ್ಯದರ್ಶಿ ಗುರ್ಮೆ ಸುರೇಶ್ ಶೆಟ್ಟಿ, ಉಪಾಧ್ಯಕ್ಷ ಅಪ್ಪಣ್ಣ ಹೆಗ್ಡೆ, ಖಚಾಂಚಿ ಮನೋಹರ ಶೆಟ್ಟಿ, ವಿಠಲ ಹೆಗ್ಡೆ, ಮುಂಬಯಿ ಭಾಸ್ಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭ ಮಾಜಿ ಲೋಕಾಯುಕ್ತ ಸಂತೋಷ ಹೆಗ್ಡೆ, ಬಿಲ್ಲವ ಮಹಾಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ, ಆಲ್ಕಾರ್ಗೋ ಲಾಜೆಸ್ಟಿಕ್ ಸಿಎಚಿಡಿ ಶಶಿಕಿರಣ್ ಶೆಟ್ಟಿ ಮತ್ತು ಮಂಗಳೂರು ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಕೆ.ಚೆನ್ನಪ್ಪ ಗೌಡ ಅವರಿಗೆ ಪ್ರತಿಷ್ಠಿತ ಭೂತಾಳ ಪಾಂಡ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಸ್ಥಾನದ ಅನಿಲ್ ಕುಮಾರ್ ಶೆಟ್ಟಿ, ನಿರ್ದೇಶಕ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಬಾರ್ಕೂರು ಶಾಂತರಾಮ ಶೆಟ್ಟಿ ಮತ್ತು ಡಾ.ಸತ್ಯಪ್ರಕಾಶ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಇದೇ ಕಾರ್ಯಕ್ರಮದಲ್ಲಿ ಸಂಸ್ಥಾನದ ಮಹಾತ್ವಾಂಕ್ಷಿ ಯೋಜನೆಗಳಾದ ಆರೋಗ್ಯ ಭಾರತಿ ಯೋಜನೆಯ ಸಂಕಲ್ಪವನ್ನು ಮುಂಬಯಿಯ ಸುರೇಂದ್ರ ಶೆಟ್ಟಿ ಮತ್ತು ವಿದ್ಯಾಭಾರತಿ ಯೋಜನೆಯ ಸಂಕಲ್ಪವನ್ನು ದುಬೈ ಉದ್ಯಮಿ ವರದರಾಜ ಶೆಟ್ಟಿ ಬಿಡುಗಡೆ ಮಾಡಿದರು.

 ನಿರ್ದೇಶಕ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಮನೋಹರ ಪ್ರಸಾದ್ ಸ್ವಾಗತಿಸಿದರು, ಅಕ್ಷಯ್ ಹೆಗ್ಡೆ ಸಹಕರಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥಾನದ ಪದಾಧಿಕಾರಿಗಳು, ನಿರ್ದೇಶಕರು, ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

 


Spread the love