‘ಮಾನ ಹರಾಜು ಹಾಕಿದ ಮದರ್ ತೆರೇಸಾ’; ಆರ್.ಎಸ್.ಎಸ್. ಮುಖಂಡ ಮಂಗೇಶ್ ಭೇಂಡೆ ಆರೋಪ
ಹುಬ್ಬಳ್ಳಿ (ಪ್ರಜಾವಾಣಿ ವಾರ್ತೆ): ‘ವಿದೇಶಗಳಿಂದ ದುಡ್ಡು ತರುವ ಕಾರಣಕ್ಕಾಗಿ ಭಾರತವನ್ನು ದರಿದ್ರರ, ಬಡವರ ರಾಷ್ಟ್ರ ಎಂದು ಬಿಂಬಿಸಿದ ಮದರ್ ತೆರೇಸಾ, ವಿದೇಶಗಳಲ್ಲಿ ದೇಶದ ಮಾನ ಹರಾಜು ಹಾಕಿದರು’ ಎಂದು ಆರ್.ಎಸ್.ಎಸ್.ನ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ್ ಭೇಂಡೆ ದೂರಿದರು.
ನವದೆಹಲಿಯ ರಾಷ್ಟ್ರೀಯ ಸೇವಾ ಭಾರತಿ ಹಾಗೂ ಹುಬ್ಬಳ್ಳಿ ಸೇವಾ ಭಾರತಿ ಟ್ರಸ್ಟ್ ಸಹಯೋಗದಲ್ಲಿ ನಗರದ ಗೋಕುಲ ಗಾರ್ಡನ್‌ನಲ್ಲಿ ಶುಕ್ರವಾರ ಆರಂಭವಾದ ಮೂರು ದಿನಗಳ ಸೇವಾಸಂಗಮ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಮದರ್ ತೆರೇಸಾ ಅವರನ್ನು ಎಲ್ಲರೂ ಪೂಜಿಸುತ್ತಾರೆ, ಕೊಂಡಾಡುತ್ತಾರೆ. ಆದರೆ, ದೇಶದಲ್ಲಿ 500 ಸೇವಾ ಕೇಂದ್ರಗಳನ್ನು ನಿರ್ಮಿಸಿದ ಅವರು, ವಿಶ್ವದ 17 ದೇಶಗಳಿಂದ ದುಡ್ಡು ತಂದರು. ಕೊನೆಗೆ ಸೇವೆಯ ಹೆಸರಿನಲ್ಲಿ ಮತಾಂತರವನ್ನೂ ಮಾಡಿದರು’ ಎಂದು ಮಂಗೇಶ್ ಆರೋಪಿಸಿದರು.
‘ರಾಜಕಾರಣಿಗಳು, ಸರ್ಕಾರಿ ನೌಕರರು ತಾವು ಮಾಡುವ ಕೆಲಸವನ್ನು ಸೇವೆ ಎನ್ನುತ್ತಾರೆ. ಆದರೆ, ಸಂಬಳ ತೆಗೆದುಕೊಳ್ಳುತ್ತಾರೆ. ಅದೇ ರೀತಿ, ಕ್ರಿಶ್ಚಿಯನ್ ಮೆಷಿನರಿಗಳು ಸೇವೆಯ ಹೆಸರಿನಲ್ಲಿ ಜನರನ್ನು ಮತಾಂತರಗೊಳಿಸುತ್ತವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಹಾಯವಾಣಿ ರೂಪಿಸಿ: ಪುದುಚೆರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಮಾತನಾಡಿ, ‘ಸರ್ಕಾರದ ಯೋಜನೆ ಹಾಗೂ ಸಮಾಜದ ಕೊನೆಯ ವ್ಯಕ್ತಿಯ ನಡುವೆ ಸಾಕಷ್ಟು ಅಂತರವಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದ್ದರೂ, ಸರ್ಕಾರಿ ಸೌಲಭ್ಯಗಳ ಕುರಿತು ಜನರಿಗೆ ಮಾಹಿತಿ ನೀಡುವ ಕಾರ್ಯಕರ್ತರ, ಸ್ವಯಂ ಸೇವಕರ ಕೊರತೆ ಇದೆ’ ಎಂದು ಹೇಳಿದರು.
‘ಜನರಿಂದ, ಜನರಿಗಾಗಿ, ಜನರಿಗೋಸ್ಕರ ತತ್ವದಡಿ ಒಂದು ಸಹಾಯವಾಣಿ ರೂಪಿಸಬೇಕು. ಸರ್ಕಾರದ ವತಿಯಿಂದ ಯಾವ ವರ್ಗಕ್ಕೆ, ಯಾವ ಯೋಜನೆ ರೂಪಿಸಲಾಗಿದೆ. ಇದರಡಿ ಯಾವ ಸೌಲಭ್ಯ ದೊರೆಯಲಿದೆ ಎಂಬುದರ ಬಗ್ಗೆ ದೂರವಾಣಿ ಮೂಲಕ ಮಾಹಿತಿ ನೀಡಬೇಕು. ಶಾಲಾ– ಕಾಲೇಜು ವಿದ್ಯಾರ್ಥಿಗಳು, ಎನ್‌ಸಿಸಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ದಿನಕ್ಕೆ ಎರಡು ತಾಸಿನಂತೆ ಈ ಸಹಾಯವಾಣಿಯಲ್ಲಿ ಕೆಲಸ ಮಾಡಿ ಜನರಿಗೆ ಮಾಹಿತಿ ತಲುಪಿಸುವ ಜೊತೆಗೆ, ಅವರ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿಯೂ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.
ಅರ್ಧ ಭಾರತವನ್ನೂ ತಲುಪದ ಮನ್ ಕಿ ಬಾತ್: ಕಿರಣ್ ಬೇಡಿ
‘ಪ್ರಧಾನಿ, ದೇಶದ ಜನರನ್ನು ಉದ್ದೇಶಿಸಿ ‘ಮನ್ ಕಿ ಬಾತ್’ನಲ್ಲಿ ಮಾತನಾಡುತ್ತಾರೆ. ಆದರೆ, ರಾಷ್ಟ್ರೀಯ ಮಾಹಿತಿ ಒಳಗೊಂಡಿರುವ ಈ ಸಂದೇಶ ದೇಶದ ಅರ್ಧಭಾಗದಷ್ಟು ಜನರನ್ನೂ ತಲುಪುತ್ತಿಲ್ಲ. ಸರ್ಕಾರದ ಯೋಜನೆಗಳನ್ನು ದೇಶದ ಕೊನೆಯ ವ್ಯಕ್ತಿಗೆ ತಲುಪಿಸುವ ಕಾರ್ಯ ಆಗಬೇಕಾಗಿದೆ’ ಎಂದು ಕಿರಣ್ ಬೇಡಿ ಸಲಹೆ ನೀಡಿದರು.
‘ಹಿಂದಿಯಲ್ಲಿ ಬರುವ ‘ಮನ್ ಕಿ ಬಾತ್’ನ ಅನುವಾದ, ಕನ್ನಡವೂ ಸೇರಿದಂತೆ ಎಲ್ಲ ಭಾಷೆಗಳಲ್ಲಿ ಪ್ರಸಾರವಾಗುತ್ತದೆ. ಆದರೆ, ನೇರವಾಗಿ ಭಾಷಣ ಆಲಿಸುವುದಕ್ಕೂ, ನಂತರ ಭಾಷಾಂತರ ಕೇಳುವುದಕ್ಕೂ ವ್ಯತ್ಯಾಸವಿರುತ್ತದೆ. ಅದರ ಭಾವ ಸರಿಯಾಗಿ ಜನರನ್ನು ತಲುಪುವುದಿಲ್ಲ. ಹೀಗಾಗಿ, ಏಕಕಾಲಕ್ಕೆ ಎಲ್ಲ ಭಾಷೆಗಳಲ್ಲಿ ಈ ಕಾರ್ಯಕ್ರಮ ಪ್ರಸಾರವಾಗುವಂತಹ ತಂತ್ರಾಂಶವನ್ನು ಅಭಿವೃದ್ಧಿಪಡಿಸಬೇಕಾಗಿದೆ’ ಎಂದು ಅವರು ಹೇಳಿದರು.
‘ಸರ್ಕಾರದ ಯೋಜನೆಗಳ ಮಾಹಿತಿಗಾಗಿ ನಿತ್ಯವೂ ಲೋಕಸಭಾ, ರಾಜ್ಯಸಭಾ ಚಾನೆಲ್‌ಗಳನ್ನು ಜನರು ವೀಕ್ಷಿಸಬೇಕು. ಮುದ್ರಾ, ಜನ–ಧನ್ ಸೇರಿದಂತೆ ಕೇಂದ್ರ ಪುರಸ್ಕೃತ ಎಲ್ಲ ಯೋಜನೆಗಳ ಬಗ್ಗೆ ಇವುಗಳಲ್ಲಿ ಮಾಹಿತಿ ಸಿಗುತ್ತದೆ’ ಎಂದು ಹೇಳಿದರು.