ಉಡುಪಿ: ಮಾರ್ಚ್ 30 ರಿಂದ ಎಪ್ರಿಲ್ 13 ರವರೆಗೆ ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ನಡೆಸುವ ಸಂಬಂಧ ಜಿಲ್ಲಾಧಿಕಾರಿ ಡಾ ವಿಶಾಲ್ ಆರ್ ಅವರ ಅಧ್ಯಕ್ಷತೆಯಲ್ಲಿ ಇಂದು ಪ್ರೌಢ ಶಿಕ್ಷಣ ಇಲಾಖೆಯ ಸಭೆ ನಡೆಯಿತು.
ಜಿಲ್ಲೆಯ 58 ಪರೀಕ್ಷಾ ಕೇಂದ್ರಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟು 16074 ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ಬರೆಯಲಿರುವರು. ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯನ್ನು ವಿತರಿಸಲು 14 ತಂಡಗಳನ್ನು ರಚಿಸಿದ್ದು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಪ್ರಭಾರ ವಿದ್ಯಾಂಗ ಉಪನಿರ್ದೇಶಕ ನಾಗರಾಜ್ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 16074 ವಿದ್ಯಾರ್ಥಿಗಳಲ್ಲಿ 15196 ರೆಗ್ಯುಲರ್ ವಿದ್ಯಾರ್ಥಿಗಳು, 364 ಖಾಸಗಿ ವಿದ್ಯಾರ್ಥಿಗಳು, 514 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿರುವರು. ಇವರಲ್ಲಿ 8315 ವಿದ್ಯಾರ್ಥಿಗಳು ಹಾಗೂ 7759 ವಿದ್ಯಾರ್ಥಿನಿಯರು. ಎಲ್ಲ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನುಕೂಲವಾಗುವಂತಹ ವಾತಾವರಣವಿರಬೇಕು; ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷಾ ದಿನಗಳಂದು ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಲಾಗಿದ್ದು. ವ್ಯವಸ್ಥೆಗಳಲ್ಲಿ ಯಾವುದೇ ಲೋಪವಾಗಬಾರದು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಪರೀಕ್ಷೆಯನ್ನು ಸುಸೂತ್ರವಾಗಿ ಆಯೋಜಿಸಲು ಕ್ರಮಗಳನ್ನು ಕೈಗೊಂಡಿದ್ದು, ಪ್ರತೀ ಪರೀಕ್ಷಾ ಕೇಂದ್ರಕ್ಕೆ ಆಯಾಯ ಪ್ರೌಢಶಾಲೆಯ ಮುಖ್ಯ ಶಿಕ್ಷಕರನ್ನು ಮುಖ್ಯ ಅಧೀಕ್ಷಕರಾಗಿ, ಪ್ರತಿ ವಲಯಕ್ಕೆ ಬೇರೆ ಜಿಲ್ಲೆಯ ಡಯಟ್ನ ಉಪನ್ಯಾಸಕರನ್ನು ಜಾಗೃತ ದಳದ ಅಧಿಕಾರಿಗಳನ್ನಾಗಿ, ಇಬ್ಬರು ಮುಖ್ಯ ಶಿಕ್ಷಕರನ್ನು ಸ್ಥಾನಿಕ ಜಾಗೃತಿದಳದ ಸದಸ್ಯರಾಗಿ ಇಲಾಖೆ ನೇಮಿಸಿದೆ.
ಪರೀಕ್ಷಾ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ನೀಡಲು ಜಿಲ್ಲಾ ಮಟ್ಟದಲ್ಲಿ ಉಪನಿರ್ದೇಶಕರ ನೇತೃತ್ವದಲ್ಲಿ ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಹಣಾಧಿಕಾರಿಗಳು, ತಾಲೂಕು ಪಂಚಾಯತ್, ತಹಶೀಲ್ದಾರ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಜಾಗೃತದಳವನ್ನು ನೇಮಕ ಮಾಡಲಾಗುತ್ತದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಸಮಿತಿ ಕಾರ್ಯನಿರ್ವಹಿಸಲಿದ್ದು, ಸದರಿ ಸಮಿತಿಯನ್ನು ರಚಿಸುವಂತೆ ಜಿಲ್ಲಾಧಿಕಾರಿಗಳಲ್ಲಿ ವಿನಂತಿಸಲಾಯಿತು.
ಪರೀಕ್ಷಾ ಕೆಂದ್ರದ ಸುತ್ತಲೂ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಮತ್ತು ಪರೀಕ್ಷಾ ಕೇಂದ್ರದ ಸುತ್ತಲಿನ 200 ಮೀ ಪ್ರದೇಶವನ್ನು ನಿಷೇಧಿತ ಪ್ರದೇಶವನ್ನಾಗಿ ಘೋಷಿಸಲು ಜಿಲ್ಲಾಧಿಕಾರಿಗಳಲ್ಲಿ ವಿನಂತಿಸಲಾಯಿತು.
ಭದ್ರತೆಗಾಗಿ ಪೊಲೀಸ್ ಕಾನ್ಸ್ಟೇಬಲ್ ನೇಮಿಸಲು ಮತ್ತು ಪೊಲೀಸ್ ಬಂದೋಬಸ್ತ್ಗಳನ್ನು ಒದಗಿಸಲು ಇಲಾಖಾ ಸೂಚನೆಯನ್ವಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಕೋರಲಾಗಿದೆ.
ಜಿಲ್ಲೆಯಲ್ಲಿ ಸುಸೂತ್ರ ಪರೀಕ್ಷಾ ನಿರ್ವಹಣೆಗೆ ಎಲ್ಲರ ಸಹಕಾರವನ್ನು ವಿದ್ಯಾಂಗ ಉಪನಿರ್ದೇಶಕರು ಕೋರಿದ್ದಾರೆ.
ಮಾರ್ಚ್ 30 ರಿಂದ ಎಪ್ರಿಲ್ 13 ರವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಜಿಲ್ಲೆ ಸಜ್ಜು
Spread the love
Spread the love