ಮಾ.15: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಜಾತ್ರಾ ಮಹೋತ್ಸವ
ಕುಂದಾಪುರ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಜಾತ್ರಾ ಮಹೋತ್ಸವವು ಮಾ.15 ರಂದು ಗಣಪತಿ ಪ್ರಾರ್ಥನೆಯೊಂದಿಗೆ ಧಾರ್ಮಿಕ ವಿಧಿಗಳು ಆರಂಭಗೊಳ್ಳಲಿದ್ದು, ಧ್ವಜಾರೋಹಣ, ಯಾಗ ಶಾಲೆ ಪ್ರವೇಶ, ಭೇರಿ ತಾಡನ, ಕೌತುಕ ಬಂಧನ ಹಾಗೂ ನಗರೋತ್ಸವ ನಡೆಯಲಿದೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಗ್ಗರ್ಸೆ ಹೇಳಿದ್ದಾರೆ.
ದೇಗುಲದ ವಾರ್ಷಿಕ ಜಾತ್ರೆ ಹಾಗೂ ಶ್ರೀ ಮನ್ಮಹಾರಥೋತ್ಸವದ ಬಗ್ಗೆ ಭಾನುವಾರ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.16 ರಿಂದ 21 ರವರೆಗೆ ಪ್ರತಿ ದಿನ ರಾತ್ರಿ ಮಯೂರ, ಡೋಲಾ, ಪುಷ್ಪಮಂಟಪ, ವೃಷಭ, ಗಜ, ಸಿಂಹ ವಾಹನೋತ್ಸವದ ಪುರಮೆರವಣಿಗೆ ಓಲಗ ಮಂಟಪದವರೆಗೂ ನಡೆಯಲಿದೆ. ಪ್ರತಿ ದಿನ ಸಂಜೆ ಕಟ್ಟೆ ಉತ್ಸವ, ಸ್ವರ್ಣಮುಖಿ ರಂಗ ಮಂದಿರದಲ್ಲಿ ದೇಶದ ವಿವಿಧ ಭಾಗದ ಕಲಾವಿದರುಗಳಿಂದ ಸೇವಾ ರೂಪದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಮಾ.22 ರಂದು ಬೆಳಿಗ್ಗೆ 11.15 ಕ್ಕೆ ರಥಾರೋಹಣ ಹಾಗೂ ಸಂಜೆ 4 ಕ್ಕೆ ರಥ ಅವರೋಹಣ ನಡೆಯಲಿದೆ. ಮಾ.23 ಕ್ಕೆ ಓಕುಳಿ ಉತ್ಸವ, ತೆಪ್ಪೋತ್ಸವ ಹಾಗೂ ಅವಭೃತ ಸ್ನಾನ ನಡೆಯಲಿದ್ದು, ಮಾ.24 ರಂದು ಬೆಳಿಗ್ಗೆ 7 ಕ್ಕೆ ಅಶ್ವಾರೋಹಣೋತ್ಸವದಲ್ಲಿ ಶ್ರೀದೇವಿಯನ್ನು ಕರೆತಂದು ಸರಸ್ವತಿ ಮಂಟಪದಲ್ಲಿ ಕುಳ್ಳಿರಿಸಿ, ಯಾಗ ಶಾಲೆಯಲ್ಲಿ ಶಾಂತಿ ತತ್ವ ಕಲಾಭಿವೃದ್ಧಿ ಹೋಮದ ಪೂರ್ಣಾಹುತಿ ನಡೆಸಲಾಗುವುದು. ಉತ್ಸವದ ಅವಧಿಯಲ್ಲಿ ದೇವಸ್ಥಾನ ಹಾಗೂ ನಗರವನ್ನು ವಿದ್ಯುತ್ ದೀಪಾಲಂಕಾರಗಳಿಂದ ಶೃಂಗರಿಸಲಾಗುವುದು. ಭಕ್ತರ ಮಾರ್ಗಾಯಸಕ್ಕಾಗಿ ವಿವಿಧ ಸಂಘ-ಸಂಸ್ಥೆಗಳು ಹಾಗೂ ಭಕ್ತರ ಸಹಕಾರದಿಂದ ಪಾನಕ ಹಾಗೂ ಮಜ್ಜಿಗೆ ವಿತರಣೆ ನಡೆಯಲಿದೆ. ನೆರಳಿಗಾಗಿ ಶಾಮಿಯಾನ ವ್ಯವಸ್ಥೆ ಕಲ್ಪಿಸಲಾಗುವುದು. ನೂಕು ನುಗ್ಗಲು ನಿಯಂತ್ರಣ, ಪಾರ್ಕಿಂಗ್ ವ್ಯವಸ್ಥೆಯ ನಿರ್ವಹಣೆ ಹಾಗೂ ಕಾನೂನು ಸುವ್ಯವಸ್ಥೆ ಪಾಲನೆಗಾಗಿ ಪೊಲೀಸ್ ಹಾಗೂ ಗ್ರಹ ರಕ್ಷಕದಳ ಸಿಬ್ಬಂದಿಗಳ ಸೇವೆ ಪಡೆದುಕೊಳ್ಳಲಾಗುವುದು ಎಂದರು.
ಆರೋಗ್ಯ, ವಸತಿ, ನೈರ್ಮಲ್ಯ, ಉಟೋಪಚಾರ, ನೀರು ಸೇರಿದಂತೆ ಜಾತ್ರೆಗೆ ಬರುವ ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಲು ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ತಂತ್ರಿ ಕೆ.ನಿತ್ಯಾನಂದ ಅಡಿಗ, , ಮಹಾಲಿಂಗ ವೆಂಕ ನಾಯ್ಕ್, ಧನಾಕ್ಷಿ, ಸುಧಾ ಕೆ, ಸುರೇಂದ್ರ ಶೆಟ್ಟಿ, ಅಭಿಲಾಷ್ ಪಿ.ವಿ, ಯು.ರಾಜೇಶ್ ಕಾರಂತ್, ರಘುರಾಮ ದೇವಾಡಿಗ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ಅರ್ಚಕರು, ಸಿಬ್ಬಂದಿಗಳು, ಭಕ್ತರು ಹಾಗೂ ಸ್ಥಳೀಯರ ಸಹಕಾರದಲ್ಲಿ ಪೂರ್ವ ಸಿದ್ದತೆಗಳು ನಡೆಯುತ್ತಿದೆ ಎಂದು ಅಧ್ಯಕ್ಷ ಕೆ.ಬಾಬು ಶೆಟ್ಟಿ ತಿಳಿಸಿದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಪರಿಸರದ ಸುತ್ತ-ಮುತ್ತ ಇರುವ ಅತಿಕ್ರಮಣವಾಗಿರುವ ಹಾಗೂ ಒತ್ತುವರಿಯಾಗಿರುವ ದೇಗುಲದ ಜಾಗದ ತೆರವಿಗೆ ಹಾಗೂ ರಾಜ್ಯದ ಇತರ ಭಾಗದಲ್ಲಿ ಇರುವ ದೇವಳದ ಜಾಗಗಳನ್ನು ಗುರುತಿಸಿ ದೇವಸ್ಥಾನದ ಸುಪರ್ದಿಗೆ ತೆಗೆದುಕೊಳ್ಳುವ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಲಾಗುವುದು. ಒತ್ತುವರಿ ಜಾಗವನ್ನು ಗುರುತಿಸಿ, ತೆರವು ಮಾಡುವ ಕುರಿತು ಜಿಲ್ಲಾಡಳಿತ ಹಾಗೂ ಮುಜುರಾಯಿ ಇಲಾಖೆಯ ಮಾರ್ಗದರ್ಶನ ಹಾಗೂ ಕಾನೂನು ತಜ್ಞರ ಅಭಿಪ್ರಾಯವನ್ನು ಪಡೆದುಕೊಳ್ಳಲಾಗುವುದು. ಪರಭಾರೆಯಾಗಿರುವ ಜಾಗಗಳನ್ನು ಗುರುತಿಸಿ ಸರ್ವೇ ಹಾಗೂ ಇತರ ಕಾನೂನಾತ್ಮಕ ಕ್ರಮಗಳ ಅನುಸರಣೆಗಾಗಿ ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವ ಕುರಿತು ಚಿಂತನೆ ನಡೆಸಲಾಗಿದೆ. 72 ಸೆಂಟ್ಸ್ ಒತ್ತುವರಿ ಆಗಿರುವ ಕುರಿತು ಪ್ರಾಥಮಿಕ ಮಾಹಿತಿ ಇದ್ದು, ವೈಜ್ಞಾನಿಕ ಸರ್ವೇಯಿಂದ ನಿಖರ ಮಾಹಿತಿ ದೊರೆಯುತ್ತದೆ. ದೇವಸ್ಥಾನಕ್ಕೆ ಬರಬೇಕಾಗಿರುವ ಬಾಡಿಗೆ ಹಾಗೂ ಇತರ ಬಾಕಿ ಹಣಗಳ ವಸೂಲಿಗೂ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕಲುಷಿತಗೊಳ್ಳುತ್ತಿರುವ ಹಾಗೂ ಭಕ್ತರ ಭಾವನೆಗಳನ್ನು ಘಾಸಿಗೊಳಿಸುತ್ತಿರುವ ಸೌಪರ್ಣಿಕ ನದಿಯ ನೀರನ್ನು ಶುದ್ಧವಾಗಿರಿಸಲು ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನದಿಯ ಇಕ್ಕೆಲಗಳಲ್ಲಿ ಇರುವ ವಸತಿ ಗ್ರಹಗಳು ಹಾಗೂ ಇತರ ಕಟ್ಟಡಗಳಿಂದ ತ್ಯಾಜ್ಯಗಳನ್ನು ಪುಣ್ಯ ನದಿಗೆ ಬಿಡುತ್ತಿರುವುದನ್ನು ಕಡ್ಡಾಯವಾಗಿ ನಿರ್ಬಂಧಿಸುವಂತೆ ಸೂಚನೆ ನೀಡಲಾಗಿದೆ. ಒಳಚರಂಡಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಇರುವ ಅಡೆ-ತಡೆಗಳ ನಿವಾರಣೆಗಾಗಿ ಸಭೆಗಳನ್ನು ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ಮಹತ್ವಾಕಾಂಕ್ಷೆಯ ಯುಜಿಡಿ ಯೋಜನೆಯ ಸದ್ಭಳಿಕೆ ಮಾಡಿಕೊಳ್ಳುವಂತೆ ಕೊಲ್ಲೂರು ನಿವಾಸಿಗಳಿಗೆ ಹಾಗೂ ವಾಣಿಜ್ಯ ಬಳಕೆದಾರರಿಗೆ ಮನವಿ ಮಾಡಿಕೊಳ್ಳಲಾಗಿದೆ. ಅಗತ್ಯವಿರುವ ಪಂಪ್ ಹಾಗೂ ದುರಸ್ತಿ ಕಾರ್ಯಕ್ಕೆ ನೆರವು ನೀಡಲಾಗುತ್ತದೆ. ಯುಜಿಡಿ ನಿರ್ವಹಣೆಯನ್ನು ಹೊರ ಗುತ್ತಿಗೆಯ ಮೂಲಕ ದೇಗುಲವೇ ನಿರ್ವಹಿಸುವ ಕುರಿತು ತೀರ್ಮಾನಿಸಲಾಗಿದ್ದು, ಗ್ರಾಮ ಪಂಚಾಯಿತಿಯ ಸಹಕಾರದಲ್ಲಿ ಕಾರ್ಯಯೋಜನೆ ಸಿದ್ಧಗೊಳಿಸಲಾಗುತ್ತಿದೆ ಎಂದರು.
ಭಕ್ತರು, ಸ್ಥಳೀಯರು ಹಾಗೂ ಸಿಬ್ಬಂದಿಗಳು ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಿದ್ದಲ್ಲಿ, ನಿರೀಕ್ಷೆಗೂ ಮೀರಿ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ವ್ಯವಸ್ಥಾಪನಾ ಸಮಿತಿ ಬದ್ಧವಾಗಿದೆ. ಲಲಿತಾಂಬಿಕಾ ವಸತಿ ಗ್ರಹದ ನವೀಕರಣ ಹಾಗೂ ದುರಸ್ತಿಗಾಗಿ ಅಂದಾಜು 2 ಕೋಟಿ ರೂ. ಯೋಜನೆ ತಯಾರಿಸಲಾಗಿದೆ. ಜೀರ್ಣಗೊಂಡಿರುವ ಸೌಪರ್ಣಿಕ ವಸತಿಗ್ರಹವನ್ನು ತೆರವುಗೊಳಿಸಿ ಅಲ್ಲಿ ಅಂದಾಜು 19 ಕೋಟಿ ರೂ. ವೆಚ್ಚದಲ್ಲಿ 65 ಕೊಠಡಿಗಳ ಬಹುಮಹಡಿ ವಸತಿಗ್ರಹ ನಿರ್ಮಾಣಕ್ಕೆ ಪ್ರಾಸ್ತಾವನೆ ಸಲ್ಲಿಸಲಾಗಿದ್ದು, ಅದನ್ನು 100 ಕೊಠಡಿಗಳಿಗೆ ಹೆಚ್ಚಿಸಬೇಕು ಎನ್ನುವ ಯೋಚನೆ ಇದೆ. ಗೋಳಿಹೊಳೆ ಗ್ರಾಮದ 8.5 ಎಕ್ರೆ ಜಾಗದಲ್ಲಿ ಗೋಶಾಲೆ ಅಭಿವೃದ್ಧಿಯಾಗುತ್ತಿದ್ದು, ಇಲ್ಲಿ 46 ಲಕ್ಷ ರೂ. ವೆಚ್ಚದಲ್ಲಿ ಎರಡು ಕಟ್ಟಡಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಶಿಕ್ಷಣ ತಜ್ಞರ ಮಾರ್ಗದರ್ಶನ ಪಡೆದುಕೊಂಡು, ದೇಗುಲದ ಶಾಲೆಗಳ ಕಾಯಕಲ್ಪಕ್ಕೂ ಯೋಜನೆ ರೂಪಿಸಲಾಗುತ್ತಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇಂಗ್ಲೀಷ್ ಭಾಷಾ ಅಧ್ಯಯನಕ್ಕೂ ಅವಕಾಶ ನೀಡಲಾಗುವುದು. ಜ್ಯೂನಿಯರ್ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಆರಂಭಕ್ಕಾಗಿ ಅನುಮತಿ ಕೇಳಿ ಇಲಾಖೆಗೆ ಪತ್ರ ಬರೆಯಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಅನುಮೋದನೆ ನೀಡಿರುವ 5 ಕೋಟಿ ರೂ. ಅನುದಾನದಲ್ಲಿ ಸೌಪರ್ಣಿಕ ಸ್ನಾನಘಟ್ಟವನ್ನು ಅಭಿವೃಧ್ಧಿಗೊಳಿಸಲಾಗುವುದು. ಮಳೆಗಾಲದಲ್ಲಿ ಸೋರುತ್ತಿರುವ ದೇಗುಲದ ಪುರಾತನ ಗರ್ಭಗುಡಿಯ ದುರಸ್ತಿಗಾಗಿ ಋತ್ವೀಜರ ಹಾಗೂ ತಜ್ಞರ ಸಲಹೆ ಪಡೆದುಕೊಂಡು ದಾನಿಗಳ ಸಹಕಾರದಲ್ಲಿ ದುರಸ್ತಿ ಕಾರ್ಯವನ್ನು ಮಾಡಲಾಗುವುದು. ಖಾಸಗಿ ಸಹಭಾಗಿತ್ವದಲ್ಲಿ ದಿನದ 24 ಗಂಟೆಯೂ ದೇವಸ್ಥಾನದ ಒಳ ಹಾಗೂ ಹೊರ ಆವರಣದ ಚಟುವಟಿಕೆಗಳನ್ನು ಸಿಸಿ ಕ್ಯಾಮರಾ ಮೂಲಕ ಕಣ್ಗಾವಲು ನಡೆಸಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಕೆ.ಬಾಬು ಶೆಟ್ಟಿ ತಿಳಿಸಿದರು.
ದೇವಸ್ಥಾನದ ಪಾರ್ಕಿಂಗ್‌ನಲ್ಲಿ ಟೆಂಡರ್‌ನಲ್ಲಿ ನಮೂದಾಗಿರುವ ಮೊತ್ತಕ್ಕಿಂತ ಹೆಚ್ಚಿನ ಶುಲ್ಕವನ್ನು ವಸೂಲು ಮಾಡಲಾಗುತ್ತಿದೆ ಎನ್ನುವ ಕುರಿತು ಸಾರ್ವಜನಿಕ ದೂರುಗಳಿದ್ದು, ಷರತ್ತು ಉಲ್ಲಂಘನೆಯ ಕುರಿತು ಈಗಾಗಲೇ ಗುತ್ತಿಗೆದಾರರಿಗೆ ನೋಟಿಸು ನೀಡಲಾಗಿದ್ದು, ಸಮಂಜಸ ಉತ್ತರ ಬಾರದೆ ಇದ್ದಲ್ಲಿ, ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ ತಿಳಿಸಿದರು.
ಪ್ರವೇಶ ದ್ವಾರದ ಕೀಲಿ ಕೈಗೆ ಡಿ.ಸಿ ಗೆ ಮನವಿ :
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೆ.ಬಾಬು ಶೆಟ್ಟಿ, ರಘುರಾಮ ದೇವಾಡಿಗ ಆಲೂರು, ಧನಾಕ್ಷಿ ಹಾಗೂ ಸುಧಾ ಕೆ ಅವರುಗಳು, ದೇಗುಲದ ಪೌಳಿಯ ಸಮೀಪದ ರಥ ಬೀದಿಗೆ ಅಳವಡಿಸಿರುವ ಪ್ರವೇಶ ದ್ವಾರ ( ಗೇಟ್ ) ನಿರ್ವಹಣೆಯನ್ನು ದೇವಸ್ಥಾನದ ಹೊರ ಗುತ್ತಿಗೆಯ ಸಿಬ್ಬಂದಿಗಳ ಜೊತೆಗೆ ಸ್ಥಳೀಯ ಖಾಸಗಿ ಲಾಡ್ಜ್ ಒಂದರ ಸಿಬ್ಬಂದಿಗಳು ಮಾಡುತ್ತಿರುವ ಬಗ್ಗೆ ಸಾರ್ವಜನಿಕ ಆಕ್ಷೇಪಣೆಗಳು ಇರುವ ಕುರಿತು ದೇವಸ್ಥಾನದ ಆಡಳಿತಕ್ಕೆ ಮಾಹಿತಿ ಇದೆ. ಈ ಹಿಂದೆ ಜಿಲ್ಲಾಡಳಿತ ಯಾವುದೋ ಸೀಮಿತ ಉದ್ದೇಶಕ್ಕಾಗಿ ಖಾಸಗಿಯವರಿಗೆ ಗೇಟ್ ನಿರ್ವವಹಣೆಗೆ ಆದೇಶ ನೀಡಿತ್ತು. ಈ ಕುರಿತು ಮುಂದಿನ ಆಡಳಿತ ಮಂಡಳಿಯ ಸಭೆಯಲ್ಲಿ ವಿಸ್ತ್ರತ ಚರ್ಚೆ ನಡೆಸಿ, ಖಾಸಗಿಯವರ ಹಕ್ಕುಸ್ಥಾಮ್ಯದಿಂದಾಗಿ ದೇವಸ್ಥಾನದ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎನ್ನುವ ಅಂಶವನ್ನು ಜಿಲ್ಲಾಡಳಿತದ ಗಮನಕ್ಕೆ ತಂದು, ಜಿಲ್ಲಾಧಿಕಾರಿಗಳ ಅನುಮತಿ ಪಡೆದುಕೊಂಡು ಪ್ರವೇಶ ದ್ವಾರದ ನಿರ್ವಹಣೆಯನ್ನು ದೇವಸ್ಥಾನದ ವತಿಯಿಂದಲೇ ನಡೆಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ರಘರಾಮ ದೇವಾಡಿಗ ಆಲೂರು, ಧನಾಕ್ಷಿ ವಿಶ್ವನಾಥ ಪೂಜಾರಿ, ಸುರೇಂದ್ರ ಶೆಟ್ಟಿ ಇದ್ದರು. ಸಿಬ್ಬಂದಿ ಸಂತೋಷ್ ಕೊಠಾರಿ ಸ್ವಾಗತಿಸಿದರು.