ಮಾ. 2: ಕಾರ್ಕಳದಲ್ಲಿ ಕಾಂಗ್ರೆಸ್ ಕುಟುಂಬೋತ್ಸವ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭಾಗಿ
ಉಡುಪಿ: ಜನ ಮೆಚ್ಚಿದ ನಾಯಕ, ಯುವಕರ ಕಣ್ಮಣಿ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಮಾ. 2ರಂದು ಸಂಜೆ 4ಗಂಟೆಗೆ ಕಾರ್ಕಳ ಗಾಂಧಿ ಮೈದಾನದಲ್ಲಿ ನಡೆಯುವ ಕಾಂಗ್ರೆಸ್ ಕುಟುಂಬೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಹೇಳಿದರು.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಾವಿರ ಸೀಮೆಯ ಒಡತಿ ಕಾಪು ಮಾರಿಕಾಂಬೆಯ ಪ್ರತಿಷ್ಠಾಪನೆಯಲ್ಲಿ ಭಾಗವಹಿಸಿದ ಉಪಮುಖ್ಯಮಂತ್ರಿಗಳು ಬಳಿಕ ಕಾರ್ಕಳದಲ್ಲಿ ನಡೆಯುವ ಸಂಭ್ರಮದಲ್ಲಿ ಜೊತೆಯಾಗಲಿದ್ದಾರೆ. ಈ ಬಾರಿಯ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಕಾರ್ಯಕರ್ತರನ್ನು ಹುರಿದುಂಬಿಸಲಿದ್ದಾರೆ.
ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 209 ಬೂತ್ ಗಳ, 34 ಗ್ರಾಮೀಣ ಕಾಂಗ್ರೆಸ್ ಗಳ ಹಾಗೂ 2 ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇದೇ ವೇದಿಕೆಯಲ್ಲಿ ನಡೆಯಲಿದ್ದು ಕಾಂಗ್ರೆಸ್ ಕುಟುಂಬ ಒಂದಾಗಿ ಸಂಭ್ರಮಿಸಲಿದೆ ಎಂದರು.
ಈಗಾಗಲೇ ಉಚಿತ ಗ್ಯಾರಂಟಿ ಯೋಜನೆಯ ಮೂಲಕ ಜನಮನಗೆದ್ದ ಕಾಂಗ್ರೆಸ್ ಸರಕಾರದ ಜನಪರ ಯೋಜನೆಗಳನ್ನು ಜನ ಕೊಂಡಾಡುತ್ತಿದ್ದು ಅದರಲ್ಲೂ ವಿಶೇಷವಾಗಿ ಗೃಹಲಕ್ಷ್ಮಿ ಯೋಜನೆ, ಉಚಿತ ಕರೆಂಟ್ ಮೊದಲಾದ ಜನಪದ ಯೋಜನೆಗಳು ಮಹಿಳೆಯರ ಮನ ಗೆದ್ದಿದೆ. ಆದ್ದರಿಂದ ಬೃಹತ್ ಸಂಖ್ಯೆಯ ಮಹಿಳೆಯರು ಸೇರಿದಂತೆ ಸಹಸ್ರ ಸಂಖ್ಯೆಯ ಜನ ಕಾಂಗ್ರೆಸ್ ಕುಟುಂಬೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಕಾಂಗ್ರೆಸ್ ನ ಹಿರಿಯ ನಾಯಕರಾದ ಡಾ. ವೀರಪ್ಪ ಮೊಯ್ಲಿ ಅವರು ಶಾಸಕತ್ವವನ್ನು ಪಡೆದು 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅವರಿಗೆ ಕಾಂಗ್ರೆಸ್ ಕುಟುಂಬೋತ್ಸವದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಅಲ್ಲದೆ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ, ಪದಾಧಿಕಾರಿಗಳ ಪದಗ್ರಹಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ ಉಪಸ್ಥಿತರಿದ್ದರು.