ಮೀನುಗಾರರಿಗೆ ಸಮರ್ಪಕವಾಗಿ ಸೀಮೆ ಎಣ್ಣೆ ವಿತರಣೆಗೆ ರಾಜ್ಯ ಸರಕಾರದ ಕ್ರಮ : ಉಡುಪಿ ಜಿಲ್ಲಾ ಕಾಂಗ್ರೆಸ್
ಉಡುಪಿ: ಮೋಟರೀಕೃತ ದೋಣಿಗಳಿಗೆ ಅಗತ್ಯವಿರುವ ಸೀಮೆಎಣ್ಣೆಯನ್ನು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಿಂದ ಪಡಿತರ ದರದಲ್ಲಿ ವಿತರಣೆ ಮಾಡಲಾಗುತ್ತಿದೆ. ಮೀನುಗಾರರಿಗೆ ಹಂಚಿಕೆ ಮಾಡಲು ಕೇಂದ್ರ ಸರ್ಕಾರವು ನೀಡುವ ಸಬ್ಸಿಡಿಯುಕ್ತ ಸೀಮೆಎಣ್ಣೆಯನ್ನೇ ಉಪಯೋಗಿಸುತ್ತಿದೆ. ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಸೆಪ್ಟಂಬರ್ ತಿಂಗಳಿನಿಂದ ಮೇ ತಿಂಗಳವರೆಗೆ 9 ತಿಂಗಳು ಸಬ್ಸಿಡಿಯುಕ್ತ ಸೀಮೆ ಎಣ್ಣೆ ವಿತರಣೆ ಮಾಡುತ್ತಿದೆ.
ಸರ್ಕಾರದ ಆದೇಶ ಸಂಖ್ಯೆ ಆನಾಸ 255 ಡಿಆರ್‍ಎ 2016 ದಿನಾಂಕ 17-06-2017ನೇ ಸಾಲಿನಲ್ಲಿ ರಾಜ್ಯದ ಕರಾವಳಿ ಜಿಲ್ಲೆಗಳ ಮೋಟರೀಕೃತ ಮೀನುಗಾರಿಕಾ ದೋಣಿಗಳಿಗೆ ಅಗತ್ಯವಿರುವ ಸೀಮೆಎಣ್ಣೆಯನ್ನು ಸಹಾಯಧನರಹಿತ ದರದಲ್ಲಿ ಕೇಂದ್ರ ಸರ್ಕಾರದಿಂದ ಖರೀದಿಸಿ ಅದೇ ದರದಲ್ಲಿ ಮೀನುಗಾರರಿಗೆ ವಿತರಿಸಿ ನಂತರ ಸಹಾಯಧನವನ್ನು ಮೀನುಗಾರರ ಆಧಾರ್ ದೃಢೀಕೃತ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲು ಆಯುಕ್ತರು, ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಇವರಿಗೆ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಆಯವ್ಯಯದಲ್ಲಿ ಒದಗಿಸಿಕೊಳ್ಳುವಂತೆ ತಿಳಿಸಲಾಗಿದೆ.
ಸರ್ಕಾರದ ಆದೇಶ ಸಂಖ್ಯೆ: ಅನಾಸ 317 ಡಿಆರ್‍ಎ 2017 ಬೆಂಗಳೂರು ದಿ. 30-1-2018ರಲ್ಲಿ ಕರಾವಳಿ ಮೀನುಗಾರರ ಹಿತದೃಷ್ಟಿಯಿಂದ ಹಿಂದಿನ ಪದ್ದತಿಯನ್ನೇ ಅನುಸರಿಸಿ ಮೀನುಗಾರರಿಗೆ ಬೇಕಾಗುವ ಸೀಮೆಎಣ್ಣೆಯನ್ನು ಮಾರ್ಚ್-2018ರವರೆಗೂ ಖರೀದಿಸಿ ವಿತರಣೆ ಮಾಡಲು ಆದೇಶಿಸಲಾಗಿದೆ.
2018-19ನೇ ಸಾಲಿಗೆ ಮೀನುಗಾರಿಕೆ ಇಲಾಖೆಯ ಆಯವ್ಯಯದಲ್ಲಿ ರೂ.90.39 ಕೋಟಿ ಅನುದಾನವನ್ನು ಹೆಚ್ಚುವರಿಯಾಗಿ ಒದಗಿಸಲು ಈಗಾಗಲೆ ಸರ್ಕಾರವನ್ನು ಕೋರಲಾಗಿದೆ. ಹಾಗೂ ಸದರಿ ಅನುದಾನವನ್ನು ಆಹಾರ ಇಲಾಖೆಗೆ ಕಾಲಕಾಲಕ್ಕೆ ಬಿಡುಗಡೆ ಮಾಡಲು ಅನುಮತಿ ನೀಡಲು ಕೋರಿದೆ. ಅಥವಾ ಈ ಮೊದಲು ಅನುಷ್ಟಾನಗೊಳಿಸುತ್ತಿದ್ದ ರೀತಿಯಲ್ಲಿಯೇ ಸೀಮೆಎಣ್ಣೆಯನ್ನು ಆಹಾರ ಇಲಾಖೆಯ ಮೂಲಕ ಸರಬರಾಜು ಮಾಡಲು ಆಹಾರ ಇಲಾಖೆಗೆ ಪತ್ರ ಬರೆಯುವಂತೆಯೂ ಸರ್ಕಾರವನ್ನು ಕೋರಲಾಗಿದೆ.
ಮಣಿಪಾಲದಲ್ಲಿ ಬೃಹತ್ ಸಂಖ್ಯೆಯಲ್ಲಿ ಮೀನುಗಾರರು ಪ್ರತಿಭಟನೆ ನಡೆಸಿದರೂ ಸಚಿವರು ಅತ್ತ ಕಡೆ ಸುಳಿಯಲಿಲ್ಲ ಎಂದು ಮಾಜಿ ಶಾಸಕರಾದ ರಘುಪತಿ ಭಟ್‍ರವರು ಆರೋಪಿಸಿರುತ್ತಾರೆ. ಮೀನುಗಾರರಿಗೆ ಪಡಿತರ ಸೀಮೆಎಣ್ಣೆ ಕೊಡುವುದರಿಂದ ಅದು ಆಹಾರ ಇಲಾಖೆಗೆ ಸಂಬಂಧಪಟ್ಟದ್ದು. ಆ ಬಗ್ಗೆ ಆಹಾರ ಇಲಾಖೆ ಹಾಗೂ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಪಡಿತರ ಸೀಮೆ ಎಣ್ಣೆ ಬಗ್ಗೆ ಕರಾವಳಿ ಜಿಲ್ಲೆಗಳ ಮೀನುಗಾರರ ಪರವಾಗಿ ವ್ಯವಹರಿಸುವವರು ಬೈಂದೂರು ಶಾಸಕರಾದ ಗೋಪಾಲ ಪೂಜಾರಿಯಾದುದರಿಂದ, ಕುಂದಾಪುರ ಬೈಂದೂರು ಭಾಗದ ಮೀನುಗಾರರು ಜಿಲ್ಲಾಧಿಕಾರಿ ಕಚೇರಿಯ ಬಳಿ ಸಬ್ಸಿಡಿ ಸೀಮೆ ಎಣ್ಣೆಗೆ ಆಗ್ರಹ ಮಾಡಿ ಪ್ರತಿಭಟನೆ ಮಾಡಿದಾಗ ಗೋಪಾಲ ಪೂಜಾರಿಯವರು ಮನವಿಯನ್ನು ಸ್ವೀಕರಿಸಿದ್ದಾರೆ. ಈ ಬಗ್ಗೆ ಬೇರೆ ಅರ್ಥ ಕಲ್ಪಿಸುವುದು ಸರಿಯಲ್ಲ.
ಕೇಂದ್ರದ ಕೃಷಿ ಸಚಿವ ಶ್ರೀ ರಾಧಾ ಮೋಹನ್ ಸಿಂಗ್‍ರವರ ಭೇಟಿಯು ಅಮಿತ್ ಷಾ ಮಲ್ಪೆಗೆ ಬರುವ ಕೆಲವು ವಾರಗಳ ಮೊದಲೇ ಸಚಿವರ ಪೂರ್ವ ನಿಯೋಜಿತ ಕಾರ್ಯಕ್ರಮವಾಗಿತ್ತು. ವರ್ಷದ ಕೊನೆಯಲ್ಲಿ ಕೇಂದ್ರ ಸರಕಾರದ ಅನುದಾನಗಳು ಬಿಡುಗಡೆಯಾಗುವುದರಿಂದ ಮೀನುಗಾರಿಕಾ ಇಲಾಖೆಗೆ ಸಂಬಂಧಪಟ್ಟ ಪ್ರಸ್ತಾವನೆಗಳಿಗೆ ಕೇಂದ್ರದಿಂದ ಬಿಡುಗಡೆಯಾಗಲು ಬಾಕಿಯಿರುವ ಅನುದಾನವನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಲು ಸಚಿವ ಪ್ರಮೋದ್ ಮಧ್ವರಾಜ್ ರವರು ಭೇಟಿ ಕೊಟ್ಟಿದ್ದರು.
ಮೀನುಗಾರಿಕಾ ಇಲಾಖೆಗೆ ಸಂಬಂಧಪಟ್ಟಂತೆ ಈ ಹಿಂದೆ ಕೂಡಾ ಕೇಂದ್ರ ಕೃಷಿ ಸಚಿವರನ್ನು ಭೇಟಿಯಾಗಿ ಸಮಗ್ರ ಮೀನುಗಾರಿಕಾ ನೀತಿಯನ್ನು ರಚಿಸಲು ದೇಶದ ಎಲ್ಲಾ ರಾಜ್ಯದ ಮೀನುಗಾರಿಕಾ ಸಚಿವರ ಸಮ್ಮೇಳನವನ್ನು ಬೆಂಗಳೂರಿನಲ್ಲಿ ಆಯೋಜಿಸಲು ಮನವಿ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಕಿಂಚಿತ್ತು ಪರಿಜ್ಞಾನವಿಲ್ಲದಿರುವ ಮಾಜಿ ಶಾಸಕರು ಈ ರೀತಿ ಹೇಳಿಕೆ ನೀಡಿ ಚುನಾವಣಾ ಸಂದರ್ಭದಲ್ಲಿ ಮೀನುಗಾರರನ್ನು ದಾರಿತಪ್ಪಿಸುವ ಹೇಳಿಕೆಯನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತದೆ. ಎಂದು ಪತ್ರಿಕಾಹೇಳಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜನಾರ್ಧನ ತೋನ್ಸೆ, ಪ್ರಧಾನ ಕಾರ್ಯದರ್ಶಿ ಬಿ ನರಸಿಂಹಮೂರ್ತಿ , ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ದಿನೇಶ್ ಪುತ್ರನ್ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷರಾದ ಜನಾರ್ಧನ ಭಂಡಾರ್ ಕಾರ್‍ರವರು ತಿಳಿಸಿರುತ್ತಾರೆ.