ಮೀನುಗಾರರ ಪತ್ತೆಗೆ ನ್ಯಾಯಾಲಯದ ಮೊರೆ: ಪಕ್ಷೇತರ ಅಭ್ಯರ್ಥಿ ಅಮೃತ್ ಶೆಣೈ
ಚಿಕ್ಕಮಗಳೂರು : ಚುನಾವಣೆ ಫಲಿತಾಂಶ ಏನೇ ಬರಲಿ ಮಲ್ಪೆಯಲ್ಲಿ ನಾಪತ್ತೆಯಾಗಿರುವ ಮೀನುಗಾರರನ್ನು ಪತ್ತೆ ಹಚ್ಚಿಕೊಡಿ ಎಂದು ನಾನು ನ್ಯಾಯಾಲಯದ ಮೊರೆ ಹೋಗುವುದಾಗಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅಮೃತ್ ಶೆಣೈ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಧುನಿಕ ತಂತ್ರಜ್ಞಾನ ಇಷ್ಟೊಂದು ಮುಂದುವರಿದಿದ್ದರೂ ಇತ್ತೀಚೆಗೆ ಮಲ್ಪೆಯಲ್ಲಿ ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟ್ ಮತ್ತು 7 ಮಂದಿ ಮೀನುಗಾರರನ್ನು 100 ದಿನ ಕಳೆದರೂ ಹುಡುಕದಿರುವುದು ದುರಾದೃಷ್ಟಕರ. ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಅವರು ತಿಳಿಸಿದರು.
ತಾವು ಸಂಸದನಾಗಿ ಆಯ್ಕೆಯಾದಲ್ಲಿ ಉಡುಪಿ ಜಿಲ್ಲೆಯ ಮರಳಿನ ಸಮಸ್ಯೆ ಪರಿಹರಿಸುತ್ತೇನೆ. ಯುವ ಜನಾಂಗ ಎರಡೂ ಜಿಲ್ಲೆಯಲ್ಲಿ ಉದ್ಯೋಗ ಅರಸಿ ಗುಳೆ ಹೋಗುತ್ತಿದ್ದು ಊರುಗಳು ವೃದ್ಧಾಶ್ರಮಗಳಾಗುತ್ತಿವೆ. ಆಯಾ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿ ಮಾಡುವ ಉದ್ದೇಶದಿಂದ ಸಾಫ್ಟ್ವೇರ್ ಪಾರ್ಕ್ ಮತ್ತಿತರೆ ಉದ್ದಿಮೆ ಸ್ಥಾಪಿಸಲಾಗುವುದು ಎಂದರು.
ದೇಶದಲ್ಲಿ ಕನಿಷ್ಠ ಸಾವಿರಾರು ರೂ. ಸಾಲ ತೀರಿಸಲಾಗದೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದರೆ, ಸಾವಿರಾರು ಕೋಟಿ ರೂ.ಸಾಲ ತೀರಿಸದೆ ಶ್ರೀಮಂತ ಉದ್ಯಮಿಗಳು ವಿದೇಶಕ್ಕೆ ಪಲಾಯನ ಮಾಡಿ ಅಲ್ಲಿ ನೆಮ್ಮದಿಯಾಗಿ ಬದುಕುತ್ತಿದ್ದಾರೆ. ಇದನ್ನು ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ, ಅಡಕೆ ಮತ್ತು ಕಾಫಿ ಬೆಳೆ ಹಾಗೂ ಕುದುರೆಮುಖ ಕಾರ್ಮಿಕರ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲಾಗುವುದು. ರಾಷ್ಟ್ರೀಯ ಹೆದ್ದಾರಿ, ಟೋಲ್ಗೇಟ್, ಸಿಆರ್ಜೆಡ್ ಬಗ್ಗೆ ಸಂಸತ್ತಿನಲ್ಲಿ ನ್ಯಾಯೋಚಿತ ಹೋರಾಟ ಮಾಡಲಾಗುವುದು. ಉಡುಪಿ ಮತ್ತು ಚಿಕ್ಕಮಗಳೂರು ಅದ್ಭುತ ಪ್ರವಾಸಿ ತಾಣಗಳಾಗಿದ್ದು ಅವುಗಳನ್ನು ವಿಶ್ವವಿಖ್ಯಾತ ಪ್ರವಾಸಿ ತಾಣಗಳನ್ನಾಗಿ ರೂಪಿಸುವ ಯೋಜನೆ ತಂದು ಜಿಲ್ಲೆಗಳ ಆರ್ಥಿಕ ಸ್ಥಿತಿ ಉತ್ತಮ ಪಡಿಸಲಾಗುವುದು ಎಂದು ಹೇಳಿದರು.
ಮುಖಂಡರಾದ ಅನಿತಾಡಿಸೋಜ, ಪ್ರಶಾಂತ್ ಕುಂದರ್, ಹನೀಫ್, ವರದರಾಜು ಹಾಜರಿದ್ದರು.