ಮೀನುಗಾರಿಕಾ ಫೆಡರೇಶನ್ ಹಗರಣದಲ್ಲಿ ನ್ಯಾಯಕ್ಕಾಗಿ ಹೋರಾಟ ಹೊರತು ಯಾರದೇ ತೇಜೋವಧೆಯ ಉದ್ದೇಶವಿಲ್ಲ; ಯುವ ಕಾಂಗ್ರೆಸ್
ಉಡುಪಿ: ದ.ಕ. ಹಾಗೂ ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನಲ್ಲಿ ನಡೆದಿರುವ ಬಹುಕೋಟಿ ಹಗರಣದ ನ್ಯಾಯಯುತ ತನಿಖೆಯಾಗಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂಬುದು ಉದ್ದೇಶವೇ ಬಿಟ್ಟು ಬೇರೆ ಯಾವುದೇ ವ್ಯಕ್ತಿಯ ತೇಜೋವಧೆಯ ಉದ್ದೇಶವಲ್ಲ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಪೂಜಾರಿ ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಯಶ್ಪಾಲ್ ಸುವರ್ಣರವರು ಈ ಹಿಂದೆ ಎಂ.ಎಲ್.ಎ. ಟಿಕೆಟ್ಗೂ ಲಾಬಿ ನಡೆಸಿದ್ದಾರೆ. ಅವರು ನಗರಸಭಾ ಚುನಾವಣೆಯ ಟಿಕೆಟ್ ಗಿಟ್ಟಿಸಲು ವಿಫಲರಾಗಿರುತ್ತಾರೆ. ಪ್ರತೀ ಚುನಾವಣಾ ಸಂದರ್ಭದಲ್ಲೂ ಅವರ ಪಕ್ಷದ ಟಿಕೆಟ್ಗೆ ಲಾಬಿ ಮಾಡುವುದು ಅವರ ಹವ್ಯಾಸ ಆಗಿ ಹೋಗಿದೆ. ಅವರು ಎಂ.ಪಿ. ಟಿಕೆಟ್ಗೆ ಲಾಬಿ ನಡೆಸಿರುವುದು ಪಕ್ಷ ಅವರಿಗೆ ಟಿಕೆಟ್ ನೀಡುವುದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಆದರೆ ಜಿಲ್ಲಾ ಯುವ ಕಾಂಗ್ರೆಸ್ನ ಅಧ್ಯಕ್ಷರು ಹಾಗೂ ಪಕ್ಷದ ಮುಖಂಡರುಗಳು 600 ಪುಟಕ್ಕೂ ಹೆಚ್ಚಿನ ದಾಖಲೆಯನ್ನು ಪತ್ರಿಕಾಗೋಷ್ಟಿಯಲ್ಲಿ ಬಿಡುಗಡೆ ಮಾಡಿರುತ್ತಾರೆ. ಈ ಎಲ್ಲಾ ದಾಖಲೆಗಳನ್ನು ಮೀನುಗಾರಿಕಾ ಸಹಾಯಕ ನಿರ್ದೇಶಕಿ ಶ್ರೀಮತಿ ಅಂಜನಾ ದೇವಿ ತನಿಖೆ ಮಾಡಿ ವರದಿ ಸಲ್ಲಿಸಿದ್ದು ಈ ಬಹು ಕೋಟಿ ಹಗರಣಕ್ಕೆ ಅಧಿಕಾರಿಗಳು ಎಷ್ಟು ಜವಾಬ್ದಾರರೋ ಅಷ್ಟೇ ಅದರ ಮಂಡಳಿ ಹಾಗೂ ಮಂಡಳಿಯ ಅಧ್ಯಕ್ಷರು ಜವಾಬ್ದಾರರು ಎಂದು ಉಡುಪಿ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿಯವರು ತಿಳಿಸಿದ್ದಾರೆ.
ಬಿಜೆಪಿ ನಗರ ಯುವ ಮೋರ್ಚಾ ಅಧ್ಯಕ್ಷರಾದ ಅಕ್ಷಿತ್ ಶೆಟ್ಟಿ ಹೆರ್ಗ ಅವರು ಇತ್ತೀಚೆಗೆ ನೀಡಿರುವ ತಮ್ಮ ಮಾಧ್ಯಮ ಪ್ರಕಟಣೆಯಲ್ಲಿ ಯಶ್ಪಾಲ್ ಸುವರ್ಣರವರು ಮೀನುಗಾರಿಕಾ ಫೆಡರೇಶನ್ ದಾಖಲೆ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದೆ ಎಂದು ತಿಳಿಸಿರುತ್ತಾರೆ. ಹಾಗಾದರೆ ತಾವು ಹೇಳಿರುವ ಹಾಗೆ ಆ ಸಂಸ್ಥೆಯ ಅಭಿವೃದ್ಧಿಗೆ ಅವರು ಎಷ್ಟು ಜವಾಬ್ದಾರರೋ ಅಲ್ಲಿ ನಡೆದಿರುವ ಬಹು ಕೋಟಿ ಡಿಸೆಲ್ ಹಗರಣಕ್ಕೆ ಅವರು ಅಷ್ಟೇ ಜವಾಬ್ದಾರರಲ್ಲವೇ?
ಬಡ ಮೀನುಗಾರರ ಜೀವನಾಭಿವೃದ್ಧಿ ಹಾಗೂ ಮೀನುಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರಕಾರವು ಮೀನುಗಾರಿಕಾ ಬೋಟ್ಗಳಿಗೆ ಮಾರಾಟ ಕರ ರಹಿತ ಡೀಸೆಲನ್ನು ದ.ಕ. ಉಡುಪಿ ಜಿಲ್ಲಾ ಮೀನುಗಾರಿಕ ಫೆಡರೇಶನ್ ಮೂಲಕ ವಿತರಿಸುತ್ತಿದ್ದು ಸಬ್ಸಿಡಿ ಡಿಸೆಲನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಿ ಸರಕಾರಕ್ಕೆ ಹಲವಾರು ಕೋಟಿ ನಷ್ಟ ಮಾಡಿರುತ್ತಾರೆ. ಆದ್ದರಿಂದ ತಪ್ಪಿತಸ್ತರು ಯಾರೇ ಆಗಿದ್ದರೂ ಅವರಿಗೆ ಕಠಿಣ ಶಿಕ್ಷೆ ಆಗಲೇ ಬೇಕು. ನೀವು ಜನರ ದಿಕ್ಕು ತಪ್ಪಿಸಲು ಯುವ ಕಾಂಗ್ರೆಸ್ ನಾಯಕರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿರುವುದು ಹಾಸ್ಯಾಸ್ಪದವಾಗಿರುತ್ತದೆ. ನ್ಯಾಯದ ಪರ ಹೋರಾಟವನ್ನು ಯುವ ಕಾಂಗ್ರೆಸ್ ಎತ್ತಿಕೊಂಡಿದ್ದು ನ್ಯಾಯ ದೊರಕುವವರೆಗೂ ವಿಶ್ರಮಿಸುವುದಿಲ್ಲ ಎಂದು ಪ್ರಶಾಂತ್ ಪೂಜಾರಿ ತಿಳಿಸಿರುತ್ತಾರೆ.