ಮೀನುಗಾರಿಕೆಗೆ ಶಕ್ತಿ ತುಂಬಿದ ಕೇಂದ್ರ ಬಜೆಟ್ – ಯಶ್ಪಾಲ್ ಸುವರ್ಣ
ಉಡುಪಿ: ಮೀನುಗಾರರ ಬಹುದಿನದ ಬೇಡಿಕೆಯಾಗಿದ್ದ ಪ್ರತ್ಯೇಕ ಮೀನುಗಾರಿಕ ಸಚಿವಾಲಯವನ್ನು ಸ್ಥಾಪಿಸಿ ಪಶುಸಂಗೋಪನೆ ಜೊತೆ ಮೀನುಗಾರಿಕೆಗೂ ಶೇಕಡಾ 2% ಬಡ್ಡಿ ಸಾಲ ಸೌಲಭ್ಯ, 60 ವರ್ಷ ಮೇಲ್ಪಟ್ಟ ಮೀನುಗಾರರಿಗೆ ತಲಾ ರೂ. 3,000 ಪಿಂಚಣಿ, ಮುಂತಾದ ಎಲ್ಲಾ ಸೌಲಭ್ಯ ನೀಡುವುದರೊಂದಿಗೆ ಮೀನುಗಾರಿಕೆಯ ಅಭಿವೃದ್ದಿ ಹಾಗೂ ಮೀನುಗಾರರಿಗೆ ಆರ್ಥಿಕ ಶಕ್ತಿ ತುಂಬಲು ಮುಂದಾಗಿರುವ ಕೇಂದ್ರ ಸರಕಾರದ ನಡೆಯನ್ನು ಅಖಿಲ ಭಾರತ ಮೀನುಗಾರರ ವೇದಿಕೆಯ ಸಂಘಟನಾ ಪ್ರಧಾನ ಕಾರ್ಯದರ್ಶಿ, ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ ಸ್ವಾಗತಿಸಿದ್ದಾರೆ.
ಕಳೆದ ಹಲವು ದಶಕಗಳ ಈ ಬೇಡಿಕೆಗಳ ಬಗ್ಗೆ ಅಖಿಲ ಭಾರತ ಮೀನುಗಾರರ ವೇದಿಕೆಯು ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅರುಣ್ ಜೇಟ್ಲಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿತ್ತು. ಇದಕ್ಕೆ ಅತ್ಯಂತ ಶೀಘ್ರವಾಗಿ ಸ್ಪಂದಿಸಿದ ಕೇಂದ್ರ ಸರಕಾರದ ಕಾರ್ಯವೈಖರಿ ಮತ್ತು ಪ್ರಧಾನಿ ಮೋದಿಯವರು ಮೀನುಗಾರರ ಮೇಲೆ ಇಟ್ಟಿರುವ ಕಾಳಜಿ ನಿಜಕ್ಕೂ ಶ್ಲಾಘನೀಯ ಎಂದು ಯಶಪಾಲ್ ಅಭಿಪ್ರಾಯಪಟ್ಟಿದ್ದಾರೆ.
ಕರಾವಳಿಯ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸಿದ ಮೀನುಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಸಾಗರಮಾಲ ಯೋಜನೆಯಡಿಯಲ್ಲಿ ಬಂದರುಗಳ ಪುನಶ್ಚೇತನ, ಅಂತರ್ ರಾಜ್ಯ ಮೀನುಗಾರಿಕಾ ಸಮಸ್ಯೆ ಬಗೆಹರಿಸಲು ಮತ್ತು ಮೀನುಗಾರಿಕೆಗೆ ಪ್ರೋತ್ಸಾಹ ನೀಡಲು ಪ್ರತ್ಯೇಕ ಸಚಿವಾಲಯ,ವಯಸ್ಸಾದ ಮೀನುಗಾರ ಮಹಿಳೆಯರಿಗೆ ಮಾಸಿಕ ಪಿಂಚಣಿ ಸೇರಿದಂತೆ ಹತ್ತು ಹಲವು ಕ್ರಾಂತಿಕಾರಿ ಯೋಜನೆಗಳನ್ನು ತಂದಿದೆ ಮೀನುಗಾರರು ಇವುಗಳ ಸದುಪಯೋಗ ಪಡೆದುಕೊಂಡು ಆರ್ಥಿಕ ಸ್ವಾವಲಂಬಿಗಳಾಗ ಬೇಕು ಎಂದು ಅವರು ತಿಳಿಸಿದ್ದಾರೆ.
ಈ ಬಜೆಟ್ ಬಗ್ಗೆ ವಿರೋಧ ಪಕ್ಷಗಳು ವ್ಯರ್ಥಪ್ರಲಾಪದಲ್ಲಿ ತೊಡಗಿವೆ. ದೇಶದ ಬಡ ಮತ್ತು ಮದ್ಯಮವರ್ಗವನ್ನು ಗಮನದಲ್ಲಿರಿಸಿಕೊಂಡು ರೂಪಿಸಲಾದ ಈ ಬಜೆಟ್ ಬಗ್ಗೆ ಟೀಕೆ ಮಾಡುವವರು ಬಡವರ ಕಲ್ಯಾಣವನ್ನು ಬಯಸದ ವಸಾಹತು ವ್ಯವಸ್ಥೆಯ ಪಳೆಯುಳಿಕೆಗಳಂತೆ ಕಾಣುತ್ತಾರೆ. ದೇಶದ ಸಮಗ್ರ ಅಭಿವೃದ್ಧಿಯ ದೂರದೃಷ್ಟಿಯುಳ್ಳ ಬಜೆಟ್ ಇದಾಗಿದ್ದು, ನರೇಂದ್ರ ಮೋದಿಯವರ ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಆಶಯದಂತೆ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಮುದ್ರಾ ಯೋಜನೆ ಮೂಲಕ ಸಾಲ ಯೋಜನೆ, ಜನಸಾಮಾನ್ಯರ ಆದಾಯತೆರಿಗೆ ಮಿತಿಯನ್ನು 5 ಲಕ್ಷಕ್ಕೆ ಏರಿಕೆ, ಗ್ರಾಮೀಣ ಅಭಿವೃದ್ಧಿ, ರೈತರಿಗೆ ನೇರ ಸಹಾಯಧನ, ಸಣ್ಣ ಕೈಗಾರಿಕೆಗಳಿಗೆ ಬಡ್ಡಿ ವಿನಾಯಿತಿ, ಗೋ ರಕ್ಷಣೆಗಾಗಿ ಕಾಮಧೇನು ಆಯೋಗದ ರಚನೆ ದೇಶದ ಭದ್ರತೆಗಾಗಿ ಮೂರು ಲಕ್ಷ ಕೋಟಿ ವೆಚ್ಚ ಸೇರಿದಂತೆ ಅನೇಕ ಉತ್ತಮ ಯೋಜನೆಗಳನ್ನು ಬಜೆಟ್ ನಲ್ಲಿ ಅಳವಡಿಸಿದ್ದಾರೆ. ಈ ಯೋಜನೆಗಳು ಭಾರತದ ಆರ್ಥಿಕ ಅಸಮಾನತೆಯನ್ನು ಸರಿದೂಗಿಸುವಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂದು ಯಶಪಾಲ್ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.