Home Mangalorean News Kannada News ಮೀನುಗಾರಿಕೆಯಲ್ಲಿ ಅತ್ಯಾಧುನಿಕ ಸಂವಹನ ತಂತ್ರಜ್ಞಾನ ಅಳವಡಿಸಲು ಪ್ರಧಾನಿ ಮೋದಿಗೆ ಕರ್ನಾಟಕ ಮೀನುಗಾರರ ಮನವಿ

ಮೀನುಗಾರಿಕೆಯಲ್ಲಿ ಅತ್ಯಾಧುನಿಕ ಸಂವಹನ ತಂತ್ರಜ್ಞಾನ ಅಳವಡಿಸಲು ಪ್ರಧಾನಿ ಮೋದಿಗೆ ಕರ್ನಾಟಕ ಮೀನುಗಾರರ ಮನವಿ

Spread the love

ಮೀನುಗಾರಿಕೆಯಲ್ಲಿ ಅತ್ಯಾಧುನಿಕ ಸಂವಹನ ತಂತ್ರಜ್ಞಾನ ಅಳವಡಿಸಲು ಪ್ರಧಾನಿ ಮೋದಿಗೆ ಕರ್ನಾಟಕ ಮೀನುಗಾರರ ಮನವಿ

ಉಡುಪಿ: ಕರ್ನಾಟಕದ ಮೀನುಗಾರಿಕೆ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ತುರ್ತು ಅಗತ್ಯವನ್ನು ರಾಜ್ಯದ ಪ್ರಮುಖ ಮೀನುಗಾರ ಸಂಘಟನೆಗಳು ಬಲವಾಗಿ ಪ್ರತಿಪಾದಿಸಿದ್ದು, ಇದನ್ನು ಕಾರ್ಯರೂಪಕ್ಕೆ ತರಲು ಸ್ವತಃ ಪ್ರಧಾನಿಯೇ ನೇರ ಹಸ್ತಕ್ಷೇಪ ಮಾಡುವಂತೆ ಇಂಡಿಯನ್ ಫಿಶರ್ ಮೆನ್ ಫಾರ್ ಟೆಕ್ನಾಲಜಿ ಅಡೋಪ್ಶನ್ (ಐಎಫ್ಟಿಎ) ಬೆಂಬಲದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿವೆ. ಮಾತ್ರವಲ್ಲದೆ,   ಮೀನುಗಾರಿಕೆ ಸಮುದಾಯದ ಮುಖಂಡರು ಕೂಡ ಇತ್ತೀಚೆಗೆ ಪ್ರಧಾನಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ಮೀನುಗಾರ ಸಮುದಾಯದ ಸವಾಲುಗಳು ಮತ್ತು ಹೊಸ ಸಂಪರ್ಕ ತಂತ್ರಜ್ಞಾನದ ಅನಿವಾರ್ಯತೆಯ ಕುರಿತು ಉಡುಪಿಯ್ಲಲಿ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ನ ಅಧ್ಯಕ್ಷರಾದ ಗಣಪತಿ ಮಾಂಗ್ರೆ, ಮೀನುಗಾರರನ್ನು ಮೊಬೈಲ್ ಸಾಧನಗಳೊಂದಿಗೆ ಸಂಪರ್ಕ ಸಾಧಿಸಬಲ್ಲ ಉಪಗ್ರಹ ಆಧಾರಿತ ನೇವಿಗೇಷನ್ ವ್ಯವಸ್ಥೆಯಂತಹ ಆಧುನಿಕ ಸಂಪರ್ಕ ತಂತ್ರಜ್ಞಾನಗಳು ಲಭ್ಯವಾಗದೆ ಇರುವುದರಿಂದಲೇ ದೇಶದಲ್ಲಿ ಪ್ರತಿವರ್ಷ ಸಾವಿರಾರು ಮೀನುಗಾರರ ಜೀವಕ್ಕೆ ತೊಂದರೆಯಾಗುತ್ತಿದೆ. ಉಪಗ್ರಹ ಆಧಾರಿತ ನೇವಿಗೇಶನ್ ವ್ಯವಸ್ಥೆ ಅಳವಡಿಸುವುದರಿಂದ ಸಮಯಕ್ಕೆ ಸರಿಯಾಗಿ ಮೀನುಗಾರರಿಗೆ ಸುರಕ್ಷತಾ ಎಚ್ಚರಿಕೆ ಸಂದೇಶಗಳನ್ನು ರವಾನಿಸಲು ಸಾಧ್ಯವಾಗುತ್ತದೆ. ಅಲ್ಲದೆ ಸಮುದ್ರದಲ್ಲಿರುವಾಗ ಉತ್ತಮ ಮೀನು ಸಿಗಬಹುದಾದ ಮುನ್ಸೂಚನೆಗಳನ್ನೂ ನೀಡುತ್ತದೆ. ಮೀನುಗಾರರ ಜೀವನ ಮತ್ತು ಜೀವನೋಪಾಯಕ್ಕೆ ಬಂದೊದಗಿರುವ ದೊಡ್ಡ ಅಪಾಯ ಮತ್ತು ಸಂಕಷ್ಟದ ಪರಿಸ್ಥಿತಿಯನ್ನು ಪರಿಹರಿಸಲು ಇಂತಹ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಸರ್ಕಾರದ ಸಹಾಯದ ಅಗತ್ಯವಿದೆ ಎನ್ನುತ್ತಾರೆ.


ಇದೇ ವೇಳೆ ಮಾತನಾಡಿದ ಇನ್ನೋರ್ವ ಸದಸ್ಯ ನಿತಿನ್ ರಮಾಕಾಂತ್ ಅವರು , ಕಳೆದ ವರ್ಷ ಸುವರ್ಣ ತ್ರಿಭುಜ ಬೋಟ್ ಅವಘಡದಿಂದ ಮೀನುಗಾರರ ಪ್ರಾಣಹಾನಿ ಸಂಭವಿಸಿದ ಘಟನೆ, ಇತ್ತೀಚೆಗೆ ಮಲ್ಪೆಯಲ್ಲಿ ನಾಪತ್ತೆಯಾದ ನಾಲ್ವರು ಮೀನುಗಾರರ ಪ್ರಕರಣ ನಮ್ಮ ಸಮುದಾಯವನ್ನು ಸಾಮೂಹಿಕವಾಗಿ ಶೋಕಕ್ಕೀಡು ಮಾಡಿದೆ. ಮೀನುಗಾರರ ಸಾಮಾನ್ಯ ಸಂವಹನ ವಿಧಾನಗಳು ಸಮರ್ಪಕವಾಗಿಲ್ಲ ಎನ್ನುವುದು ಈ ಘಟನೆಗಳಿಂದ ನಮಗೆ ಅರಿವಾಗಿದೆ. ದೇಶದ ದೀರ್ಘಾವಧಿ ಭವಿಷ್ಯದಲ್ಲಿ ಮೀನುಗಾರಿಕಾ ಕ್ಷೇತ್ರದಿಂದ ಪ್ರಯೋಜನಗಳನ್ನು ಪಡೆಯಬೇಕಾದರೆ ಈಗಾಗಲೇ ಲಭ್ಯವಿರುವ ಅತ್ಯಾಧುನಿಕ ಸಂವಹನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಇದೇ ಸೂಕ್ತ ಸಮಯ ಎಂದರು.

ವಿವಿಧ ರಾಜ್ಯಗಳಲ್ಲಿ ಲಭ್ಯವಿರುವ ತಂತ್ರಜ್ಞಾನಗಳ ಗುಣಮಟ್ಟವನ್ನು ಪ್ರಮಾಣೀಕರಿಸುವ ಮೂಲಕ ಕೇಂದ್ರ ಸರ್ಕಾರ ಈ ತಂತ್ರಜ್ಞಾನಗಳನ್ನು ಕಾರ್ಯಗತಗೊಳಿಸಬೇಕಾಗಿದೆ. ಬಿಎಸ್ಎನ್ಎಲ್ನ ಟ್ರಾನ್ಸ್ಪಾಂಡರ್ ನ್ನು ನಾವು ಪರೀಕ್ಷಿಸಿದ್ದು, ಇದು ಆಳ ಸಮುದ್ರದಲ್ಲೂ ಉಪಗ್ರಹದ ಮೂಲಕ ನೇರವಾಗಿ ದ್ವಿಮುಖ ಸಂವಹನವನ್ನು ಹೊಂದಿರುವುದು ಗೊತ್ತಾಗಿದೆ. ಆದ್ದರಿಂದ ಕೂಡಲೆ ಇಂತಹ ತಂತ್ರಜ್ಞಾನವನ್ನು ಕಾರ್ಯರೂಪಕ್ಕೆ ತರಲು ಪ್ರಧಾನಿ ಮೋದಿಯವರು ಖುದ್ದು ಆಸಕ್ತಿ ವಹಿಸಬೇಕು. ಈ ವಿಚಾರದಲ್ಲಿ ವಿಳಂಬ ಮಾಡಿದರೆ ಸಮುದ್ರದಲ್ಲಿನ ಮೀನುಗಾರರ ಸುರಕ್ಷತೆಗೆ ಮತ್ತಷ್ಟು ಅಪಾಯ ಒದಗಲಿದೆ ಎಂದು ಹೇಳಿದರು.

ಉತ್ಪಾದಕತೆ ಹೆಚ್ಚಳ, ವಿಪತ್ತು ನಿರ್ವಹಣೆ:
ಮೀನುಗಾರಿಕಾ ಕ್ಷೇತ್ರದಲ್ಲಿ ಅತ್ಯಾಧುನಿಕ ಡಿಜಿಟಲ್ ಮತ್ತು ಉಪಗ್ರಹ ಸಂವಹನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದರಿಂದ ಮೀನು ಉತ್ಪಾದಕತೆಯನ್ನು ಹೆಚ್ಚಿಸಲು ಸಾಧ್ಯ. ಈ ಮೂಲಕ ವಿಶ್ವ ದರ್ಜೆಯಲ್ಲಿ ಭಾರತ ಸ್ಪರ್ಧೆಯೊಡ್ಡಲು ಅನುಕೂಲವಾಗಲಿದೆ. ಚಂಡಮಾರುತಗಳು ಸೇರಿದಂತೆ ಇತರ ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಕೂಡ ಸಮುದ್ರದಲ್ಲಿ ಎಲ್ಲೇ ಇದ್ದರೂ ಹೊಸ ಉಪಗ್ರಹ ಆಧಾರಿತ ತಂತ್ರಜ್ಞಾನದ ಸಹಾಯದಿಂದ ಮೀನುಗಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬಹುದು. ಅಲ್ಲದೆ ಅವರಿಗೆ ತಕ್ಷಣದ ಸ್ಪಂದನೆಯನ್ನು ನೀಡಲು ಸಾಧ್ಯವಾಗುತ್ತದೆ.

ಮೀನುಗಾರರ ಸುರಕ್ಷತೆ, ಮೀನು ಉತ್ಪಾದಕತೆ ಹೆಚ್ಚಳವನ್ನು ಖಾತರಿಪಡಿಸುವ ಜತೆಗೆ ಸಮುದ್ರದಲ್ಲಿ ಇ-ಕಾಮರ್ಸ್ ವಹಿವಾಟುಗಳನ್ನು ಸಕ್ರಿಯಗೊಳಿಸಲು ತಂತ್ರಜ್ಞಾನ ಸಹಕಾರಿ. ದ್ವಿಮುಖ (ಟೂ-ವೇ) ದತ್ತಾಂಶ ವ್ಯವಸ್ಥೆಗಳ ಮೂಲಕ ಸಮುದ್ರದಲ್ಲಿರುವ ಮೀನುಗಾರರಿಗೆ ಮೀನು ಯಥೇಚ್ಛ ಸಿಗುವ ಸ್ಥಳದ ಡೇಟಾವನ್ನು ಕಳುಹಿಸುವುದು ಸುಲಭ. ಅದೇ ರೀತಿ, ಮೀನುಗಾರರಿಗೆ ಮಾರುಕಟ್ಟೆ ಪ್ರವೇಶಿಸಲು ಮತ್ತು ಸಮುದ್ರದಲ್ಲೇ ವಹಿವಾಟು ನಡೆಸಿ ಮೀನಿಗೆ ಗರಿಷ್ಠ ಮೌಲ್ಯವನ್ನೂ ಪಡೆಯಲು ಈ ಸಂಪರ್ಕ ತಂತ್ರಜ್ಞಾನ ವ್ಯವಸ್ಥ ಪೂರಕವಾಗಿದೆ.

ತಂತ್ರಜ್ಞಾನ ಅಳವಡಿಕೆಯ ಬೇಡಿಕೆಗೆ ಸಂಬಂಧಿಸಿದಂತೆ ಬಹುತೇಕ ಮೀನುಗಾರಿಕೆ, ಮೀನು ಸಹಕಾರಿ ಮತ್ತು ದೋಣಿ ಮಾಲೀಕರ ಸಂಘಗಳು ಐ.ಎಫ್.ಟಿ.ಎ.ಗೆ ಬೆಂಬಲ ನೀಡುತ್ತಿವೆ. ಈ ವೇದಿಕೆಯ ಮೂಲಕ ಮೀನುಗಾರರು ತಾವು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಮುಂಚೂಣಿಗೆ ತರುತ್ತಿದ್ದಾರೆ. ಭವಿಷ್ಯದಲ್ಲಿ ದೇಶಕ್ಕೆ ವಿಸ್ತಾರವಾದ ಪ್ರಯೋಜನ ನೀಡುವ ಪ್ರಮುಖ ಕ್ಷೇತ್ರವಾಗಿ ಮೀನುಗಾರಿಕಾ ಉದ್ಯಮ ಬೆಳೆಯಬೇಕಾದರೆ ಈ ಕ್ಷೇತ್ರದ ಡಿಜಿಟಲ್ ರೂಪಾಂತರಕ್ಕೆ ತ್ವರಿತ ಕ್ರಮಗಳ ಅಗತ್ಯವನ್ನು ಒತ್ತಿ ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ದೇಶದ ಮೀನುಗಾರರು ಇಂದು ಪ್ರಧಾನ್ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್ವೈ) ಯ ಲಾಭವನ್ನು ಪಡೆಯಲು ಸರ್ಕಾರದ ನಿರ್ಣಾಯಕ ಕ್ರಮಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

ಲಾಕ್ ಡೌನ್ ನಿಂದ ನಿತ್ಯ 224 ಕೋಟಿ ನಷ್ಟ:
ಕೋವಿಡ್-19ರಿಂದ ಮೀನುಗಾರಿಕಾ ಕ್ಷೇತ್ರದ ಮೇಲಿನ ಪರಿಣಾಮದ ಬಗ್ಗೆ ಮತ್ತು ಮುಂಬರುವ ಸವಾಲುಗಳ ಬಗ್ಗೆಯೂ ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ ಮತ್ತು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ ಮಂಗಳೂರು ಬೆಳಕು ಚೆಲ್ಲಿದೆ.

2.8 ಕೋಟಿಗೂ ಹೆಚ್ಚು ಮೀನುಗಾರರನ್ನು ಹೊಂದಿರುವ ಭಾರತದ ಮೀನುಗಾರಿಕೆ ಕ್ಷೇತ್ರವು ಕೋವಿಡ್ 19 ಸಾಂಕ್ರಾಮಿಕ ರೋಗ ಉಲ್ಭಣ ಆದಾಗಿನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಕೇಂದ್ರೀಯ ಮೀನುಗಾರಿಕೆ ತಂತ್ರಜ್ಞಾನ ಸಂಸ್ಥೆ (ಸಿಐಎಫ್ಟಿ) ವರದಿಯ ಪ್ರಕಾರ ಕೊರೋನಾ ಲಾಕ್ ಡೌನ್ ಸಮಯದಲ್ಲಿ ದಿನನಿತ್ಯ 224 ಕೋಟಿ ರು. ನಷ್ಟ ಉಂಟಾಗಿದೆ.

ಇಂತಹ ಸಂಕಷ್ಟದ ಸಮಯ ಎದುರಿಸಿದ ಮೀನುಗಾರರು ಈಗ ಸುರಕ್ಷಿತವಾಗಿ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸಬೇಕಾಗಿದೆ. ಸಮುದ್ರದಲ್ಲಿ ಮೀನುಗಾರರು ಪ್ರಾಣ ಕಳೆದುಕೊಳ್ಳುವ ದುರ್ಘಟನೆಗಳು ಮತ್ತೆ ಮರುಕಳಿಸಬಾರದು. ಅದಕ್ಕಾಗಿ ಈ ಕ್ಷೇತ್ರದಲ್ಲಿ ಅತ್ಯಾಧುನಿಕ ಸಂಪರ್ಕ ವ್ಯವಸ್ಥೆ ಅಳವಡಿಸಬೇಕು ಎನ್ನುವುದು ಮೀನುಗಾರ ಸಂಘಟನೆಗಳ ಒತ್ತಾಸೆ.


Spread the love

Exit mobile version