ಮೀನುಗಾರಿಕೆ ಬಂದರು ಸಚಿವರಾಗಿ ಕೋಟ ಶ್ರೀನಿವಾಸ ಪೂಜಾರಿ ಆಯ್ಕೆ : ಯಶ್ಪಾಲ್ ಸುವರ್ಣ ಸ್ವಾಗತ
ಉಡುಪಿ: ಕರ್ನಾಟಕ ಸರಕಾರದ ನೂತನ ಮೀನುಗಾರಿಕೆ, ಬಂದರು ಒಳನಾಡು ಸಾರಿಗೆ ಖಾತೆಯ ಸಚಿವರಾಗಿ ಕರಾವಳಿ ಭಾಗದ ಕೋಟ ಶ್ರೀನಿವಾಸ ಪೂಜಾರಿಯರ ಆಯ್ಕೆ ಮಾಡಿದ ರಾಜ್ಯ ಸರಕಾರದ ನಡೆಯನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರಾದ ಯಶ್ಪಾಲ್ ಸುವರ್ಣ ಸ್ವಾಗತಿಸಿದ್ದಾರೆ.
ಮೀನುಗಾರಿಕಾ ಮತ್ತು ಬಂದರು ಖಾತೆಯನ್ನು ಒಬ್ಬರಿಗೇ ನೀಡಿ ಮೀನುಗಾರಿಕೆಯ ಬಗ್ಗೆ ಮಾಹಿತಿಯಿರುವ ಕರಾವಳಿಯ ಭಾಗದವರನ್ನೇ ಈ ಖಾತೆಯ ಸಚಿರನ್ನಾಗಿಸಬೇಕೆಂಬ ಕರಾವಳಿ ಭಾಗದ ಮೀನುಗಾರರ ಬಹುದಿನದ ಬೇಡಿಕೆಯನ್ನು ಪರಿಗಣಿಸಿ ಈ ಬಾರಿ ಕೋಟ ಶ್ರೀನಿವಾಸ ಪೂಜಾರಿಯವರನ್ನು ನೇಮಿಸಿದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್.ಯಡಿಯೂರಪ್ಪ ರವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಈ ಹಿಂದೆ ಮೀನುಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿರುವ ಕೋಟ ಶ್ರೀನಿವಾಸ ಪೂಜಾರಿಯವರು ಮೀನುಗಾರಿಕೆಯ ಸಮಸ್ಯಗಳ ಬಗ್ಗೆ ತೀರ ಹತ್ತಿರದಿಂದ ಬಲ್ಲವರಾಗಿದ್ದು, ಮೀನುಗಾರಿಕೆಯ ಸಮಗ್ರ ಅಭಿವೃದ್ಧಿ ಬಗ್ಗೆ ಮೀನುಗಾರ ವಲಯ ಅಪಾರ ನಿರೀಕ್ಷೆ ಹೊಂದಿದೆ. ಕೇಂದ್ರ ಮೀನುಗಾರಿಕಾ ಇಲಾಖೆ ಹಾಗೂ ರಾಜ್ಯ ಸರಕಾರ ಜಂಟಿಯಾಗಿ ಮೀನುಗಾರರ ಬೇಡಿಕೆಗಳನ್ನು ಪರಿಹರಿಸಲು ಸೂಕ್ತ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಮೀನುಗಾರಿಕೆಗೆ ಬಲತುಂಬುವ ಆಶಾಭಾವನೆ ಮೀನುಗಾರರಲ್ಲಿ ಮೂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.