ಮುಂಬಯಿ, ಸೆ.11: ವಿಶ್ವಪ್ರಸಿದ್ಧ ಶ್ರೀ ತಿರುಮಲ ತಿರುಪತಿ ಬಾಲಜಿ ಕಲ್ಯಾಣಕ್ಕೆ ಮೊಬಾಯ್ಲ್ ರಥ ಅರ್ಪಣೆ ಡಾ| ಆರ್.ಕೆ ಶೆಟ್ಟಿ ಹಾಗೂ ಪೈಚಾ ಮುತ್ತು ಕುಟುಂಬಿಕರು ಮಾಡಿರುವರು.
ಇನ್ನು ಮುಂದೆ ತಿರುಪತಿ ತಿರುಮಲನ ಭಕ್ತರಿಗೆ ಮನೆಬಾಗಿಲಲ್ಲೇ ದೇವರ ದರ್ಶನ ಮತ್ತು ಪೂಜಾ ದರ್ಶನ ದೊರೆಯಲಿದೆ. ಹೌದು, ಭಕ್ತರಿಗೆ ಈ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಶೋಕ್ ಲೇಲ್ಯಾಂಡ್ ಬೃಹತ್ ಟ್ರಕ್ಕೊಂದನ್ನು ರಥವನ್ನಾಗಿಸಿ ಸುಮಾರು 36 ಲಕ್ಷ ವೆಚ್ಚದಲ್ಲಿ ತಯಾರಿಸಲಾದ ವಾಹನ ರಥವನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುಂಬಯಿಯಲ್ಲಿನ ಹೆಸರಾಂತ ಆಥಿರ್üಕತಜ್ಞ ಡಾ| ಆರ್.ಕೆ ಶೆಟ್ಟಿ ಹಾಗೂ ಪೈಚಾ ಮುತ್ತು ಕುಟುಂಬಿಕರು ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ಈ ವಾಹನದಲ್ಲಿ ತಿರುಪತಿ ಬಾಲಾಜಿ ಕಲ್ಯಾಣೋತ್ಸವ ರಥ (ಮಂಟಪ) ನಿರ್ಮಿಸಲಾಗಿದ್ದು, ಅದಕ್ಕೆ ಬಟನ್ ಒತ್ತುವ ಮೂಲಕ ತೆರೆಯಲು ಮತ್ತು ಮುಚ್ಚಲು ಸಾಧ್ಯವಿರುವ ಬಾಗಿಲು ನಿರ್ಮಿಸಲಾಗಿದೆ. ಈ ವಾಹನ ಮನೆ ಬಾಗಿಲಿಗೆ ಬಂದು ಭಕ್ತರ ಪೂಜೆಗಳನ್ನು ನೆರವೇರಿಸಲಿದೆ ಮತ್ತು ವಾಹನದಲ್ಲಿ ನಡೆಯುವ ಪೂಜಾ ಕಾರ್ಯಕ್ರಮವನ್ನು ಭಕ್ತರೆಲ್ಲರೂ ವೀಕ್ಷಿಸಲು ಅನುಕೂಲವಾಗುವ ವ್ಯವಸ್ಥೆ ಇದೆ.
ದೇಶದಲ್ಲಿ ಇದೇ ಮೊದಲ ಬಾರಿಗೆ ಚಲಿಸುವ ಮಂಟಪ ಪರಿಚಯಿಸಲ್ಪಟ್ಟಿದ್ದು, ಇದನ್ನು ಬಾಲಾಜಿ ದೇವರ ಪೂಜೆಗಾಗಿ ನಿರ್ಮಿಸಲಾಗಿದ್ದು, ಅದಕ್ಕಾಗಿಯೇ ಬಳಸಲ್ಪಡಲಿದೆ. ಈ ಚಲಿಸುವ ಕಲ್ಯಾಣ ರಥ ನಿರ್ಮಾಣದ ಮುಖ್ಯ ಉದ್ದೇಶ ಭಕ್ತರಿಗೆ ಕಡಿಮೆ ಖರ್ಚಿನಲ್ಲಿ ಮನೆ ಬಾಗಿಲಲ್ಲೇ ದೇವರ ದರ್ಶನ ಮತ್ತು ಪೂಜಾ ದರ್ಶನದ ಭಾಗ್ಯ ದೊರಕಿಸಿಕೊಡುವುದಾಗಿದೆ. ತೀರಾ ಬಡವರೂ ಈ ಭಾಗ್ಯವನ್ನು ಪಡೆಯಬಹುದು ಏಕೆಂದರೆ ಇಲ್ಲಿ ಯಾವುದೇ ಸಭಾಂಗಣ, ವೇದಿಕೆ, ಅಲಂಕಾರ ವೆಚ್ಚಗಳಿರುವುದಿಲ್ಲ. ಅಲ್ಲದೆ ಈ ರಥವು ದೇಶದ ಮೂಲೆ ಮೂಲೆಗಳಲ್ಲಿ, ಬೀದಿ ಹಳ್ಳಿ ಗಲ್ಲಿಗಳಲ್ಲಿ ಚಲಿಸಬಹುದಾಗಿದ್ದು, ಪ್ರತಿಯೊಬ್ಬರೂ ಬಾಲಾಜಿ ದೇವರ ದರ್ಶನದಲ್ಲಿ ಭಾಗಿಗಳಾಗಬಹುದು.
ಚಲಿಸುವ ಕಲ್ಯಾಣ ರಥದ ಹಸ್ತಾಂತರ ಸಮಾರಂಭವು ಕಳೆದ ಮಂಗಳವಾರ (ಸೆ.8) ರಂದು ತಿರುಮಲ ತಿರುಪತಿಯಲ್ಲಿ ನಡೆಯಿತು. ತಮ್ಮ ಜನನಿದಾತೆ ಶ್ರೀಮತಿ ಅಪ್ಪಿ ಕೆ.ಶೆಟ್ಟಿ ಅವರನ್ನೊಳಗೊಂಡು ಡಾ| ಆರ್.ಕೆ ಶೆಟ್ಟಿ ತಮ್ಮ ಪರಿವಾರದ ಶ್ರಿಮತಿ ಅನಿತಾ ಆರ್.ಕೆ ಶೆಟ್ಟಿ, ಮಾ| ತರುಣ್ ಆರ್.ಕೆ ಮತ್ತು ಕು| ಶ್ವೇತಾ ಆರ್.ಕೆ ಹಾಗೂ ಪೈಚಾ ಮುತ್ತು ಕುಟುಂಬಿಕರೊಂದಿಗೆ ತಿರುಮಲ ತಿರುಪತಿ ದೇವಸ್ಥಾನಕ್ಕೆ ಅರ್ಪಿಸಿದರು. ತಿರುಪತಿ ದೇವಸ್ಥಾನದ ಅಧ್ಯಕ್ಷರು ಸಮಿತಿಯ ಸಹಾಯಕ ಮುಖ್ಯ ನಿರವಾಹಣಾಧಿಕಾರಿ ಮತ್ತು ಇತರ ಸದಸ್ಯರ ಉಪಸ್ಥಿತಿಯಲ್ಲಿ ಚಲಿಸುವ ರಥವನ್ನು ಸ್ವೀಕರಿಸಿ ಪೂಜೆಗೈದು ಸೇವೆಗಾಗಿ ಚಾಲನೆಯನ್ನಿತ್ತರು. ಇದೀಗ ಸಂಚಾರಿ ರಥದೊಂದಿಗೆ ರಾಷ್ಟ್ರದಾದ್ಯಂತದ ಜನತೆಯು ಶ್ರೀ ತಿರುಪತಿ ಬಾಲಜಿ ಕಲ್ಯಾಣೋತ್ಸವದಲ್ಲಿ ಪಾಲ್ಗೊಂಡು ಶ್ರೀದೇವರನ್ನು ಆರಾಧಿಸಿ ಪೂಜಿಸಿ ಧನ್ಯರೆಣಿಸಲು ಇಂದೊಂದು ಸೂಕ್ತ ವ್ಯವಸ್ಥೆಯಾಗಿದೆ ಎಂದು ಆರ್.ಕೆ ಶೆಟ್ಟಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.