Home Mangalorean News Kannada News “ಮುಖದಲ್ಲಿ ಮಾರ್ಪಾಡು, ಬದುಕಿನಲ್ಲಿ ಪರಿವರ್ತನೆ”

“ಮುಖದಲ್ಲಿ ಮಾರ್ಪಾಡು, ಬದುಕಿನಲ್ಲಿ ಪರಿವರ್ತನೆ”

Spread the love

“ಮುಖದಲ್ಲಿ ಮಾರ್ಪಾಡು, ಬದುಕಿನಲ್ಲಿ ಪರಿವರ್ತನೆ”

ಮಣಿಪಾಲ : ಪ್ರಕರಣ 1: ಸ್ವಸ್ಥಾನದಿಂದ ಜರುಗಿದ ಕೆಳದವಡೆಗೆ ಟೋಟಲ್ ಟೆಂಪೊರೊಮ್ಯಾಂಡಿಬ್ಯುಲಾರ್ ಜಾಯಿಂಟ್ ರಿಪ್ಲೇಸ್ಮೆಂಟ್ ಎಂಬ ಬದುಕು ಬದಲಿಸುವ ಶಸ್ತ್ರಚಿಕಿತ್ಸೆಯನ್ನು  ನೆರವೇರಿಸಿದ ಬಳಿಕ, 21 ವರ್ಷ ಪ್ರಾಯದ ಯುವಕನಿಗೆ ಪುನಃ ನಗುವ ಅವಕಾಶ ಒದಗಿತು. ಈ ಶಸ್ತ್ರಚಿಕಿತ್ಸೆಯನ್ನು ಮಣಿಪಾಲ ದಂತ ವೈದ್ಯಕೀಯ ಮಹಾವಿದ್ಯಾಲಯದ ಓರಲ್ ಆಂಡ್ ಮ್ಯಾಕ್ಸಿಲೊಫೇಷಿಯಲ್ ವಿಭಾಗದ ವೈದ್ಯರು, ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ನಡೆಸಿದರು. ಕರ್ನಾಟಕ ಒಂದು ಪುಟ್ಟ ಗ್ರಾಮದಲ್ಲಿ ವಾಸವಾಗಿರುವ ಅಮನ್ (ಹೆಸರು ಬದಲಿಸಲಾಗಿದೆ) ಎಂಬ ಈ 21 ವರ್ಷದ ಯುವಕನಿಗೆ ಹುಟ್ಟಿನಿಂದಲೇ ಬಾಯಿಯನ್ನು ತೆರೆಯಲು ಸಾಧ್ಯವಾಗುತ್ತಿರಲಿಲ್ಲ, ಇದರಿಂದಾಗಿ ಅವನು ಬಹಳ ಸಂಕೋಚಪಡುತ್ತಿದ್ದನು ಮತ್ತು ಅವನ ವ್ಯಕ್ತಿತ್ವದ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಿತು. ಅವನು ಹೆಚ್ಚಾಗಿ ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಈ ವೈಕಲ್ಯದಿಂದಾಗಿ ಬೀದಿಯಲ್ಲಿ ನಡೆದಾಡಲು, ಹೊಸ ಜನರೊಂದಿಗೆ ಬೆರೆಯಲು ಅಥವಾ ಸ್ನೇಹಿತರನ್ನು ಮಾಡಿಕೊಳ್ಳಲು ಅಮನ್ಗೆ ಮುಜುಗರವಾಗುತ್ತಿತ್ತು. ಇದರಿಂದ ಅವನ ಯಶಸ್ಸಿಗೂ ಪೆಟ್ಟು ಬಿತ್ತು.

ಆಗ ಅವರು ಮಣಿಪಾಲದ ದಂತ ವೈದ್ಯಕೀಯ ಮಹಾವಿದ್ಯಾಲಯದ ಓರಲ್ ಆಂಡ್ ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗಕ್ಕೆ ಭೇಟಿ ನೀಡಿದರು. ಓರಲ್ ಆಂಡ್ ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗದ ಪ್ರಾಧ್ಯಾಪಕರು ಮತ್ತು ವಿಭಾಗ ಮುಖ್ಯಸ್ಥರಾಗಿರುವ ಡಾ. ಅಭಯ್ ತಾರಾನಾಥ್ ಕಾಮತ್ ರವರು ಅವನ ಬಗ್ಗೆ ಈ ರೀತಿ ಹೇಳಿಕೆ ನೀಡಿದರು –ಅವನು ಮೊದಲ ಬಾರಿ ನಮ್ಮ ವಿಭಾಗಕ್ಕೆ ಭೇಟಿ ನೀಡಿದಾಗ ಬಹಳ ಸಂಕೋಚ ಪ್ರವೃತ್ತಿಯವನಾಗಿದ್ದನು ಮತ್ತು ಇತರರೊಂದಿಗೆ ಮಾತನಾಡಲು ಮತ್ತು ಬೆರೆಯಲು ಸಂಕೋಚಪಡುತ್ತಿದ್ದನು. ಏಕೆಂದರೆ ಅವನಿಗೆ ಬಾಯಿ ಇರಲಿಲ್ಲ. ಆಹಾರವನ್ನು ಅಗಿಯಲು ಅವನು ಬಹಳ ಕಷ್ಟಪಡುತ್ತಿದ್ದನು ಜೊತೆಗೆ ಗಮನಾರ್ಹ ಪ್ರಮಾಣದ ಅಬ್ಸ್ ಟ್ರಕ್ಟಿವ್ ಸ್ಲೀಪ್ ಆಪ್ನಿಯಾ (ಇದು ನಿದ್ದೆಗೆ ಸಂಬಂಧಿಸಿದ ಗಂಭೀರ ತೊಂದರೆ, ಇದರಿಂದಾಗಿ ನಿದ್ದೆಯ ಸಮಯದಲ್ಲಿ ಉಸಿರಾಟ ಪದೇಪದೇ ನಿಲ್ಲುತ್ತದೆ ಮತ್ತು ಪುನಃ ಆರಂಭವಾಗುತ್ತದೆ) ಇದ್ದುದರಿಂದ ಅವನ ಆರೋಗ್ಯ ಹದಗೆಟ್ಟಿತ್ತು. ಜೊತೆಗೆ ಸರಿಯಾದ ಪೋಷಣೆ ಇಲ್ಲದೆ ತುಂಬಾ ಕೃಶನಾಗಿದ್ದನು. ಅವನಿಗೆ ಸ್ವಸ್ಥಾನದಿಂದ ಜರುಗಿರುವ ಕೆಳದವಡೆಯ ಮೇಲೆ ಟೋಟಲ್ ಟೆಂಪೊರೊಮ್ಯಾಂಡಿಬ್ಯುಲಾರ್ ಜಾಯಿಂಟ್ ರಿಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸೆ ನಡೆಸುವ ಚಿಕಿತ್ಸಾ ಯೋಜನೆಯನ್ನು ಸಿದ್ಧಪಡಿಸಲಾಯಿತು ಮತ್ತು ಚಿಕಿತ್ಸೆಯನ್ನು ಎರಡು ಹಂತದಲ್ಲಿ ವಿಭಾಗಿಸಿ ನೀಡುವುದೆಂದು ನಿರ್ಧರಿಸಲಾಯಿತು. ಮೊದಲ ಹಂತದಲ್ಲಿ ನಿದ್ದೆಯಲ್ಲಿ ಉಸಿರಾಟ ಸ್ಥಗಿತಗೊಳ್ಳುವ ಸಮಸ್ಯೆಯನ್ನು ಸರಿಪಡಿಸಲು ಅವನ ಸಣ್ಣ ದವಡೆ ಹಾಗೂ ಸಣ್ಣ ಗದ್ದಕ್ಕಾಗಿ  ಡಿಸ್ಟ್ರ್ಯಾಕ್ಷನ್ ಆಸ್ಟಿಯೊಜೆನೆಸಿಸ್ ಶಸ್ತ್ರಕ್ರಿಯೆಯನ್ನೂ, ಅದರ ನಂತರ ಎರಡನೇ ಹಂತದಲ್ಲಿ ಬಾಯಿಯನ್ನು ಸರಿಯಾದ ಸ್ಥಳದಲ್ಲಿ ತೆರೆಯಲು ಮತ್ತು ಆಕರ್ಷಕವಾದ ಮುಖ ಚಹರೆಯನ್ನು ನೀಡುವುದಕ್ಕಾಗಿ ಒಂದಕ್ಕೊಂದು ಅಂಟಿಕೊಂಡ ಕೀಲುಗಳನ್ನು ಪ್ರತ್ಯೇಕಿಸುವ ಮತ್ತು ದವಡೆಯ ಬದಲಿ ಜೋಡಣೆಯ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಯೋಜನೆ ಸಿದ್ಧಪಡಿಸಲಾಯಿತು.

ಟಿಎಂಜಿ ಆಂಕೊಲೋಸಿಸ್ ಇರುವ ಕೆಳದವಡೆ ಜರುಗಿರುವ ರೋಗಿಗಳಲ್ಲಿ ಬಯೋಮೆಟ್ ಸ್ಟಾಕ್ ಪ್ರಾಸ್ಥೆಸಿಸ್ ಬಳಸಿ ಕೀಲಿನ ಸಂಪೂರ್ಣ ಬದಲಿ ಜೋಡಣೆ ಪ್ರಕ್ರಿಯೆಯನ್ನು ನಡೆಸುವುದು ಭಾರತದಲ್ಲಿ ಇದು ಮೊದಲನೆಯ ಪ್ರಕರಣವಾಗಿದೆ ಮತ್ತು ಪ್ರಾಯಶಃ ಇಂಗ್ಲಿಷ್ ಇತಿಹಾಸದಲ್ಲಿ ಕೇವಲ ಒಂದೆರೆಡು ಪ್ರಕರಣಗಳು ಕಾಣಸಿಗಬಹುದು.

ಪ್ರಕರಣ 2 : ಇನ್ನೊಂದು ಪ್ರಕರಣದಲ್ಲಿ, ಸುಮಾರು 3 ವರ್ಷಗಳ ಹಿಂದೆ 20 ವರ್ಷ ಪ್ರಾಯದ ರವಿ (ಹೆಸರು ಬದಲಿಸಲಾಗಿದೆ) ಎಂಬ ಯುವಕನು ತನ್ನ ಬಲಭಾಗದ ಕೆಳದವಡೆಯಲ್ಲಿನ ಗೆಡ್ಡೆಯನ್ನು ತೆಗೆಸುವುದಕ್ಕಾಗಿ ಮಣಿಪಾಲದ ದಂತ ವೈದ್ಯಕೀಯ ಮಹಾವಿದ್ಯಾಲಯದ ಓರಲ್ ಆಂಡ್ ಮ್ಯಾಕ್ಸಿಲೊಫೇಷಿಯಲ್ ವಿಭಾಗದ ವೈದ್ಯರಿಂದ, ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಮ್ಯಾಕ್ಸಿಲೊಫೇಷಿಯಲ್ ಶಸ್ತ್ರಚಿಕಿತ್ಸೆಗೆ ಒಳಗಾದನು. ಅಂದಿನಿಂದ ಈ ದಿನದವರೆಗೂ ಅವನು ರೋಗಮುಕ್ತ ಜೀವನ ಸಾಗಿಸುತ್ತಿದ್ದರೂ ಮುಖದ ಒಂದು ಪ್ರಮುಖ ಭಾಗವನ್ನು ಕಳೆದುಕೊಂಡಿದ್ದರಿಂದ ಒಂದು ಬಗೆಯ ಮಾನಸಿಕ ನರಳಿಕೆಗೆ ಒಳಗಾಗಿದ್ದನು. ಅವನು ಸಾರ್ವಜನಿಕ ಸ್ಥಳಗಳಿಗೆ ಹೋಗುವುದನ್ನು ನಿಲ್ಲಿಸಿಬಿಟ್ಟಿದ್ದನು. ಅವನ ಹೆತ್ತವರು ಓರಲ್ ಆಂಡ್ ಮ್ಯಾಕ್ಸಿಲೊಫೇಷಿಯಲ್ ವಿಭಾಗಕ್ಕೆ ಭೇಟಿ ನೀಡಿ ಡಾ. ಅಭಯ್ ಟಿ ಕಾಮತರೊಂದಿಗೆ ಸಮಾಲೋಚನೆ ನಡೆಸಿದರು. ನಂತರ ಇಂತಹ ಪ್ರಕರಣಗಳಿಗೆಂದೇ ನಿರ್ಮಿಸಲಾಗುವ (ರೋಗಿಗೆ ಹೊಂದುವ ಇಂಪ್ಲಾಂಟ್) ಟೈಟಾನಿಯಂ ನಿರ್ಮಿತ ಇಂಪ್ಲಾಂಟ್ ಅನ್ನು ಕೆಳದವಡೆಯ ಜಾಗದಲ್ಲಿ ಕೂರಿಸುವ ಸಲಹೆ ನೀಡಲಾಯಿತು.

ಬಯೋಮೆಟ್ ಕಸ್ಟಮ್ ಮೇಡ್ ಕೀಲು ಬಳಸಿ ರೋಗಿಗೆ ಹೊಂದುವಂಥ ಇಂಪ್ಲಾಂಟ್ ಅಳವಡಿಸುವ ಪ್ರಕ್ರಿಯೆಯೂ ಭಾರತದಲ್ಲಿ ವರದಿಯಾಗಿರುವುದು ಇದೇ ಮೊದಲು.

 ಎರಡೂ ಪ್ರಕರಣಗಳಲ್ಲಿ ಡಾ. ಅಭಯ್ ಟಿ. ಕಾಮತರವರು ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದ್ದು ಇವರು ಕೆನಡಾದ ಟೊರೊಂಟೋದಲ್ಲಿ ಡಾ. ಡೇವಿಡ್ ಪ್ಸುಟ್ಕಾರ ಮಾರ್ಗದರ್ಶನದಲ್ಲಿ ಟಿಎಂಜೆ ಬದಲಿ ಜೋಡಣೆಗಳ ಬಗ್ಗೆ ವ್ಯಾಪಕ ತರಬೇತಿ ಪಡೆದಿದ್ದಾರೆ. ಅವರಿಗೆ ಸಹಾಯಕರಾಗಿ ಡಾ. ಆದರ್ಶ್, ಡಾ. ಶ್ರೀಕಾಂತ್, ಡಾ. ಚಿತ್ರಾ, ಡಾ. ಸುನಿಲ್ ಮತ್ತು ಡಾ. ಆನಂದರವರು ಶಸ್ತ್ರಚಿಕಿತ್ಸಾ ತಂಡದಲ್ಲಿದ್ದರು.

ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಯಾವುದೇ ತೊಡಕುಗಳು ಕಂಡುಬರಲಿಲ್ಲ ಮತ್ತು ರೋಗಿಗಳಿಗೆ ಸರಿಯಾಗಿ ಆಹಾರ ಸೇವಿಸಲು ಮತ್ತು ಬಾಯಿ ತೆರೆಯಲು ಸಾಧ್ಯವಾಯಿತು. ಎರಡೂ ಪ್ರಕರಣಗಳಲ್ಲಿ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಅರಿವಳಿಕೆ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾಗಿರುವ ಡಾ. ಅನಿತಾ ನೀಲೇಶ್ವರ ಮತ್ತು ಮತ್ತೋರ್ವ ಪ್ರಾಧ್ಯಾಪಕರಾದ  ಡಾ. ಮಂಜುನಾಥರವರು ಅರಿವಳಿಕೆ ನೀಡಿದರು. ಶಸ್ತ್ರಚಿಕಿತ್ಸೆಯ ಬಳಿಕ ಎರಡೂ ರೋಗಿಗಳ ಆತ್ಮವಿಶ್ವಾಸ ಹೆಚ್ಚಿದೆ ಮತ್ತು ಕಳೆದುಹೋದ ನಗು ಮುಖದಲ್ಲಿ ಪುನಃ ಅರಳಿದೆ.

 ಈ ಸಂದರ್ಭದಲ್ಲಿ ಮಾತನಾಡಿದ ಡಾ. ಅಭಯ್ ಕಾಮತ್ ಅವರು “ಕಡುಬಡವರಾದ ಅಮನ್‍ರ ಶಸ್ತ್ರಚಿಕಿತ್ಸೆಗೆ ಆರ್ಥಿಕ ಸಹಾಯ ಒದಗಿಸಿದ ಎಲ್ಲಾ ಪ್ರಮುಖರಿಗೂ ನಾವು ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ” ಎಂದರು.

 “ಶಸ್ತ್ರಚಿಕಿತ್ಸೆಯಿಂದ ಮುಖದಲ್ಲಿ ಬದಲಾವಣೆ ಆಗುವುದರ ಜೊತೆಗೆ ಬದುಕಿನಲ್ಲೂ ಬದಲಾವಣೆಯಾಗಿದೆ. ಶಸ್ತ್ರಚಿಕಿತ್ಸೆಯ ಫಲಿತಾಂಶ ಅದ್ಭುತವಾಗಿದೆ ಮತ್ತು ಮುಖ ಹಾಗೂ ಬಾಯಿಗಷ್ಟೇ ಹೊಸ ರೂಪ ನೀಡಿಲ್ಲ, ಇಡೀ ವ್ಯಕ್ತಿಗೆ ಹೊಸ ರೂಪ ನೀಡಿದೆ ಎಂಬುದಾಗಿ ಮಣಿಪಾಲದ ದಂತ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಕೀರ್ತಿಲತಾ ಎಂ ಪೈ ಅವರು ಅಭಿಪ್ರಾಯಪಟ್ಟು “ಡಾ. ಅಭಯ್ ತಾರಾನಾಥ್ ಕಾಮತ್ ನೇತೃತ್ವದ ಮಣಿಪಾಲದ ದಂತ ವೈದ್ಯಕೀಯ ಮಹಾವಿದ್ಯಾಲಯದ ನಮ್ಮ ಓರಲ್ ಮತ್ತು ಮ್ಯಾಕ್ಸಿಲೊಫೇಷಿಯಲ್ ಸರ್ಜರಿ ವಿಭಾಗದ ಸಾಧನೆಯ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತದೆ” ಎಂದರು.

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಮತ್ತು ಮುಖ್ಯ ನಿರ್ವಹಣಾಧಿಕಾರಿಗಳಾದ ಡಾ. (ಕರ್ನಲ್) ಎಂ ದಯಾನಂದರವರು “ಭಾರತದಲ್ಲೇ ಮೊದಲ ಬಾರಿಗೆ ಎಂಬಂತೆ ನಮ್ಮ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮುಂದುವರಿದ ದಂತ ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತಿರುವ ಬಗ್ಗೆ ನಮಗೆ ಹೆಮ್ಮೆ ಅನಿಸುತ್ತದೆ ಮತ್ತು ಈ ಸಂದರ್ಭದಲ್ಲಿ ನಾವು ಡಾ. ಅಭಯ್ ತಾರಾನಾಥ್ ಕಾಮತ್, ಅವರ ತಂಡ ಹಾಗೂ ಮಣಿಪಾಲ ದಂತ ವೈದ್ಯಕೀಯ ಮಹಾವಿದ್ಯಾಲಯದವರಿಗೆ ಶುಭಾಶಯಗಳನ್ನು ಕೋರುತ್ತೇವೆ ಎಂದು ಹೇಳಿದರು.


Spread the love

Exit mobile version