ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿರುವುದು ಬೋಗಸ್ ಬಜೆಟ್ ; ರಘುಪತಿ ಭಟ್
ಉಡುಪಿ: ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಶುಕ್ರವಾರ ಮಂಡಿಸಿದ ಬಜೆಟ್ ಸಂಪೂರ್ಣ ಬೋಗಸ್ ಆಗಿದ್ದು, ಅವರು ಮಂಡಿಸಿದ ಬಜೆಟ್ ಕರಾವಳಿ ಜಿಲ್ಲೆಗಳಿಗೆ ತುಂಬಾ ನಿರಾಶಾದಾಯಕ ಬಜೆಟ್ ಆಗಿದ್ದು,ಯಾವುದೇ ಹೊಸ ಯೋಜನೆ ಘೋಷಿಸಲಿಲ್ಲ ಎಂದು ಉಡುಪಿ ಶಾಸಕ ರಘುಪತಿ ಭಟ್ ಪ್ರತಿಕ್ರಿಯಿಸಿದ್ದಾರೆ.
ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ 50 ಕೋಟಿ ಅನುದಾನಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಮನವಿ ನೀಡಲಾಗಿತ್ತು, ಆದರೆ ಬಜೆಟ್ನಲ್ಲಿ ಈ ಬಗ್ಗೆ ಯಾವುದೇ ಅನುದಾನ ನೀಡದೇ ಇರುವುದು ಬಹಳ ಬೇಸರ ತಂದಿದೆ. ಆದರೆ ಬಜೆಟ್ನ ಉತ್ತರದ ಸಂದರ್ಭದಲ್ಲಾದರೂ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಅನುದಾನ ನೀಡಬೇಕು ಎಂದು ಆಗ್ರಹಿಸುತ್ತಾ ಇದ್ದೇವೆ. ಉಡುಪಿ ಮಲ್ಪೆಯ ಮೀನುಗಾರಿಕಾ ಜಟ್ಟಿಗೆ 15 ಕೋಟಿ ಮತ್ತು ಕೆರೆಗಳ ಅಭಿವೃದ್ಧಿಗೆ 40 ಕೋಟಿ ಅನುದಾನ ಮೀಸಲಿಟ್ಟಿದ್ದು ಸ್ವಾಗತಾರ್ಹವಾಗಿದೆ. ಆದರೆ ಉಳಿದ ಎಲ್ಲಾ ಬಜೆಟ್ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿದೆಯೇ ವಿನಃ ಹೊಸ ಯೋಜನೆಗಳು ಕಂಡುಬಂದಿಲ್ಲ.
ನಗರಾಭಿವೃದ್ಧಿ ಇಲಾಖೆಯ ಮೂಲಕ ಮಹಾನಗರ ಪಾಲಿಕೆಗೆ ನಗರೋಥ್ಥಾನದ ಮೂಲಕ ಅನುದಾನ ನೀಡಿದ್ದು,ರಾಜ್ಯದ ಯಾವುದೇ ನಗರಸಭೆಗಳಿಗೆ ಹೆಚ್ಚಿನ ಒತ್ತು ನೀಡಿಲ್ಲ. ಅದೇ ರೀತಿ ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ಯೋಜನೆಗಳು ಘೋಷಣೆ ಆಗದೇ ಇರುವುದು ನಿರಾಸದಾಯಕವಾಗದೆ.ಅಷ್ಟೇ ಅಲ್ಲದೆ ಇಷ್ಟು ವರ್ಷ ಯಾರೇ ಬಜೆಟ್ ಮಂಡನೆ ಮಾಡುವ ಸಂದರ್ಭದಲ್ಲೂ ಬಜೆಟ್ ಪುಸ್ತಕವನ್ನು ಶಾಸಕರ ಕೈಗೆ ನೀಡುತ್ತಿದ್ದರು, ಆದರೆ ಈ ಬಾರಿ ಮಾಧ್ಯಮ ಮತ್ತು ಶಾಸಕರನ್ನು ಕತ್ತಲಲ್ಲಿ ಇಟ್ಟು ಕುಮಾರಸ್ವಾಮಿ ಅವರು ಬಜೆಟ್ ಮಂಡನೆ ಮಾಡಿದ್ದಾರೆ,ಇದೊಂದು ವಿಪರ್ಯಾಸದ ಸಂಗತಿ ಎಂದು ಶಾಸಕರು ಹೇಳಿದ್ದಾರೆ.