ಮುಜರಾಯಿ ದೇವಾಲಯಗಳಲ್ಲಿ ಗೋಶಾಲೆ ನಿರ್ಮಿಸಲು ಕ್ರಮ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Spread the love

ಮುಜರಾಯಿ ದೇವಾಲಯಗಳಲ್ಲಿ ಗೋಶಾಲೆ ನಿರ್ಮಿಸಲು ಕ್ರಮ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಬೆಂಗಳೂರು: ರಾಜ್ಯದ ಪ್ರಮಖ 25 ದೇವಾಲಯಗಳ ವ್ಯಾಪ್ತಿಯಲ್ಲಿ ಬೃಹತ್ ಗೋಶಾಲೆಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗೋಶಾಲೆ ನಿರ್ಮಿಸಲು ಅನುಕೂಲವಾಗುವಂತೆ ಎ ದರ್ಜೆಯ ವ್ಯಾಪ್ತಿಗೆ ಬರುವ ದೇವಾಲಯಗಳ ಸುತ್ತ ಮುತ್ತ 10 ರಿಂದ 15 ಎಕರೆ ಭೂಮಿ ಗುರುತಿಸಿ ಒದಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರತಿ ಗೋಶಾಲೆಗಳಲ್ಲಿ ಗರಿಷ್ಠ 200 ಗೋವುಗಳನ್ನು ಸಾಕಲು ವ್ಯವಸ್ಥೆ ಮಾಡಲಾಗಿದೆ. ಗೋಶಾಲೆ ನಿರ್ಮಾಣ ಮಾಡಲು ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಅವರ ಮಾರ್ಗದರ್ಶನ ಪಡೆಯಲಾಗುವುದು ಎಂದರು.

ರಾಜ್ಯದ ಎಲ್ಲ ದೇವಾಲಯಗಳ ಆಸ್ತಿ ಸಂರಕ್ಷಿಸಲು ಮತ್ತು ಅಲ್ಲಿನ ಆದಾಯ ಸೋರಿಕೆ ತಡೆಗಟ್ಟಲು ತೀರ್ಮಾನಿಸಿರುವ ಸರ್ಕಾರ ಈ ಕುರಿತು ವಿವರವಾದ ಪರಿಶೀಲನೆ ನಡೆಸಿ ಮುಂದಿನ ಮೂರು ತಿಂಗಳಲ್ಲಿ ವರದಿ ನೀಡುವಂತೆ ಹಿರಿಯ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸೂಚನೆ ನೀಡಲಾಗಿದೆ. ಮುಜರಾಯಿ ದೇವಸ್ಥಾನಗಳ ಒಟ್ಟು ಆಸ್ತಿಯ ಪ್ರಮಾಣದ ಬಗ್ಗೆಯೂ ಮಾಹಿತಿ ನೀಡುವಂತೆ ಕೋರಲಾಗಿದೆ ಎಂದು ಹೇಳಿದರು.

ದೇವಾಲಯಗಳ ವ್ಯಾಪ್ತಿಯಲ್ಲಿನ ಆಸ್ತಿ ಸಂರಕ್ಷಿಸಬೇಕಿದ್ದು, ರಾಜ್ಯದಲ್ಲಿ 33 ಸಾವಿರಕ್ಕಿಂತ ಹೆಚ್ಚು ಮುಜುರಾಯಿ ದೇವಾಲಯಗಳಿದ್ದು ಇದರ ವ್ಯಾಪ್ತಿಯ ಆಸ್ತಿ,ಪಾಸ್ತಿ ಕುರಿತು ಸ್ಪಷ್ಟ ವಿವರ ಪಡೆಯಲಾಗುವುದು. ಮುಂದಿನ ಮೂರು ತಿಂಗಳಲ್ಲಿ ಈ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ವಿವರ ನೀಡಿದರು.

ರಾಜ್ಯದ ನೂರು ಪ್ರಮುಖ ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಸಪ್ತಪದಿನೆಯನ್ನು ಎರಡು ಹಂತಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ. ಮೊದಲ ಹಂತದ ಸಾಮೂಹಿಕ ವಿವಾಹ ಕಾರ್ಯಕ್ರಮ ಏಪ್ರಿಲ್ 26 ರಂದು ನಡೆಯಲಿದ್ದು ಈ ಹಂತದಲ್ಲಿ ವಿವಾಹವಾಗಲಿಚ್ಚಿಸುವವರು ಅರ್ಜಿ ಸಲ್ಲಿಸಲು ಮಾರ್ಚ್ 27 ಕೊನೆಯ ದಿನವಾಗಿದೆ. ಮೊದಲ ಹಂತದಲ್ಲಿ ವಿವಾಹವಾಗಲು 1218 ಮಂದಿ ಅರ್ಜಿಗಳನ್ನು ಪಡೆದಿದ್ದು ಇದರಲ್ಲಿ ಇನ್ನೂರು ಮಂದಿ ಈಗಾಗಲೇ ದಾಖಲೆ ಸಹಿತ ಅರ್ಜಿ ಸಲ್ಲಿಸಿದ್ದಾರೆ ಎಂದರು.

ಎರಡನೇ ಹಂತದ ಸಾಮೂಹಿಕ ವಿವಾಹ ಕಾರ್ಯಕ್ರಮ ಮೇ 24 ರಂದು ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ವಿವಾಹವಾಗುವ ಪ್ರತಿ ಜೋಡಿಯ ಮೇಲೆ ಐವತ್ತೈದು ಸಾವಿರ ರೂಪಾಯಿ ಒದಗಿಸಲಾಗುವುದು ಎಂದು ಹೇಳಿದರು.


Spread the love