Home Mangalorean News Kannada News ಮುಜುರಾಯಿಗೆ ಮಂದಿರ ಬೇಡವಾದರೆ ವಕ್ಫ್’ಗೆ ಮಸೀದಿ ಬೇಕೇ? – ರಶೀದ್ ವಿಟ್ಲ

ಮುಜುರಾಯಿಗೆ ಮಂದಿರ ಬೇಡವಾದರೆ ವಕ್ಫ್’ಗೆ ಮಸೀದಿ ಬೇಕೇ? – ರಶೀದ್ ವಿಟ್ಲ

Spread the love

ಮುಜುರಾಯಿಗೆ ಮಂದಿರ ಬೇಡವಾದರೆ ವಕ್ಫ್’ಗೆ ಮಸೀದಿ ಬೇಕೇ? – ರಶೀದ್ ವಿಟ್ಲ

ಮಂಗಳೂರು: ರಾಜ್ಯ ರಾಜಕೀಯದಲ್ಲಿ ದೇವಸ್ಥಾನ, ಮಠ, ಮಂದಿರಗಳನ್ನು ಮುಜುರಾಯಿ ಇಲಾಖೆಯ ಸುಪರ್ದಿಗೆ ತರುವ ಬಗ್ಗೆ ಸಾರ್ವಜನಿಕ ಅಭಿಪ್ರಾಯಕ್ಕಾಗಿ ಹೊರಡಿಸಿರುವ ಕೋರ್ಟ್ ಸೂಚನೆಯ ಸುತ್ತೋಲೆಯ ಕುರಿತು ವಿಧಾನಸಭೆಯಲ್ಲಿ ಅಲ್ಲೋಲ ಕಲ್ಲೋಲವೇ ನಡೆದು ಹೋಯಿತು. ಹಲವರು ಭೂಕಂಪನವಾದಂತೆ ವರ್ತಿಸಿದರು. ರುದ್ರ ತಾಂಡವದ ವೇದಿಕೆ ನಿರ್ಮಿಸಿದರು. ಟಿ.ವಿ. ಪತ್ರಿಕೆಗಳು ದಿನಗಟ್ಟಲೆ, ಪುಟಪೂರ್ತಿ ವರದಿ ಮಾಡಿದವು. ಗಂಟೆಗಟ್ಟಲೆ ಡಿಬೇಟ್ ಗಳು ನಡೆದವು. ಆದರೆ ಕರ್ನಾಟಕ ರಾಜ್ಯ ಸರಕಾರದ ವಕ್ಫ್ ಅಧೀನದಲ್ಲಿರುವ ಮುಸ್ಲಿಂ ಧಾರ್ಮಿಕ ಸಂಸ್ಥೆಗಳ ಬಗ್ಗೆ ಯಾರೂ ತುಟಿ ಪಿಟಿಕ್ ಎನ್ನದಿರುವುದು ಕಾಲದ ದುರಂತ ಎನ್ನಬಹುದು. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದಕ್ಕೆ ಸುಣ್ಣ ಎಂಬ ತತ್ವದ ವಿರುದ್ಧ ಹೋರಾಡುವ ಅಗತ್ಯವಿದೆ ಎಂದು ರಶೀದ್ ವಿಟ್ಲ ಸದಸ್ಯರು, ದ.ಕ.ಜಿಲ್ಲಾ ವಕ್ಫ್ ಸಮಿತಿ ಹೇಳಿದರು.

ನಮ್ಮ ರಾಜ್ಯದಲ್ಲಿ ಲಕ್ಷಾಂತರ ದೇವಸ್ಥಾನ, ಮಠ-ಮಂದಿರಗಳಿವೆ. ಆದರೆ 34,000 ಹಿಂದೂ ಧಾರ್ಮಿಕ ಸಂಸ್ಥೆಗಳು ಹಿಂದೂ ಧಾರ್ಮಿಕ ದತ್ತಿ ಮುಜುರಾಯಿ ಇಲಾಖೆಯ ಸುಪರ್ದಿಯಲ್ಲಿವೆ. ಉಳಿದ ಲಕ್ಷಕ್ಕೂ ಮಿಕ್ಕ ಮಠ-ಮಂದಿರ, ದೇವಸ್ಥಾನ-ದೈವಸ್ಥಾನಗಳು ಮುಜರಾಯಿ ಇಲಾಖೆಗೆ ನೋಂದಾಯಿಸದೆ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿವೆ. ಆದರೆ ಮುಸ್ಲಿಂ ಧಾರ್ಮಿಕ ಸಂಸ್ಥೆಗಳು “ಸರಕಾರದ ಗುಮ್ಮ”ಕ್ಕೆ ಹೆದರಿ ಸರಕಾರದ ವಕ್ಫ್ ಇಲಾಖೆಗೆ ನೋಂದಾಯಿಸಿ ಸರಕಾರದ ನಿರ್ದೇಶನದಂತೆ ನಡೆಯುತ್ತಿದೆ. ರಾಜ್ಯದಲ್ಲಿ ಸುಮಾರು 35,000ದಲ್ಲಿ ಸುಮಾರು 29,000 ಮಸೀದಿಗಳು, ದರ್ಗಾಗಳು, ಖಬರ್ ಸ್ಥಾನಗಳು, ಮದ್ರಸಗಳು, ಈದ್ಗಾಗಳು, ಅನಾಥಾಶ್ರಮಗಳು, ಶಾಲೆಗಳು ಕರ್ನಾಟಕ ಸರಕಾರದ ವಕ್ಫ್ ಸಂಸ್ಥೆಯ ಅಧೀನದಲ್ಲಿದೆ. ಅಂದರೆ ರಾಜ್ಯದಲ್ಲಿ ತಲೆ ಎತ್ತಿರುವ ಶೇಕಡಾ 80ರಷ್ಟು ಇಸ್ಲಾಮಿಕ್ ಸಂಸ್ಥೆಗಳು ಸರಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಉಳಿದ ಶೇಕಡಾ 20 ಸಂಸ್ಥೆಗಳು ವಕ್ಫ್ ನೋಂದಾವಣೆಯ ಮಾಹಿತಿಯ ಕೊರತೆ, ದಾಖಲೆಯ ಸಮಸ್ಯೆ ಹಾಗೂ ಇನ್ನಿತರ ಕಾರಣಗಳಿಂದ ನೋಂದಾಯಿಸಿಲ್ಲ ಹೊರತು ವಕ್ಫ್ ನೋಂದಾವಣೆಗೆ ಅಂತಹ ಸಂಸ್ಥೆಗಳು ವಿರುದ್ಧವಾಗಿಲ್ಲ. ವಕ್ಫ್ ಆಸ್ತಿ ಅಂದರೆ ದೇವರ ಆಸ್ತಿ ಎಂದು ನಂಬಿದವರು ಮುಸ್ಲಿಮರು. ಆದ್ದರಿಂದ ವಕ್ಫ್ ಸಂಸ್ಥೆಗೆ ಒಪ್ಪಿಸುತ್ತಿದ್ದಾರೆ.

ಕರ್ನಾಟಕ ರಾಜ್ಯ ವಕ್ಫ್ ಸಂಸ್ಥೆಗೆ ಮುಸ್ಲಿಂ ಧಾರ್ಮಿಕ ಕೇಂದ್ರಗಳು ನೋಂದಾವಣೆ ಮಾಡುವಾಗ ಎಲ್ಲಾ ದಾಖಲೆಗಳ ಪ್ರತಿಯನ್ನು ಪಡೆಯಲಾಗುತ್ತದೆಯಲ್ಲದೆ ವಕ್ಫ್ ನಿಯಮಗಳ ಫಾರಂ ಗೆ ಸಹಿ ಹಾಕಿ ಒಡಂಬಡಿಕೆ ಮಾಡಿಕೊಳ್ಳುತ್ತದೆ. ಅದು ಸರಕಾರದಲ್ಲಿ ರಿಜಿಸ್ತ್ರಿಯೂ ಆಗುತ್ತದೆ. ಹೀಗೇ ನೋಂದಾವಣೆಯಾದ ಇಸ್ಲಾಮಿಕ್ ಸಂಸ್ಥೆಗಳಲ್ಲಿ ವಕ್ಫ್ ನಿಯಮಕ್ಕೆ ವಿರುದ್ಧವಾದ ಯಾವುದೇ ಕೆಲಸ ಮಾಡುವಂತಿಲ್ಲ. ಸ್ಥಿರ ಹಾಗೂ ಚರ ಸೊತ್ತುಗಳು ವಕ್ಫ್ ಆಸ್ತಿಯಾಗಿ ಮಾರ್ಪಡುತ್ತವೆ. ಅದನ್ನು ಮಾರುವಂತಿಲ್ಲ. ಕಮರ್ಷಿಯಲ್ ಆಗಿ ಉಪಯೋಗಿಸುವಂತಿಲ್ಲ. ಸರಕಾರದ ಸುತ್ತೋಲೆಯನ್ನು ಪಾಲಿಸುತ್ತಲೇ ಇರಬೇಕು. ವರ್ಷಕ್ಕೊಮ್ಮೆ ಆಯವ್ಯಯ ಲೆಕ್ಕಾಚಾರವನ್ನು ಸರಕಾರಕ್ಕೆ ಒಪ್ಪಿಸಬೇಕು. ಮಹಾಸಭೆಯ ವರದಿ ನೀಡಬೇಕು. ಪದಾಧಿಕಾರಿಗಳ ವಿವರ ಪ್ರಕಟಿಸಬೇಕು. ತಪ್ಪಿದರೆ ಅಂತಹ ಸಂಸ್ಥೆಗಳ ವಿರುದ್ಧ ವಕ್ಫ್ ತನ್ನ ಛಾಟಿಯೇಟು ಬೀಸುತ್ತದೆ. ನಿಯಮ ಮೀರಿದರೆ ಇಸ್ಲಾಮಿಕ್ ಸಂಸ್ಥೆಯ ಆಡಳಿತ ಮಂಡಳಿಯನ್ನು ವಜಾಗೊಳಿಸಿ ವಕ್ಫ್ ತನ್ನ ಸುಪರ್ದಿಗೆ ತಂದು ಸರಕಾರದ ಆಡಳಿತಾಧಿಕಾರಿಯನ್ನು ನೇಮಿಸುತ್ತದೆ. ಎಲ್ಲದಕ್ಕೂ ಸರಕಾರ ವಕ್ಫ್ ನ ಲಕ್ಷ್ಮಣ ರೇಖೆ ಹಾಕುತ್ತದೆ. ಇವನ್ನೆಲ್ಲಾ ಸಹಿಸುತ್ತಾ, ಪಾಲಿಸುತ್ತಾ ಮಸೀದಿ, ಈದ್ಗಾ, ದರ್ಗಾ, ಮದ್ರಸ, ಅನಾಥಾಲಯ, ಖಬರ್ ಸ್ಥಾನಗಳು ಕೆಲಸ ಮಾಡಬೇಕಾಗುತ್ತದೆ. ಅಂದರೆ ವಕ್ಫ್ ನೋಂದಣಿಯಾದರೆ ಮುಸ್ಲಿಂ ಸಂಸ್ಥೆಗಳು ಸರಕಾರೀಕರಣದ ಸುಲಿಯೊಳಗೆ ಸುತ್ತಿಕೊಳ್ಳುತ್ತವೆ ಎಂದರ್ಥ. ಆದರೆ ಇದರ ದುರುಪಯೋಗ ಅವ್ಯಾಹತವಾಗಿದೆ.

ನಮ್ಮ ರಾಷ್ಟ್ರದಲ್ಲಿ ಆರು ಲಕ್ಷ ಎಕರೆ ವಕ್ಫ್ ಆಸ್ತಿ ಇದೆ. ಭಾರತದಲ್ಲಿ ಅತ್ಯಧಿಕ ಸೊತ್ತು ಇರುವುದು ರೈಲ್ವೇ ಇಲಾಖೆಗೆ. ನಂತರದ ಸ್ಥಾನ ಅರಣ್ಯ ಇಲಾಖೆಯದ್ದು. ಮೂರನೇ ಅತ್ಯಧಿಕ ಜಮೀನು ಇರುವುದು ವಕ್ಫ್ ಇಲಾಖೆಯ ಅಧೀನದಲ್ಲಿ ಎಂದರೆ ಆಶ್ಚರ್ಯ-ಕುತೂಹಲ ಎಲ್ಲವೂ ಒಟ್ಟೊಟ್ಟಿಗೆ ಆಗುತ್ತದೆ. ಕರ್ನಾಟಕವೊಂದರಲ್ಲೇ ಒಂದು ಲಕ್ಷ ನಲವತ್ತು ಸಾವಿರ ಎಕರೆ ಮುಸ್ಲಿಮರ ಸಂಸ್ಥೆಗಳ ಜಮೀನು ಸರಕಾರದ ವಕ್ಫ್ ಇಲಾಖೆಗೆ ಬರೆದುಕೊಡಲಾಗಿದೆ. ಈ ಜಮೀನುಗಳು ಖಾಸಗಿಯಾಗಿ ಜನರು ತಮ್ಮ ಸ್ವಇಚ್ಛೆಯಿಂದ ಒಳ್ಳೆಯ ಉದ್ದೇಶಗಳನ್ನಿಟ್ಟುಕೊಂಡು ಇಸ್ಲಾಮಿಕ್ ಸಂಸ್ಥೆಗಳಿಗೆ ದಾನವಾಗಿ ನೀಡಿದಂತಹವು. ಅವೆಲ್ಲಾ ಈಗ ಸರಕಾರದ ಬೊಕ್ಕಸಕ್ಕೆ ಸೇರಿಕೊಂಡಿವೆ. ಕರ್ನಾಟಕದ ಒಟ್ಟೂ ವಕ್ಫ್ ಆಸ್ತಿಯ ಶೇಕಡಾ 50ರಷ್ಟು ಸೊತ್ತು ಅನ್ಯರ ಪಾಲಾಗಿದೆ. ಅರ್ಥಾತ್ ಒತ್ತುವರಿಯಾಗಿದೆ, ಅಕ್ರಮವಾಗಿದೆ. ಸುಮಾರು ಎರಡು ಲಕ್ಷ ಕೋಟಿ ರೂಪಾಯಿಗಳ ಸೊತ್ತುಗಳು ರಾಜ್ಯ ವಕ್ಫ್ ಅಧೀನದಿಂದ ಕೈತಪ್ಪಿ ಹೋಗಿದೆ. ಇದನ್ನು ಇಸ್ಲಾಮಿಕ್ ಸಂಸ್ಥೆಗಳು ಅನುಭವಿಸುತ್ತಿಲ್ಲ ಎನ್ನುವುದು ದುರಂತ. ಉದಾಹರಣೆಗೆ ಬೆಂಗಳೂರಿನ ಪಂಚತಾರಾ ಹೋಟೆಲ್ “ವಿಂಡ್ಸರ್ ಮೇನರ್” ಐಟಿಸಿ ಕಂಪೆನಿ ಒಡೆತನದಲ್ಲಿದೆ. ದಿನನಿತ್ಯ ಕೋಟ್ಯಾಂತರ ರೂಪಾಯಿ ವ್ಯವಹಾರ ಮಾಡುತ್ತಿದೆ. ಈ ಹೋಟೆಲ್ ನ ಅಡಿಸ್ಥಳ ವಕ್ಫ್ ಸಂಸ್ಥೆಗೆ ಒಳಪಟ್ಟದ್ದು. ವಕ್ಫ್ ಅಂದಿನ ದಿನಗಳಲ್ಲಿ ಜುಜುಬಿ ಬಾಡಿಗೆಯ ಆಮಿಷಕ್ಕೆ ಹೋಟೆಲ್ ಸಂಸ್ಥೆಗೆ ಲೀಸ್ ಗೆ ನೀಡಿ ಎಡವಟ್ಟು ಮಾಡಿಕೊಂಡಿದೆ. ಈಗ ವಕ್ಫ್ ಕೋರ್ಟು ಮೆಟ್ಟಿಲೇರಿದೆ. ಇಂತಹ ಎಡವಟ್ಟುಗಳು ಒಂದೆರಡಲ್ಲ. ಖಾಸಗಿಯಾಗಿ ಮಾತ್ರವಲ್ಲ ಕೆಲವೆಡೆ ಸರಕಾರವೂ ವಕ್ಫ್ ಆಸ್ತಿಯನ್ನು ಒತ್ತುವರಿ ಮಾಡಿಕೊಂಡಿದೆ. ಮತ್ತೆ ಕೆಲವೆಡೆ ಅತೀ ಕಡಿಮೆ ಗುತ್ತಿಗೆ ದರಕ್ಕೆ ವಕ್ಫ್ ಆಸ್ತಿಯನ್ನು ಬಿಟ್ಟುಕೊಡಲಾಗಿದೆ. ಒತ್ತುವರಿಯಾದ ರಾಜ್ಯದ ಶೇಕಡಾ 50ರಷ್ಟು ಸೊತ್ತುಗಳು ಮುಸ್ಲಿಮರ ಪಾಲಾದರೆ ಮುಸ್ಲಿಂ ಕಲ್ಯಾಣಕ್ಕೆ ಯಾವುದೇ ಅನುದಾನದ ಅಗತ್ಯವಿಲ್ಲ. 80 ಲಕ್ಷದಷ್ಟಿರುವ ರಾಜ್ಯದ ಮುಸ್ಲಿಮರು ನೆಮ್ಮದಿಯಿಂದ ಜೀವಿಸಬಹುದು. ಮಠ-ಮಂದಿರದ ಸರಕಾರೀಕರಣದ ಬಗ್ಗೆ ಮಾತನಾಡುವವರು ಮಸೀದಿ-ಈದ್ಗಾಗಳ ಬಗ್ಗೆಯೂ ಚಿಂತಿಸುವ ಅನಿವಾರ್ಯತೆ ಇದೆ. ಈಗಾಗಲೇ ವಕ್ಫ್ ಬಲೆಗೆ ಸಿಲುಕಿರುವ ಇಸ್ಲಾಮಿಕ್ ಕೇಂದ್ರಗಳನ್ನು ಬಿಡುಗಡೆಗೊಳಿಸಿ ಕೊಡುವ ತಾಕತ್ತು ಹಾಗೂ ಒತ್ತುವರಿಯಾದ ಜಮೀನನ್ನು ಮರಳಿಸಿ ಕೊಡುವ ಧೈರ್ಯ ಯಾರಿಗಾದರೂ ಇದೆಯಾ? ಎಂದು ಪ್ರಶ್ನಿಸಬೇಕಾದ ಪ್ರಸ್ತುತತೆ ಎದುರಾಗಿದೆ.


Spread the love

Exit mobile version