ಮುಡಾ ಪ್ರಕರಣ : ಈಡಿ ತನಿಖೆಗೆ ಹೈಕೋರ್ಟ್ ಅನುಮತಿ
ಬೆಂಗಳೂರು: ಮುಡಾ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಈಡಿ) ತನಿಖೆಗೆ ಹೈಕೋರ್ಟ್ ವಿಭಾಗೀಯ ಪೀಠ ಗ್ರೀನ್ ಸಿಗ್ನಲ್ ನೀಡಿದೆ.
ಮುಡಾದ ಮಾಜಿ ಆಯುಕ್ತ ಡಿ.ಬಿ. ನಟೇಶ್ ಅವರ ಹೇಳಿಕೆ ಆಧರಿಸಿ ಇತರೆ ಆರೋಪಿಗಳ ವಿರುದ್ಧದ ತನಿಖೆಗೆ ಈಡಿಗೆ ಅನುಮತಿ ನೀಡಿ ಹೈಕೋರ್ಟ್ ವಿಭಾಗೀಯ ಪೀಠ ಆದೇಶಿದೆ.
ಮುಡಾ ಪ್ರಕರಣದಲ್ಲಿ ಈಡಿ ಪ್ರವೇಶ ಮಾಡುವುದರಿಂದ ಪ್ರಕರಣದ ಎ1 ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎ2 ಆಗಿರುವ ಪತ್ನಿ ಪಾರ್ವತಿ ಸೇರಿದಂತೆ ಇತರರಿಗೂ ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ.
ಈಡಿ ಸಮನ್ಸ್ ರದ್ದು ಕೋರಿ ಡಾ.ಡಿ.ಬಿ.ನಟೇಶ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ನಟೇಶ್ ಅವರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ವಿಚಾರಣೆ ನಡೆಸಿದ ಸಿಜೆ ಎನ್.ವಿ.ಅಂಜಾರಿಯಾ, ನ್ಯಾ.ಕೆ.ವಿ.ಅರವಿಂದ್ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ, ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದೆ. ಹಾಗೆಯೇ ಡಿ.ಬಿ.ನಟೇಶ್ ಹೇಳಿಕೆ ಆಧರಿಸಿ ಈಡಿ ತನಿಖೆ ಮುಂದುವರಿಸಬಹುದು ತಿಳಿಸಿದೆ.
ಆ ಮೂಲಕ ಈಡಿ ತನಿಖೆಗೆ ಹೈಕೋರ್ಟ್ ಹಸಿರು ನಿಶಾನೆ ತೋರಿದೆ.