ಮುಡಾ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ಒತ್ತು: ಮರೀಗೌಡ
ಮೈಸೂರು: ಮುಡಾ ವ್ಯಾಪ್ತಿಗೆ ಬರುವ ಪೊಲೀಸ್ ಲೇಔಟ್‌ನಲ್ಲಿರುವ ಕೆರೆಗೆ ಒಳಚರಂಡಿ ನೀರು ಹರಿದು ಬರುತ್ತಿದ್ದು ಈ ಕೆರೆ ಮೃಗಾಲಯ ಪ್ರಾಧಿಕಾರದ ಅಧೀನದಲ್ಲಿದ್ದು, ಕೆರೆಯನ್ನು ಪ್ರಾಧಿಕಾರದ ವಶಕ್ಕೆ ತೆಗೆದುಕೊಂಡು 12.60 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಮುಡಾ ಅಧ್ಯಕ್ಷ ಕೆ.ಮರೀಗೌಡ ತಿಳಿಸಿದರು.
ಮೈಸೂರು ತಾಲೂಕು ಕೆ.ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಮುಡಾ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳ ಒಳಚರಂಡಿಗಳಿಗೆ ಸೇಫ್ಟಿ ಟ್ಯಾಂಕ್ ನಿರ್ಮಿಸಲು ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ಮುಡಾ ಆಯುಕ್ತ ದಿನೇಶ್‌ಕುಮಾರ್ ಹಾಗೂ ಅಧಿಕಾರಿಗಳ ತಂಡದೊಂದಿಗೆ ಮುಡಾ ವ್ಯಾಪ್ತಿಯ ಪೊಲೀಸ್ ಬಡಾವಣೆಯ ಕೆರೆ, ವರುಣಾ ಕೆರೆ, ಚಿಕ್ಕಹಳ್ಳಿಯ ಮಲೀನ ನೀರು, ವಸಂತನಗರ ವಾಟರ್ ಟ್ಯಾಂಕ್ ಹಾಗೂ ಮುಡಾ ಕಟ್ಟಡಗಳನ್ನು ಪರಿಶೀಲಿಸಿದರು
ಈ ವೇಳೆ ಮಾತನಾಡಿ ಮುಡಾ ವ್ಯಾಪ್ತಿಯ ಬಡಾವಣೆಗಳಲ್ಲಿ ಒಳಚರಂಡಿ, ಕುಡಿಯುವ ನೀರು ಹಾಗೂ ಕೆರೆಗಳ ಅಭಿವೃದ್ಧಿ, ಮಲಿನ ನೀರು ಶುದ್ಧೀಕರಣ ಘಟಕ ನಿರ್ಮಿಸಲು ಕ್ರಮಕೈಗೊಳ್ಳಲಾಗುವುದು, ವರುಣಾ ಕೆರೆಗೆ ವಸಂತನಗರ, ನಾಡನಹಳ್ಳಿ, ಕೆಬಿಎಲ್ ಬಡಾವಣೆ, ಬುಗತಗಳ್ಳಿ, ಚಿಕ್ಕಹಳ್ಳಿ, ವಾಜಮಂಗಲ ಬಡಾವಣೆಗಳ ಒಳಚರಂಡಿಯ ಮಲೀನ ನೀರು ಹರಿದು ಬರುತ್ತಿರುವುದರಿಂದ ಇದನ್ನು ತಡೆಯಲು 30.88 ಕೋಟಿ ವೆಚ್ಚದಲ್ಲಿ ಮಲೀನ ನೀರು ಶುದ್ಧೀಕರಣ ಘಟಕ ನಿರ್ಮಿಸಲು ಕ್ರಮಕೈಗೊಳ್ಳಲಾಗುವುದು.
ಮುಡಾ ವತಿಯಿಂದ ನಿರ್ಮಿಸಿರುವ ಕಟ್ಟಡಗಳು, ಛತ್ರಗಳನ್ನು ಈಗಾಗಲೇ ಬಾಡಿಗೆಗೆ ನೀಡಲಾಗಿದೆ. ಈಗ ಹೊಸದಾಗಿ ಟೆಂಡರ್ ಕರೆದು ಪಿಡಬ್ಲ್ಯೂಡಿ ದರದಂತೆ ಬಾಡಿಗೆ ನಿಗದಿ ಮಾಡಿದರೆ ಪ್ರಾಧಿಕಾರಕ್ಕೆ ಬರುವ ಆದಾಯ 4ಪಟ್ಟು ಹೆಚ್ಚಾಗುತ್ತದೆ. ಇದರಿಂದ ಮುಡಾಗೆ ಲಾಭವಾಗಲಿದ್ದು, ಇದಕ್ಕೆ ಹೆಚ್ಚಿನ ಗಮನ ನೀಡಲಾಗುವುದು. ಮುಡಾ ವ್ಯಾಪ್ತಿಯ ಕೆಲ ಬಡಾವಣೆಗಳಲ್ಲಿ ಮೂಲ ಸೌಲಭ್ಯಗಳಿಲ್ಲ. ಹೀಗಾಗಿ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಡಾ ಆಯುಕ್ತ ದಿನೇಶ್‌ಕುಮಾರ್, ಕಾರ್ಯದರ್ಶಿ ಡಿ.ಶೇಖರ್, ಎಸ್‌ಇ ಧರಣೇಂದ್ರಪ್ಪ, ಎಇಇ ಯಾದವಗಿರಿ, ಪ್ರಶಾಂತ್, ಪರಮೇಶ್, ಬಿ.ರವಿ, ಪ್ರಕಾಶ್, ನಾಡನಹಳ್ಳಿ ರವಿ ಹಾಜರಿದ್ದರು.