ಮುಮ್ತಾಝ್ ಅಲಿ ನಾಪತ್ತೆ ಪ್ರಕರಣ:  6 ಮಂದಿಯ ವಿರುದ್ಧ ಪ್ರಕರಣ ದಾಖಲು

Spread the love

 ಮುಮ್ತಾಝ್ ಅಲಿ ನಾಪತ್ತೆ ಪ್ರಕರಣ:  6 ಮಂದಿಯ ವಿರುದ್ಧ ಪ್ರಕರಣ ದಾಖಲು
 

ಮಂಗಳೂರು: ಕೂಳೂರು ಸೇತುವೆ ಬಳಿ ಕಾರು ನಿಲ್ಲಿಸಿ ನಾಪತ್ತೆಯಾಗಿದ್ದ ಉದ್ಯಮಿ ಮುಮ್ತಾಝ್ ಅಲಿ ಅವರ ನಾಪತ್ತೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಸಾಮಾಜಿಕ – ಧಾರ್ಮಿಕ ಮುಂದಾಳು ಮುಮ್ತಾಝ್ ಅಲಿ ಅವರನ್ನು ನಿರಂತರವಾಗಿ ಬೆದರಿಸಿ, ಬ್ಲ್ಯಾಕ್ ಮೇಲ್ ಮಾಡಿ ಲಕ್ಷಾಂತರ ರೂಪಾಯಿ ಹಣವನ್ನು ಕಿತ್ತುಕೊಂಡು ಮತ್ತಷ್ಟು ಹಣಕ್ಕೆ ಬೆದರಿಕೆಯಿಟ್ಟ ಆರೋಪಿದಲ್ಲಿ ಮಹಿಳೆ ಸೇರಿದಂತೆ 6 ಮಂದಿ ಆರೋಪಿಗಳ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ (BNSS) 173ರ ಅಡಿ ಎಫ್ ಐ ಆರ್ ದಾಖಲಾಗಿದೆ.

ಮುಮ್ತಾಝ್ ಅಲಿ ಅವರು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತಪಡಿಸಿ ಅವರ ಸಹೋದರ ಹೈದರ್ ಅಲಿ ಎಂಬವರು ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಹಿಳೆಯನ್ನು ಬಳಸಿಕೊಂಡು ದುರುದ್ದೇಶದಿಂದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ರೆಹಮತ್ ಸೇರಿದಂತೆ, ಅಬ್ದುಲ್ ಸತ್ತಾರ್, ಶಾಫಿ, ಮುಸ್ತಫಾ, ಶುಐಬ್, ಸತ್ತಾರ್ ಅವರ ಕಾರು ಚಾಲಕ ಸಿರಾಜ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.

ನನ್ನ ಸಹೋದರ ಮುಮ್ತಾಝ್ ಅಲಿ ಸಮಾಜದಲ್ಲಿ ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿದ್ದು, ಕಳೆದ 30 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿದ್ದರು. ಸಮಾಜ ಸೇವೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಹಲವು ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರಾಗಿದ್ದು, ಅವರ ಪ್ರಸಿದ್ಧಿಯನ್ನು ಹಾಳು ಮಾಡುವ ಉದ್ದೇಶದಿಂದ ಆರೋಪಿಗಳೆಲ್ಲರೂ ಸೇರಿಕೊಂಡು ಅವರು ಆತ್ಮಹತ್ಯೆಗೆ ಶರಣಾಗುವಂತೆ ಪ್ರಚೋದನೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಗಳ ಪೈಕಿ ರೆಹಮತ್ ಎಂಬವರು ಅಕ್ರಮ ಸಂಬಂಧ ಇದೆ ಎಂದು ಸುಳ್ಳು ಪ್ರಚಾರ ಮಾಡಿ ಹೆಸರನ್ನು ಹಾಳು ಮಾಡುತ್ತೇನೆ ಎಂದು ಹೆದರಿಸಿ 2024 ರ ಜುಲೈ ಯಿಂದ ಇದುವರೆಗೂ 50 ಲಕ್ಷ ರೂ.ಗಿಂತಲು ಅಧಿಕ ಮೊತ್ತವನ್ನು ವಸೂಲಿ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಬೆದರಿಸಿ 25 ಲಕ್ಷ ರೂ. ಹಣವನ್ನು ಚೆಕ್ ಮೂಲಕ ಪಡೆದುಕೊಂಡಿದ್ದಾರೆ ಎಂದು ಹೈದರ್ ಅಲಿ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಗಳು ಈ ಮೊದಲು ಮುಮ್ತಾಝ್ ಅಲಿಯವರಿಗೆ ದೈಹಿಕವಾಗಿ ಹಲ್ಲೆ ಮಾಡಿರುವ ಬಗ್ಗೆಯೂ ದೂರಿನಲ್ಲಿ ತಿಳಿಸಿರುವ ಅವರು, ಸತ್ತಾರ್ ಎಂಬಾತ ಮುಮ್ತಾಝ್ ಅಲಿ ಅವರ ರಾಜಕೀಯ ವಿರೋಧಿಯಾಗಿದ್ದು, ಅವರನ್ನು ರಾಜಕೀಯವಾಗಿಯೂ ಮುಗಿಸಬೇಕೆಂದು ರೆಹಮತ್ ಅವರೊಂದಿಗೆ ಸೇರಿಕೊಂಡು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ದೂರಲಾಗಿದೆ.

ರೆಹಮತ್ ಎಂಬಾಕೆಯೊಂದಿಗೆ ಅಕ್ರಮ ಸಂಬಂಧ ಇದೆ ಎಂದು ಪ್ರಚಾರ ಮಾಡುವುದಾಗಿ ಬೆದರಿಸಿ, ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಾ, ನಿರಂತರ ಕಿರುಕುಳ ನೀಡಿ ಹಣವನ್ನು ನೀಡದಿದ್ದರೆ ಕೊಲೆ ಮಾಡುವುದಾಗಿ ಆರೋಪಿಗಳು ಹೆದರಿಸಿದ್ದರು. ಕುಟುಂಬದ ಸದಸ್ಯರಿಗೂ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಮಾಜಿ ಶಾಸಕ ಮೊಯ್ದೀನ್ ಬಾವಾ ಅವರ ಸಹೋದರರಾಗಿರುವ ಮುಮ್ತಾಝ್ ಅಲಿ ಅವರು ರವಿವಾರ ಬೆಳಗ್ಗಿನ ಜಾವದಿಂದ ನಾಪತ್ತೆಯಾಗಿದ್ದಾರೆ. ಅವರ ಕಾರು ಉಡುಪಿ – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕೂಳೂರು ಸೇತುವೆಯಲ್ಲಿ ಪತ್ತೆಯಾಗಿದೆ. ಅವರು ನದಿಗೆ ಹಾರಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಎನ್ ಡಿ ಆರ್ ಎಫ್, ಎಸ್ಡಿ ಆರ್ ಎಫ್ ಹಾಗೂ ಕೋಸ್ಟ್ ಗಾರ್ಡ್ ತಂಡದ ಸಹಾಯದಿಂದ ಶೋಧಕಾರ್ಯ ನಡೆದಿದೆ. ಕುಟುಂಬದ ವಾಟ್ಸಾಪ್ ಗ್ರೂಪ್ ನಲ್ಲಿ ವಾಯ್ಸ್ ಮೆಸೇಜು ಹಾಕಿ ನಾಪತ್ತೆಯಾಗಿರುವ ಮುಮ್ತಾಝ್ ಅಲಿಯವರು ಇದುವರೆಗೂ ಪತ್ತೆಯಾಗಿಲ್ಲ.


Spread the love