ಮುಲ್ಲರಪಟ್ನ: ಅಕ್ರಮ ಮರಳುಗಾರಿಕಾ ಅಡ್ಡೆಗೆ ದಾಳಿ
ಬಂಟ್ವಾಳ: ಅಕ್ರಮ ಮರಳುಗಾರಿಕಾ ಅಡ್ಡೆಗೆ ಎಎಸ್ಪಿ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ ವಾಹನ ಸಹಿತ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಮುಲ್ಲರಪಟ್ನದಲ್ಲಿ ರವಿವಾರ ನಡೆದಿದೆ.
ಬಂಟ್ವಾಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ಬಡಗಬೆಳ್ಳುರಿನ ಫಲ್ಗುಣಿ ನದಿ ತೀರದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು, ಈ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಮರಳುಗಾರಿಕೆಯಲ್ಲಿ ತೊಡಗಿದ್ದವರು ಪರಾರಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ರಮ ಮರಳುಗಣಿಗಾರಿಕೆಗೆ ಬಳಸಿದ್ದ 2 ಕಬ್ಬಿಣದ ನಾಡ ದೋಣಿಗಳು, ಹಿಟಾಚಿ, 9 ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದಿದ್ದು, ಇವುಗಳ ಒಟ್ಟು ಮೌಲ್ಯ 58 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ವಶಕ್ಕೆ ಪಡೆದಿರುವ ಲಕ್ಷಾಂತರ ರೂ. ಮರಳು ಸಹಿತ ಸೊತ್ತುಗಳನ್ನು ಮುಂದಿನ ಕಾನೂನು ಕ್ರಮಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
ದಾಳಿಯಲ್ಲಿ ಬಂಟ್ವಾಳ ಎಎಸ್ಪಿ ಸೊನಾವಣೆ ಋಷಿಕೇಶ್ ಭಗವಾನ್, ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಎಸ್ಸೈ ಪ್ರಸನ್ನ, ಎಎಸ್ಸೈ ವಿಶ್ವನಾಥ ರೈ, ಸಿಬ್ಬಂದಿ ಎಚ್.ಸಿ. ಸುರೇಶ್, ಜಯರಾಮ, ಜನಾರ್ದನ, ಸುಬ್ರಹ್ಮಣ್ಯ, ಕುಮಾರ್ ಅಂಗಡಿ, ಪುನೀತ್, ಮನೊಜ್ ಪಾಲ್ಗೊಂಡಿದ್ದರು.