ಮುಸ್ತಾಫ ಕೊಲೆ ಸತ್ಯ ಹೊರಬರಬೇಕಾದರೆ ಶರಣ್ ಪಂಪ್ವೆಲ್ ಬಂಧಿಸಿ: ಇಲ್ಯಾಸ್
ಮಂಗಳೂರು: ಮೈಸೂರು ಜೈಲಿನಲ್ಲಿ ಮುಸ್ತಾಫ ಕಾವೂರು ಕೊಲೆ ಖಂಡಿಸಿ, ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬುಧವಾರ ಜಿಲ್ಲಾಧಿಕಾರಿ ಕಚೇರಿಯ ಬಳಿ ಪ್ರತಿಭಟನೆ ನಡೆಸಿತು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಇಲಿಯಾಸ್ ಮಹಮ್ಮದ್ ತುಂಬೆ ಅವರು ಮೈಸೂರು ಜೈಲಿನಲ್ಲಿ ಕೊಲೆಯಾದ ಮುಸ್ತಾಫ ನಿಜವಾದ ಹುತಾತ್ಮ ಎಂದರೆ ತಪ್ಪಾಗಲಾರದು. ಟಿಪ್ಪು ಜಯಂತಿಯ ದಿನ ಮುಸ್ತಾಫನನ್ನು ಕಿರಣ್ ಶೆಟ್ಟಿ ಇರಿದು ಕೊಂದಿದ್ದನು. ಮುಸ್ತಾಫನನ್ನು ಬಜರಂಗದಳ ಕಾರ್ಯಕರ್ತ ಹೂವಿನ ವ್ಯಾಪಾರಿ ಮೂಡಬಿದ್ರೆ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿತ್ತು. 2016 ಜುಲೈನಲ್ಲಿ ಮುಸ್ತಾಫನನ್ನು ಮೈಸೂರು ಜೈಲಿಗೆ ವರ್ಗಾಯಿಸಲಾಗಿತ್ತು. ಮುಸ್ತಾಫನಿಗೆ ಜಾಮೀನು ಕೂಡ ಮಂಜೂರಾಗಿದ್ದು, ಜೈಲಿನಿಂದ ಹೊರಗಡೆ ಬರುವ ಮೊದಲೇ ಕಿರಣ್ ಶೆಟ್ಟಿಯಿಂದ ಕೊಲೆಯಾಗಬೇಕಾಯಿತು.
ಪೋಲಿಸರು ಒಂದು ವೇಳೆ ಸಮಾಜದಲ್ಲಿ ಶಾಂತಿ ಸೌಹಾರ್ದವನ್ನು ಬಯಸುವವರಾದರೆ ಅವರು ಬಜರಂಗದಳದ ಕೈಗೊಂಬೆಗಳಾಗುತ್ತಿರಲಿಲ್ಲ. ನಮಗೆ ಪೋಲಿಸರ ಅನುಕಂಪದ ಅಗತ್ಯವಿಲ್ಲ ಬದಲಾಗಿ ನ್ಯಾಯಬೇಕಾಗಿದೆ. ದಕ್ಷಿಣಕನ್ನಡ ಜಿಲ್ಲೆ ಬುದ್ದಿವಂತರ ಜಿಲ್ಲೆ ಎಂದೂ ಹೇಳುತ್ತಿದ್ದರೂ ಕೂಡ ಇಲ್ಲಿ ಸಂಘಪರಿವಾರದವರೊಂದಿಗೆ ಸೇರಿಕೊಂಡು ಕೆಲವೊಂದು ಪೋಲಿಸರು ಹಾಗೂ ಮಾಧ್ಯಮಗಳು ಸೇರಿಕೊಂಡು ಸಮಾಜ ಸ್ವಾಸ್ಥ್ಯವನ್ನು ಕೆಡಿಸುತ್ತಿವೆ.
ಮುಂದುವರೆಸಿ ಮಾತನಾಡಿದ ಇಲಿಯಾಸ್ ಮುಸ್ತಾಫ ಜಾಮೀನು ಲಭಿಸಿದರೂ ಕೂಡ ಆತನನ್ನು ಕೊಲೆ ಮಾಡುವ ಸಂಚು ಮೊದಲೇ ನಡೆದಿತ್ತು. ಆತ ಮಂಗಳೂರು ಜೈಲಿನಲ್ಲಿ ಇದ್ದವೇಳೆ ಆತನನ್ನು ರೌಡಿ ಶೀಟರ್ ನಲ್ಲಿ ದಾಖಲಿಸಲಾಗಿತ್ತು. ಹಾಗಾದರೆ ಮಂಗಳೂರಿನ ಪೋಲಿಸರು ಯಾಕೆ ಬಜರಂಗದಳವರನ್ನು ಅಥವಾ ದುರ್ಗಾವಾಹಿನಿ ಸದಸ್ಯರ ಮೇಲೆ ರೌಡಿಶೀಟರ್ ದಾಖಲಿಸುವುದಿಲ್ಲ. ಪೋಲಿಸರು ಯಾಕೆ ಪ್ರಚೋದನಕಾರಿ ಭಾಷಣಕಾರರಾದ ಪ್ರಭಾಕರ್ ಭಟ್ ಜಗದೀಶ್ ಶೇಣವ, ಸತ್ಯಜಿತ್ ಸುರತ್ಕಲ್ ಮೇಲೆ ರೌಡಿ ಶೀಟರ್ ದಾಖಲಿಸುವುದಿಲ್ಲ ಎಂದು ಪ್ರಶ್ನಿಸಿದರು.
ಅಂತಹವರ ಭಾಷಣದ ವಿರುದ್ದ ನಾವು ಪೋಲಿಸರಿಗೆ ದೂರು ನೀಡಿದರೆ ಪೋಲಿಸರು ವೀಡಿಯೋ ದಾಖಲೆ ಕೇಳುತ್ತಾರೆ ಆದರೆ ಮುಸ್ಲಿಂ ಯುವಕರನ್ನು ರೌಡಿ ಶೀಟರ್ ನಲ್ಲಿ ದಾಖಲಿಸಲು ಯಾವುದೇ ರೀತಿಯ ದಾಖಲೆ ಅಗತ್ಯವಿಲ್ಲ.
ಪೋಲಿಸರು ನಿಜವಾಗಿಯೂ ಮುಸ್ತಾಫನ ಕೊಲೆಗಡುಕರನ್ನು ಬಂಧಿಸುವ ಇರಾದೆ ಹೊಂದಿದ್ದಲ್ಲಿ ಅವರು ಮೊದಲು ಶರಣ್ ಪಂಪ್ ವೆಲ್ ನನ್ನು ವಿಚಾರಣೆ ನಡೆಸಬೇಕು. ಶರಣ್ ನಿಜವಾದ ಕೊಲೆಗಡುಕರ ಹೆಸರನ್ನು ಹೇಳಲಿದ್ದಾರೆ. ಯಾಕೆ ಕೇವಲ ಮುಸ್ಲಿಂ ಯುವಕರ ಮೇಲೆ ಗೂಂಡಾ ಕಾಯಿದೆ ಆರ್ ಎಸ್ ಎಸ್ ಮತ್ತು ಬಜರಂಗದಳದ ಕಾರ್ಯಕರ್ತರ ಮೇಲೆ ಯಾಕಿಲ್ಲ ಎಂದು ಪ್ರಶ್ನಿಸಿದರು. ಆರ್ ಎಸ್ ಎಸ್ ಮತ್ತು ಬಜರಂಗದಳ ಸಂಘಟನೆಯನ್ನು ನಿಷೇಧಿಸದೇ ಹೋದಲ್ಲಿ ಸಮಾಜದಲ್ಲಿ ಶಾಂತಿ ಅಸಾಧ್ಯ. ಇತ್ತೀಚೆಗೆ ಪೋಲಿಸ್ ಕಮೀಷನರ್ ಮೋಸ್ಟ್ ವಾಂಟೆಡ್ ಆರೋಪಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ 8 ಮುಸ್ಲಿಂ ಯುವಕರ ಹೆಸರಿದ್ದು ಯಾಕೆ ಆರ್ ಎಸ್ ಎಸ್ ಎಸ್ ಮತ್ತು ಬಜರಂಗದಳ ನಾಯಕರ ಹೆಸರು ಯಾಕಿಲ್ಲ. ಅಂದರೆ ಜಗದೀಶ್ ಶೇಣವ ಮತ್ತು ಶರಣ್ ಪಂಪ್ವೆಲ್ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಬರುವುದಿಲ್ಲವೇ? ಯಾಕೆ ಕೇವಲ ಮುಸ್ಲಿಂ ಯುವಕರನ್ನು ಮಾತ್ರ ಗುರಿಯಾಗಿಸಲಾಗುತ್ತದೆ ಎಂದು ಪ್ರಶ್ನಿಸಿದರು.