ಮುಸ್ಲಿಂರ ವೇಷ ಹಾಕಿ ಅಯೋಧ್ಯೆಯ ಹಿಂದೂಗಳನ್ನು ಟೀಕಿಸಿದ ಧೀರೇಂದ್ರ ರಾಘವ್ ಬಂಧನ
ಲಕ್ನೋ: ಮುಸ್ಲಿಮರ ವಿರುದ್ಧ ಪ್ರಚೋದಿಸುವ ಉದ್ದೇಶದಿಂದ ಮುಸ್ಲಿಮರ ವೇಷ ಹಾಕಿ ಅಯೋಧ್ಯೆಯ ಹಿಂದೂಗಳನ್ನು ಟೀಕಿಸಿದ ಧೀರೇಂದ್ರ ರಾಘವ್ ಎಂಬಾತನನ್ನು ಬಂಧಿಸಲಾಗಿದೆ.
ಸ್ಕಲ್ಕ್ಯಾಪ್ ಧರಿಸಿದ ವ್ಯಕ್ತಿಯೊಬ್ಬ “ದೋಗ್ಲೆ” (ಎರಡು ಮುಖದವರು) ಹಿಂದೂಗಳನ್ನು ಉದ್ದೇಶಿಸಿ ಮಾತನಾಡುವ ವಿಡಿಯೊ ವೈರಲ್ ಆಗಿತ್ತು. ಮುಸ್ಲಿಂ ವ್ಯಕ್ತಿ ಎಂದು ಹೇಳಿಕೊಂಡ ಆತ, ಅಯೋಧ್ಯೆಯ ಹಿಂದೂಗಳನ್ನು ಎರಡು ಮುಖದವರು ಎಂದು ಕರೆದು, ರಾಹುಲ್ಗಾಂಧಿ ಅಧಿಕಾರಕ್ಕೆ ಬಂದಿದ್ದರೆ, ಮುಸ್ಲಿಮರಿಗೆ ಮೀಸಲಾತಿ ನೀಡುತ್ತಿದ್ದರು ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
“ಒಬ್ಬ ನಾಯಕ ನಮಗೆ ಮಸೀದಿ ನಿರ್ಮಿಸಿದರೆ, ನಾವು ನಮ್ಮ ಜೀವನವಿಡೀ ಆತನಿಗೆ ಮತ ಹಾಕುತ್ತೇವೆ. ಆದರೆ ನಿಮಗೆ ಎಲ್ಲವನ್ನೂ ಮಾಡಿದ್ದರೂ ನೀವು ಮೋದಿಗೆ ಮತ ಹಾಕುವುದಿಲ್ಲ” ಎಂದು ಆತ ಹೇಳಿದ್ದಾನೆ.
ಚುನಾವಣೆಗೆ ಕೆಲ ತಿಂಗಳ ಹಿಂದೆ ರಾಮಮಂದಿರ ಉದ್ಘಾಟನೆಯಾಗಿದ್ದರೂ, ಅಯೋಧ್ಯೆಯಲ್ಲಿ ಬಿಜೆಪಿ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಈ ವಿಡಿಯೋ ವೈರಲ್ ಆಗಿತ್ತು. ಇದನ್ನು ದೃಢೀಕರಿಸುವಂತೆ ಕೋರಿ ಹಲವು ಮಂದಿ ಸಂದೇಹಗಳನ್ನು ವ್ಯಕ್ತಪಡಿಸಿದ್ದರು. ಈ ವಿಡಿಯೊದಲ್ಲಿರುವ ವ್ಯಕ್ತಿ ವಿಷಯಗಳ ಸೃಷ್ಟಿಕರ್ತ ಧೀರೇಂದ್ರ ರಾಘವ್ ಎಂದು ತಿಳಿದು ಬಂದಿದೆ.
ಮುಸ್ಲಿಮರ ವೇಷ ಹಾಕಿ ಹಿಂದೂಗಳನ್ನು ಟೀಕಿಸಿ ಗಲಭೆ ಸೃಷ್ಟಿಸಲು ಯತ್ನಿಸಿದ ಧೀರೇಂದ್ರ ರಾಘವ್ ನನ್ನು ಬಂಧಿಸಲಾಗಿದೆ. ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಪ್ರಚೋದಿಸುವ ಉದ್ದೇಶದಿಂದ ಈ ವಿಡಿಯೊ ತಯಾರಿಸಿದ್ದಾಗಿ ಆಪಾದಿಸಲಾಗಿತ್ತು.