ಮುಸ್ಲಿಂ ಮೆಹಂದಿ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್!
ಮಂಗಳೂರು: ಜಿಲ್ಲೆಯಾದ್ಯಂತ ವರ್ಷವಿಡೀ ಅಲ್ಲಲ್ಲಿ ಕೋಮು ಘರ್ಷಣೆ, ಹಿಂಸಾಚಾರ ನಡೆಯತ್ತಲೇಇದ್ದರೂ ಕೂಡ ದಕ ಜಿಲ್ಲೆಯ ಜನತೆ ಯಾವತ್ತೂ ಕೂಡ ಸಹೋದರತೆ ಸಾಮರಸ್ಯವನ್ನು ಬಯಸ್ತುತ್ತಾರೆ ಎನ್ನುವುದಕ್ಕೆ ಸದಾ ಕೋಮು ಹಿಂಸಾಚಾರ ವಿಚಾರದಲ್ಲಿ ಸುದ್ದಿಯಲ್ಲಿರುವ ಕಲ್ಲಡ್ಕದಲ್ಲಿ ಶುಕ್ರವಾರ ನಡೆದ ಮುಸ್ಲಿಂ ಮೆಹಂದಿ ಕಾರ್ಯಕ್ರಮ ಮತ್ತೋಂದು ಸಾಮರಸ್ಯ ಮೆರೆಯುವಲ್ಲಿ ಸಾಕ್ಷಿಯಾಯಿತು.
ಮುಸ್ಲಿಂ ಕುಟುಂಬದ ಮನೆಯೊಂದರಲ್ಲಿ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ಆರ್ ಎಸ್ ಎಸ್ ನಾಯಕ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಅವರ ಪತ್ನಿ ಕಮಲ ಪ್ರಭಾಕರ ಭಟ್ ಭಾಗವಹಿಸಿ ವಧುವಿಗೆ ಶುಭ ಹಾರೈಸುವ ಮೂಲಕ ಸಾಮರಸ್ಯ, ಭ್ರಾತೃತ್ವ ಸಂದೇಶ ಸಾರಿದರು.
ಹಕೀಮ್ ಕಲ್ಲಡ್ಕ ಎಂಬವರು ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಸುಮಾರು 10 ವರ್ಷಗಳ ಹಿಂದಿನಿಂದಲೂ ಪರಿಚಿತರಾಗಿದ್ದು, ಹಕೀಮ್ ಅವರ ಇಬ್ಬರು ಹೆಣ್ಣು ಮಕ್ಕಳು ಕೂಡ ಕಲ್ಲಡ್ಕ ಶ್ರೀರಾಮ ಶಾಲೆಯಲ್ಲಿ ಒದುತ್ತಿದ್ದು, ಆ ಮಕ್ಕಳ ಮಾವನ ಮಗಳ ಮೆಹಂದಿ ಕಾರ್ಯಕ್ರಮ ಶುಕ್ರವಾರ ಕಲ್ಲಡ್ಕದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮದುಮಗಳ ತಾಯಿ ವಾರದ ಹಿಂದೆ ಭಟ್ ಅವರ ಮನೆಗೆ ಹೋಗಿ ಆಹ್ವಾನ ಪತ್ರಿಕೆ ನೀಡಿದ್ದು, ಈ ಹಿನ್ನಲೆಯಲ್ಲಿ ಶುಕ್ರವಾರ ಸಂಜೆ 3 ಗಂಟೆ ಹೊತ್ತಿಗೆ ಮೆಹಂದಿ ಕಾರ್ಯಕ್ರಮಕ್ಕೆ ಡಾ. ಪ್ರಭಾಕರ ಭಟ್ ಮತ್ತು ಡಾ. ಕಮಲಾ ಪ್ರಭಾಕರ ಭಟ್ ಜೊತೆಯಾಗಿ ಹೋಗಿ ಆಶೀರ್ವದಿಸಿದ್ದಾರೆ. ಬಳಿಕ ಎಳನೀರು ಕುಡಿದು ಎಲ್ಲರ ಜೊತೆ ಕ್ಷೇಮ ಸಮಾಚಾರ ಮಾತನಾಡಿ ವಾಪಾಸು ತೆರಳಿದ್ದಾರೆ. ಈ ಸನ್ನಿವೇಶವನ್ನು ಮೆಹಂದಿ ಮನೆಯಲ್ಲಿದ್ದ ಪ್ರತಿಯೊಬ್ಬರು ಮುಕ್ತಕಂಠದಿಂದ ಶ್ಲಾಘಿಷಿದ್ದಾರೆ. ಭತ್ ಅವರ ಜೊತೆ ಶ್ರೀರಾಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರವಿರಾಜ್, ಕಾರ್ಯಕರ್ತ ಕೃಷ್ಣಪ್ಪ ಪಾಲ್ಗೊಂಡಿದ್ದರು.
ಈ ವೇಳೆ ಪ್ರತಿಕ್ರಿಯಿಸಿದ ಕಲ್ಲಡ್ಕ ಪ್ರಭಾಕರ ಭಟ್ ಅವರು ಹಕೀಮ್ ಅವರು ಮೊದಲಿನಿಂದಲೂ ಪರಿಚಿತರು ಹಾಗೂ ನಮಗೆ ಆತ್ಮೀಯರು. ಮೆಹಂದಿ ಕಾರ್ಯಕ್ರಮಕ್ಕೆ ನಮ್ಮ ಮನೆಗೆ ಬಂದು ಆತ್ಮೀಯತೆಯಿಂದ ಆಹ್ವಾನಿಸಿದ್ದರಿಂದ ನಾವು ಹೋಗಿ, ಆಶೀರ್ವದಿಸಿದ್ದೇವೆ. ಆ ಮನೆಗೆ ಹೋದಾಗ ಎಲ್ಲರೂ ಆತ್ಮೀಯತೆಯಿಂದ ಸತ್ಕರಿಸಿದ್ದು ನಮಗೆ ಖುಷಿ ಕೊಟ್ಟಿದೆ. ಭಾನುವಾರ ಮದುವೆ ಕಾರ್ಯಕ್ರಮ ನಡೆಯಲಿದ್ದು, ಊರಿನಲ್ಲಿದ್ದರೆ ಖಂಡಿತಾ ಹೋಗುತ್ತೇನೆ ಎಂದರು.