Home Mangalorean News Kannada News ಮುಸ್ಲಿಂ ಸಮುದಾಯ ಕುರ್‍ಆನಿನ ಅಡಿಂಪಾಯದಲ್ಲಿ ಜೀವಿಸಿ, ತೋರಿಸಬೇಕಾದ ಅವಶ್ಯಕತೆ ಇದೆ: ಮುಹಮ್ಮದ್ ಕುಂಞ

ಮುಸ್ಲಿಂ ಸಮುದಾಯ ಕುರ್‍ಆನಿನ ಅಡಿಂಪಾಯದಲ್ಲಿ ಜೀವಿಸಿ, ತೋರಿಸಬೇಕಾದ ಅವಶ್ಯಕತೆ ಇದೆ: ಮುಹಮ್ಮದ್ ಕುಂಞ

Spread the love

ಮುಸ್ಲಿಂ ಸಮುದಾಯ ಕುರ್‍ಆನಿನ ಅಡಿಂಪಾಯದಲ್ಲಿ ಜೀವಿಸಿ, ತೋರಿಸಬೇಕಾದ ಅವಶ್ಯಕತೆ ಇದೆ: ಮುಹಮ್ಮದ್ ಕುಂಞ

ಮಂಗಳೂರು: ಇಂದು ಬಂಡವಾಳಶಾಹಿಗಳು ತಮ್ಮ ಸ್ವಾರ್ಥ ಸಾಧನೆಗಳಿಗಾಗಿ ಸಾಮಾಜಿಕ ಜಾಲತಾಣ, ಮಾಧ್ಯಮ ಸೇರಿದಂತೆ ಇಸ್ಲಾಂ ಮತ್ತು ಮುಸ್ಲಿಮರ ಬಗ್ಗೆ ಇತರ ಧರ್ಮೀಯರು ಪೂರ್ವಾಗ್ರಹ ಪೀಡಿತರಾಗುವಂತೆ ಮಾಡಲು ಶ್ರಮಿಸುತ್ತಿದ್ದು, ಇಸ್ಲಾಮೋಫೋಬಿಯಾದ ಹೆಸರಿನಲ್ಲಿ ಜನರ ನಡುವೆ ಭಯವನ್ನು ಸೃಷ್ಟಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದನ್ನು ಹೋಗಲಾಡಿಸಲು ಮುಸ್ಲಿಂ ಸಮುದಾಯವು ಕುರ್ ಆನ್ ಹಾಗೂ ಪ್ರವಾದಿ ಮುಹಮ್ಮದ್(ಸ)ರವರ ಜೀವನದ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವಿಸಿ ತೋರಿಸಬೇಕಾದ ಅನಿವಾರ್ಯತೆ ಇದೆ ಎಂದು ತೊಕ್ಕೊಟ್ಟು ಜುಮಾ ಮಸೀದಿಯ ಖತೀಬರಾದ ಮುಹಮ್ಮದ್ ಕುಂಞ ಅಭಿಪ್ರಾಯಿಸಿದರು.

ಜಮಾಅತೆ ಇಸ್ಲಾಮೀ ಹಿಂದ್ ದೇಶಾದ್ಯಂತ ಎ.23 ರಿಂದ ಮೇ 7 ರವರೆಗೆ ಹಮ್ಮಿಕೊಂಡಿರುವ ಮುಸ್ಲಿಂ ಪರ್ಸನಲ್ ಲಾ ಜಾಗೃತಿ ಅಭಿಯಾನದ ಅಂಗವಾಗಿ ಜಮಾಅತೆ ಇಸ್ಲಾಮೀ ಹಿಂದ್ ಬೋಳಾರ-ಜೆಪ್ಪು ವರ್ತುಲದ ವತಿಯಿಂದ ನಗರದ ಮಾರ್ನಮಿಕಟ್ಟೆಯಲ್ಲಿರುವ ನಾಯಕ್ಸ್ ಗ್ರೌಂಡ್‍ನಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.

ಇಸ್ಲಾಂ ಮತ್ತು ಇಸ್ಲಾಮಿನ ನಿಯಮ ಎಂದರೆ ಭಯಪಡುವ ವಾತಾವರಣವನ್ನು ಸೃಷ್ಟಿಸಲಾಗಿದೆ. ಭಯವನ್ನು ಬಂಡವಾಳವನ್ನಾಗಿ ಉಪಯೋಗಿಸುತ್ತಿರುವ ಫ್ಯಾಶಿಸ್ಟ್ ಶಕ್ತಿಗಳು ಜನರಲ್ಲಿ ತಪ್ಪು ಕಲ್ಪನೆಗಳನ್ನು ಬಿತ್ತುತ್ತಿದ್ದಾರೆ. ಈ ತಪ್ಪು ಕಲ್ಪನೆಗಳನ್ನು ಸಮಾಜದಲ್ಲಿ ನೀಗಿಸಬೇಕಾದರೆ ಮುಸ್ಲಿಮರು ತಮ್ಮ ಆಂತರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು, ಕುರ್‍ಆನಿನನ್ನು ತಮ್ಮ ಜೀವನದ ಪ್ರತೀ ಹಂತದಲ್ಲಿ ಅಳವಡಿಸಿಕೊಂಡು ಮಾದರಿಯಾಗಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.

ಕಚ್ಚೀ ಮೇಮನ್ ಮಸೀದಿಯ ಖತೀಬರಾದ ಹುಸೈನ್ ಸುಹೈಬ್ ನದ್ವಿಯವರು ಇಸ್ಲಾಮೀ ಶರೀಅತ್ ವಿಷಯದಲ್ಲಿ ಉರ್ದುವಿನಲ್ಲಿ, ಕಸ್ಬಾ ಬೆಂಗ್ರೆಯ ಅನಸ್ ಬಿನ್ ಮಾಲಿಕ್ ಜುಮಾ ಮಸೀದಿಯ ಖತೀಬರಾದ ಸಾಜಿದ್ ಮೌಲವಿ ಪರಪ್ಪೂರ್ ರವರು ಕುಟುಂಬ ಜೀವನದಲ್ಲಿ ಶರೀಅತ್ ಪಾಲನೆ ಎಂಬ ವಿಷಯದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೋಳಂಗಡಿ ಹವ್ವಾ ಜುಮಾ ಮಸೀದಿಯ ಖತೀಬರಾದ ಸಯ್ಯದ್ ಯಹ್ಯಾ ತಂಙಳ್ ಮದನಿಯವರು ವಹಿಸಿದ್ದರು.
ವೇದಿಕೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಸಂಚಾಲಕರಾದ ಸಈದ್ ಇಸ್ಮಾಯೀಲ್, ಬೋಳಾರ-ಜೆಪ್ಪು ವರ್ತುಲದ ಸಂಚಾಲಕ ಸಾಲೆಹ್ ಮುಹಮ್ಮದ್ ಸಾಲಿ ಉಪಸ್ಥಿತರಿದ್ದರು.
ನಜೀಬ್ ಶಾಕಿಬ್ ಕಿರಾಅತ್ ಪಠಿಸಿದರು. ರಹ್ಮತುಲ್ಲಾ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿರು.


Spread the love

Exit mobile version