ಮೂಡಬಿದರೆಯಿಂದ ಬಿಜೆಪಿ ಟಿಕೆಟ್ ನಿರಾಕರಣೆ; ಪಕ್ಷ ತ್ಯಜಿಸುವ ಸೂಚನೆ ನೀಡಿದ ಜಗದೀಶ ಅಧಿಕಾರಿ
ಮೂಡಬಿದರೆ: ಈ ಹಿಂದಿನ ಚುನಾವಣೆಯಲ್ಲಿ ನನ್ನನ್ನು ಗೊಂಬೆಯ ತರಹ ಪಕ್ಷದಿಂದ ಟಿಕೆಟ್ ಕೊಟ್ಟು ನಿಲ್ಲಿಸಿದ್ದು ನನಗೆ ಯಾರೂ ಸಹಾಯ ಮಾಡದೆ ನನ್ನ ಸೋಲಿಗೆ ಬಿಜೆಪಿಗರು ಅವಕಾಶ ಮಾಡಿದ್ದರು. ಈ ಬಾರಿಯೂ ಕೂಡ ನನಗೆ ಟಿಕೆಟ್ ನೀಡದೆ ಸೋಲುವ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗುವಂತೆ ವರ್ತಿಸಿದ್ದಾರೆ. ಇದರಿಂದ ಮನನೊಂದಿರುವ ನಾನು ಶೀಘ್ರವೇ ಪಕ್ಷ ತ್ಯಜಿಸುವ ಕುರಿತು ತೀರ್ಮಾನಿಸಲಿದ್ದೇನೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ ಪಿ ಜಗದೀಶ ಅಧಿಕಾರಿ ಹೇಳಿದ್ದಾರೆ.
ಮಂಗಳವಾರ ನಗರದ ಖಾಸಗಿ ಹೋಟೆಲಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಾವು ಅರಸು ಮನೆತನದವರು ದೇಶ ಸೇವೆ ಮಾಡುವ ಉದ್ದೇಶದಿಂದ ರಾಜಕೀಯದಲ್ಲಿ ಮುಂದುವರೆದಿದ್ದೇನೆ. ಕಾಂಗ್ರೆಸ್ ಪಕ್ಷ ನನಗೆ ಎಲ್ಲವನ್ನೂ ನೀಡಿದ್ದು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ತಾನಾಗಿ ಓಡಿ ಬಂದಿಲ್ಲ ಆದರೆ ಬಿಜೆಪಿ ಮುಖಂಡರೇ ನನ್ನನ್ನು ಬಿಜೆಪಿಗೆ ಎಳೆದು ತಂದು ಮಂಡಲ ಅಧ್ಯಕ್ಷನನ್ನಾಗಿ, ಚುನಾವಣಾ ಸಮಿತಿಯ ಪ್ರಮುಖನನ್ನಾಗಿ ನೇಮಿಸಿದೆ ಆದರೂ ಇತ್ತೀಚೆಗೆ ಜಾತಿ ಆದಾರದಲ್ಲಿ ಟಿಕೆಟ್ ಹಂಚುವ ಪದ್ದತಿ ಕಾಂಗ್ರೆಸಿನಿಂದ ಬಿಜೆಪಿಗೆ ಕಾಲಿಟ್ಟಿರುವುದು ನೋವಿನ ಸಂಗತಿ ಎಂದರು.
ಮೂಡಬಿದರೆ ಕ್ಷೇತ್ರದಲ್ಲಿ ಗೆಲ್ಲಬಲ್ಲ ನೂರಾರು ಮಂದಿ ಇದ್ದರೂ ಹೊರಗಿನವರಿಗೆ ಟಿಕೆಟ್ ನೀಡಲಾಗಿದೆ. ವರಿಷ್ಠರು ಸೂಚಿಸಿದ ಅಭ್ಯರ್ಥಿಯನ್ನು ಕಡ್ಡಾಯವಾಗಿ ಒಪ್ಪಬೇಕಿಲ್ಲ ನಮ್ಮೊಂದಿಗೆ ಬಿಲ್ಲವರಿದ್ದಾರೆ ಮುಂದಿನ ದಿನಗಳಲ್ಲಿ ಬಿಜೆಪಿ ಅಭ್ಯರ್ಥಿ ಸೋತರೆ ಅದಕ್ಕೆ ರಾಜ್ಯ-ರಾಷ್ಟ ನಾಯಕರೇ ಕಾರಣ. ನನ್ನ ಮೇಲೆ ಆ ಆಪಾದನೆ ಬರಬಾರದು ನಾನು ಸ್ಪರ್ಧಿಸಿದ ಸಮಯದಲ್ಲೂ ನನ್ನನ್ನು ಕಾಂಗ್ರೆಸಿಗರಿಗಿಂತ ಹೆಚ್ಚಾಗಿ ಸ್ವಪಕ್ಷಿಯರೇ ಸೋಲಿಸಿದ್ದರು. ನನ್ನ ಜೊತೆ ಹೆಚ್ಚಿನ ಸಂಖ್ಯೆಯ ಬಿಜೆಪಿ ಕಾರ್ಯಕರ್ತರಿದ್ದು, ಟಿಕೇಟ್ ವಂಚನೆಯಿಂದ ಅವರಿಗೂ ನೋವಾಗಿದೆ ಎಂದರು.