ಮೂಡಾ ಅದಾಲತ್‍ನಲ್ಲಿ ನೀಡಿದ ಭರವಸೆಯಂತೆ ಸಚಿವ ಯು.ಟಿ ಖಾದರ್ ಸ್ಥಳ ಪರಿಶೀಲನೆ
ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಶನಿವಾರ ಆಗಸ್ಟ್ 4 ರಂದು ಅಹವಾಲು ನೀಡಿದ ಜನರ ಸಮಸ್ಯೆಗಳನ್ನು ಖುದ್ದು ಭೇಟಿ ನೀಡಿ ಪರಿಶೀಲಿಸಲು ನಗರಾಭಿವೃದ್ಧಿ ಮತ್ತು ವಸತಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಯು.ಟಿ ಖಾದರ್ ಅವರು ಅಧಿಕಾರಿಗಳೊಂದಿಗೆ ಶಕ್ತಿನಗರ, ಸುಲ್ತಾನ್ ಬತ್ತೇರಿ, ಪ್ರಶಾಂತ್ ನಗರಗಳಿಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ಪ್ರಥಮವಾಗಿ ಶಕ್ತಿನಗರ ವ್ಯಾಪ್ತಿಯ ಗುರು ನಗರಕ್ಕೆ ಭೇಟಿ ನೀಡಿ ರೀಟೈನಿಂಗ್ ವಾಲ್ ಎತ್ತರಿಸಲು ಹಾಗೂ ಸುತ್ತ ಮುತ್ತಲ ಮನೆಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕಟ್ಟಡ ನಿರ್ಮಿಸಲು ಸಂಬಂಧಪಟ್ಟವರಿಗೆ ಸೂಚಿಸಿದರಲ್ಲದೆ, ಅಹವಾಲು ನೀಡಿದ ಮಹಿಳೆಗೆ ಭಯಪಡದೆ ನೆಮ್ಮದಿಯಾಗಿರುವಂತೆ ಹೇಳಿದರು.
ಬಳಿಕ ಕೊಂಚಾಡಿ ದೇರೆಬೈಲ್‍ನ ಪ್ರಶಾಂತಿ ನಗರ ಬಡಾವಣೆಯಲ್ಲಿ ಉದ್ಯಾನ ಅಭಿವೃದ್ಧಿ ಮತ್ತು ಕೆಳಸೇತುವೆ ಕಾಮಗಾರಿಯನ್ನು ಆದಷ್ಟು ಶೀಘ್ರ ಸಂಪೂರ್ಣಗೊಳಿಸಿ ನೀಡಲು ಸಂಬಂಧಪಟ್ಟವರಿಗೆ ಸೂಚಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಸುಲ್ತಾನ್ ಬತ್ತೇರಿ ವ್ಯಾಪ್ತಿಯಲ್ಲಿ ಮಾಸ್ಟರ್ ಪ್ಲಾನ್‍ನಂತೆ ರೂಪಿಸಲಾಗಿರುವ ರಸ್ತೆಯ ಅಗತ್ಯತೆಯನ್ನು ಮರುಪರಿಶೀಲನೆ ನಡೆಸಿ, ಈ ಪ್ರದೇಶ ವ್ಯಾಪ್ತಿಯಲ್ಲಿ ಮೂರು ಸೆಂಟ್ಸ್‍ನ ಮನೆಗಳಿಗೆ ರಸ್ತೆಯಿಂದಾಗಿ ತೊಂದರೆಯಾಗಲಿದೆ ಎಂದು ಅದಾಲತ್‍ನಲ್ಲಿ ನಿವಾಸಿಗಳು ಅಳಲು ತೋಡಿಕೊಂಡಿದ್ದರು. ನಗರದ ಭವಿಷ್ಯದ ಅಭಿವೃದ್ಧಿಯನ್ನು ಗಮನದಲ್ಲಿರಿಸಿ ರಸ್ತೆಯನ್ನು ವಿಸ್ತರಿಸಬೇಕೆಂದು ಮಾಸ್ಟರ್‍ಪ್ಲಾನ್‍ನಲ್ಲಿತ್ತು. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಸ್ಥಳದಲ್ಲಿದ್ದು ಅವರ ಜೊತೆ ಚರ್ಚಿಸಿದ ಸಚಿವರು ರಸ್ತೆ ವಿಸ್ತರಣೆ ಸಂಬಂಧ ಮರುಪರಿಶೀಲನೆ ನಡೆಸುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಹೇಳಿದರು. ಲೋಬೋ ಟೈಲ್ಸ್ ಫ್ಯಾಕ್ಟರಿಗೆ ಭೇಟಿ ನೀಡಿ ಅಲ್ಲಿನವರ ಬೇಡಿಕೆಯನ್ನು ಆಲಿಸಿ ಪರಿಶೀಲನೆ ನಡೆಸುವ ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜಾ, ಮೂಡಾ ಆಯುಕ್ತ ಶ್ರೀಕಾಂತ್‍ರಾವ್, ಮನಾಪ ಆಯುಕ್ತ ಮೊಹಮ್ಮದ್ ನಝೀರ್, ಶಶಿಧರ್ ಹೆಗಡೆ, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಹವಾಲು ನೀಡಿದವರು ಸ್ಥಳದಲ್ಲಿದ್ದರು.