ಮೂಡಿಗೆರೆ: ಪತ್ರಕರ್ತ ಮನ್ಸೂರ್ ಮೇಲೆ ಕೊಲೆ ಬೆದರಿಕೆ : ಜೆ.ಎಸ್ ಶಾಲೆಯ ಅಮಾದ್ ನನ್ನು ಗಡಿಪಾರು ಮಾಡುವಂತೆ ಒತ್ತಾಯ 

Spread the love

ಮೂಡಿಗೆರೆ: ಪತ್ರಕರ್ತ ಮನ್ಸೂರ್ ಮೇಲೆ ಕೊಲೆ ಬೆದರಿಕೆ : ಜೆ.ಎಸ್ ಶಾಲೆಯ ಅಮಾದ್ ನನ್ನು ಗಡಿಪಾರು ಮಾಡುವಂತೆ ಒತ್ತಾಯ 

ಮೂಡಿಗೆರೆ: ಪಟ್ಟಣದ ಜೆ.ಎಸ್ ಶಾಲೆಯ ಆಡಳಿತ ಮಂಡಳಿಯ ಅಮಾದ್ ಎಂಬುವರು ದಿನ ಪತ್ರಿಕೆಯೊಂದರ ವರದಿಗಾರ ಮನ್ಸೂರ್ ಎಂಬುವರ ಮನೆಗೆ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿ ಲ್ಯಾಪ್ ಟಾಪ್ ಧ್ವಂಸ ಗೊಳಿಸಿ, ಅವರ ಪತ್ನಿಗೆ ಕೊಲೆ ಬೆದರಿಕೆ ಓಡ್ಡಿರುವ ಪ್ರಕರಣವನ್ನು ಖಂಡಿಸಿ ಪಟ್ಟಣದಲ್ಲಿ ಇಂದು ಚಿಕ್ಕಮಗಳೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಬೆಂಗಳೂರು , ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮೂಡಿಗೆರೆ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು.

ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜೆ.ಎಸ್ ಶಾಲೆಯ ವಿರುದ್ಧ ಘೋಷಣೆ ಕೂಗಿ ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಮೂಡಿಗೆರೆ ತಾಲ್ಲೂಕು ಕಚೇರಿಯಲ್ಲಿ ಸಾರ್ವಜನಿಕವಾಗಿ ಚಿಕ್ಕಮಗಳೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ. ಜಯಕುಮಾರ್ ಅವರು ಮಾತನಾಡಿ ಇಂದಿನ ದಿನಗಳಲ್ಲಿ ಪತ್ರಕರ್ತರಿಗೆ ಸೂಕ್ತ ರಕ್ಷಣೆ ಇಲ್ಲದಿರುವುದು ವಿಪರ್ಯಾಸವೇ ಸರಿ. ಇತ್ತೀಚಿಗೆ ನ್ಯಾಯಾಧೀಶರೆ ಪತ್ರಿಕೆ, ಅಥವಾ ಮಾಧ್ಯಮಗಳಲ್ಲಿ ಅಳಲನ್ನು ತೋಡಿಕೊಂಡ ಉದಾಹರಣೆಗಳಿವೆ. ಇಂತಹ ಸನ್ನಿವೇಶದಲ್ಲಿ ಶಾಂತಿಯ ನಾಡೆಂದೇ ಪ್ರಸಿದ್ದವಾದ ಮಲೆನಾಡಿನ ಪ್ರದೇಶವಾದ ಮೂಡಿಗೆರೆಯಲ್ಲಿ ಪತ್ರಕರ್ತರ ಮೇಲೆ ಹಲ್ಲೆ ನಡೆದಿರುವುದು ಬೇಸರದ ಸಂಗತಿ. ಪತ್ರಕರ್ತರಿಗೆ ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಆಡಳಿತ ಸೂಕ್ತ ರಕ್ಷಣೆ ಒದಗಿಸಬೇಕಾಗಿದೆ ಎಂದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ತಾಲ್ಲೂಕು ಹಿರಿಯ ಪತ್ರಕರ್ತರಾದ ಹೊರಟ್ಟಿ ರಘು ಅವರು ದೇಶಾದ್ಯಂತ ಯೋಧರ ಶೋಕಾಚರಣೆಯಲ್ಲಿರುವಾಗ ಜೆ.ಎಸ್ ಶಾಲೆಯಲ್ಲಿ ಸಂಭ್ರಮಾಚರಣೆ ಮಾಡಿರುವುದು ನಮ್ಮ ದೇಶದ ದುರಂತ. ಜೆ.ಎಸ್ ಶಾಲೆಯವರು ಭಾರತದಲ್ಲಿದ್ದಾರೋ, ಅಥವಾ ಪಾಕಿಸ್ತಾನದಲ್ಲಿದ್ದಾರೋ, ಎಂಬಂತಹ ವಿಷಯ ಮೂಡಿಗೆರೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಪತ್ರಕರ್ತರಾದ ಮನ್ಸೂರ್ ಅವರ ಮೇಲೆ ಹಲ್ಲೆ ಮಾಡಲು ಬಂದ ಅಮಾದ್ ನನ್ನು ಗಡಿಪಾರು ಮಾಡಿ, ಜೆ.ಎಸ್ ಶಾಲೆ ನಡೆಸಲು ನೀಡಿರುವ ಪರವಾನಿಗೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜೆ.ಎಸ್ ಶಾಲೆಯ ಅಮಾದ್ ನನ್ನು ಕೂಡಲೇ ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಹಾಗೂ ಪತ್ರಕರ್ತರ ಕುಟುಂಬಕ್ಕೆ ಸೂಕ್ತ ರಕ್ಷಣೆ ಕಲ್ಪಿಸಿಕೊಡಬೇಕು ಎಂದು ಮೂಡಿಗೆರೆ ಉಪ ತಹಶೀಲ್ದಾರ್ ಚೇತನ್ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ರಾಜ್ಯ ಕಾರ್ಯದರ್ಶಿ ರಾಘವೇಂದ್ರ ಕೆಸವಳಲು, IFWJ ಸದಸ್ಯ ಚಂದ್ರಶೇಖರ ತೆರದಾಳ್, CWJU ಪ್ರಧಾನ ಕಾರ್ಯದರ್ಶಿ ಸಂದೇಶ್ ಕೆ.ಜೆ, ಹಾಗೂ ಪತ್ರಕರ್ತರಾದ ಸಂತೋಷ್ ಅತ್ತಿಗೆರೆ, ತನು ಕೊಟ್ಟಗೆಹಾರ, ಅನಿಲ್ ಮೆಂತೆರೋ, ಹಿರಿಯ ಪತ್ರಕರ್ತರಾದ ಸುಂದರ್ ಬಂಗೇರಾ, ಸೋಮಶೇಖರ, ಹೊಸದಿಗಂತ ವರದಿಗಾರ ಆನಂದ್,ಪುನೀತ್ ಕಡಿದಾಳ್, ಕಾಂಗ್ರೆಸ್ ಮುಖಂಡರಾದ ದೀಕ್ಷಿತ್ ಕಣಚೂರು, ಕಿಸಾನ್ ಕಾಂಗ್ರೆಸ್ ಜಿಲ್ಲಾದ್ಯಕ್ಷರಾದ ಬ್ರಿಜೇಶ್ ಕಡಿದಾಳ್, ಸಮಾಜಸೇವಕರಾದ ಪಿಶ್ ಮೋಣು, ಅಲ್ತಾಫ್ ಬಿಳಗುಳ, ಸುರೇಂದ್ರ ಹಂಡುಗುಳಿ , ಮಗ್ಗಲಮಕ್ಕಿ ಕೃಷ್ಣ ಸೇರಿದಂತೆ ದೃಶ್ಯ ಮಾಧ್ಯದದ ವರದಿಗಾರರು ಭಾಗಿಯಾಗಿದ್ದರು.


Spread the love