ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 14ನೇ ವಾರ್ಷಿಕ ಆಚರಣೆಯ ಆಳ್ವಾಸ್ ನುಡಿಸಿರಿ – 2017
ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.)ವು ವಾರ್ಷಿಕ ಆಚರಣೆಯಾಗಿ ಆಚರಿಸಿಕೊಂಡು ಬರುತ್ತಿರುವ ನಾಡು-ನುಡಿ-ಸಂಸ್ಕøತಿಯ ಸಮ್ಮೇಳನ ಆಳ್ವಾಸ್ ನುಡಿಸಿರಿ ಸಮ್ಮೇಳನ. ಕನ್ನಡ ಬಾಂಧವರ ಸಹಾಯ-ಸಹಕಾರ-ಪ್ರೀತಿ-ವಿಶ್ವಾಸಗಳೊಂದಿಗೆ ಕಳೆದ 13 ವರ್ಷಗಳಿಂದ ಸಂಘಟಿಸಿಕೊಂಡು ಬರುತ್ತಿದ್ದು ಈ ವರ್ಷ 14ನೇ ಸಮ್ಮೇಳನದ ಸಿದ್ಧತೆಯಲ್ಲಿ ತೊಡಗಿದ್ದೇವೆ. ನಾಡು-ನುಡಿಯ ಎಚ್ಚರವನ್ನು, ಕನ್ನಡ ಸಂಸ್ಕøತಿಯ ಕಂಪನ್ನು ಪಸರಿಸುವುದಕ್ಕಾಗಿ ಆಯೋಜಿಸಲಾಗುವ ಈ ಸಮ್ಮೇಳನವು ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳುವಲ್ಲಿ ಮುನ್ನಡೆಯುತ್ತಿದೆ. ಉದ್ಘಾಟಕರ–ಅಧ್ಯಕ್ಷರ-ಸಂಪನ್ಮೂಲ ವ್ಯಕ್ತಿಗಳ ವಿಚಾರಪ್ರಚೋದಕ ಮಾತುಗಳು ವಾಗ್ವಾದಗಳನ್ನು ಸೃಷ್ಟಿಸುತ್ತಾ, ಸಂಸ್ಕøತಿ-ಸತ್ಕಾರಗಳು ಕನ್ನಡದ ಕಂಪನ್ನು ಪಸರಿಸುತ್ತಾ ಹಳೆಬೇರು-ಹೊಸಚಿಗುರುಗಳ ಮೂಲಕ ಕನ್ನಡ ಮನಸ್ಸನ್ನು ಉದ್ಧೀಪಿಸುವ ಕೆಲಸವನ್ನು ಅವ್ಯಾಹತವಾಗಿ ಮಾಡಿಕೊಂಡುಬರುತ್ತಿದೆ. ಕನ್ನಡಿಗರ ಗೌರವದ ಈ ಸಮ್ಮೇಳನವು ಈ ವರ್ಷ ದಶಂಬರ ತಿಂಗಳ 1, 2 ಮತ್ತು 3ನೇ ದಿನಾಂಕಗಳಂದು ಮೂಡುಬಿದಿರೆಯ ಸುಂದರಿ ಆನಂದ ಆಳ್ವ ಆವರಣದಲ್ಲಿರುವ ರತ್ನಾಕರವರ್ಣಿ ವೇದಿಕೆಯಲ್ಲಿ ವಿಜೃಂಭಣೆಯಿಂದ ಜರುಗಲಿದೆ.
ನವೆಂಬರ್ 30ಕ್ಕೆ ಆಳ್ವಾಸ್ ವಿದ್ಯಾರ್ಥಿಸಿರಿ.
ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿಗಳಿಂದಲೇ ನಡೆಯುವ ಸಾಹಿತ್ಯ-ಸಂಸ್ಕøತಿ ಸಮ್ಮೇಳನ ‘ಆಳ್ವಾಸ್ ವಿದ್ಯಾರ್ಥಿಸಿರಿ’. ಈ ವರ್ಷ ನವೆಂಬರ್ 30ರಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಅರ್ಜುನ್ ಶೆಣೈ ಅಧ್ಯಕ್ಷತೆಯಲ್ಲಿ ಒಂದು ದಿನ ರತ್ನಾಕರವರ್ಣಿ ವೇದಿಕೆ ವಿದ್ಯಾಗಿರಿಯಲ್ಲಿ ನಡೆಯಲಿದೆ. ಪ್ರಸಿದ್ಧ ರಂಗಕರ್ಮಿ, ಚಲನಚಿತ್ರನಟ ಶ್ರೀ ಮಂಡ್ಯ ರಮೇಶ್ ಉದ್ಘಾಟಿಸುವ ಈ ಸಮ್ಮೇಳನದಲ್ಲಿ ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳು ತಮ್ಮ ಸಾಹಿತ್ಯಕ-ಸಾಂಸ್ಕøತಿಕ ಪ್ರತಿಭೆಗಳನ್ನು ಅನಾವರಣಗೊಳಿಸಲಿದ್ದಾರೆ. ಸಂಜೆ ಗಂಟೆ 4.00ಕ್ಕೆ ಡಾ| ಎಂ.ಮೋಹನ ಆಳ್ವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭವು ನಡೆಯಲಿದೆ.
ದಶಂಬರ 01, 02 ಮತ್ತು 03ರಂದು ಆಳ್ವಾಸ್ ನುಡಿಸಿರಿ
ದಶಂಬರ 01, 02 ಮತ್ತು 03ನೇ ದಿನಾಂಕಗಳಂದು ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ, ಎಂ.ಗೋಪಾಲಕೃಷ್ಣ ಅಡಿಗ ಸಭಾಂಗಣದಲ್ಲಿ 2017ನೇ ಆಳ್ವಾಸ್ ನುಡಿಸಿರಿ ನಡೆಯಲಿದೆ. ಬೆಳಿಗ್ಗೆ 8.30ಕ್ಕೆ ಸಾಂಸ್ಕøತಿಕ ಮೆರವಣೆಗೆಯನ್ನು ಮೂಲ್ಕಿ ಚರ್ಚ್‍ನ ಧರ್ಮಗುರುಗಳಾಗಿರುವ ಫಾ.ಎಫ್.ಎಕ್ಸ್.ಗೋಮ್ಸ್‍ರವರು ಉದ್ಘಾಟಿಸಲಿದ್ದು, ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎನ್.ವಿನಯ ಹೆಗ್ಡೆಯವರು ಧ್ವಜಾರೋಹಣ ಮಾಡಲಿದ್ದಾರೆ. ಕನ್ನಡ ಖ್ಯಾತ ಸಾಹಿತಿಗಳು, ಚಲನಚಿತ್ರ ನಿರ್ದೇಶಕರೂ ಆಗಿರುವ ಡಾ.ನಾಗತಿಹಳ್ಳಿ ಚಂದ್ರಶೇಖರ್‍ರವರ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಈ ಸಮ್ಮೇಳನವನ್ನು ಕನ್ನಡದ ಖ್ಯಾತ ವಿಮರ್ಶಕರಾದ ಡಾ.ಸಿ.ಎನ್.ರಾಮಚಂದ್ರನ್‍ರವರು ಉದ್ಘಾಟಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಮನು ಬಳಿಗಾರ್ ಅವರು ಮುಖ್ಯ ಅತಿಥಿಗಳಾಗಿರುವ ಈ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ನಳಿನ್ ಕುಮಾರ್ ಕಟೀಲು, ಶ್ರೀ ಕೆ.ಅಭಯಚಂದ್ರ ಜೈನ್, ಶ್ರೀ ಕೆ.ಅಮರನಾಥ ಶೆಟ್ಟಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹಾಗೂ ಡಾ.ಎಂ.ಎನ್.ರಾಜೇಂದ್ರ ಕುಮಾರ್‍ರವರ ಗೌರವ ಉಪಸ್ಥಿತಿಯಿರುತ್ತದೆ.
ಮೂರು ಗೋಷ್ಠಿಗಳು
‘ಕರ್ನಾಟಕ : ಬಹುತ್ವದ ನೆಲೆಗಳು’ ಎಂಬ ಪ್ರಧಾನ ಪರಿಕಲ್ಪನೆಯಲ್ಲಿ ನಡೆಯುವ ಈ ಸಮ್ಮೇಳನದಲ್ಲಿ 3 ಪ್ರಧಾನ ಗೋಷ್ಠಿಗಳನ್ನು ಅಳವಡಿಸಲಾಗಿದೆ. ಮೊದಲನೆ ಗೋಷ್ಠಿ ‘ಸಾಹಿತ್ಯ-ಆಶಯದ ನೆಲೆ’ಯ ವಿಚಾರದ ‘ಪ್ರಾಚೀನ ಸಾಹಿತ್ಯ’ದ ಕುರಿತು ಡಾ.ಕೃಷ್ಣಮೂರ್ತಿ ಹನೂರು ಹಾಗೂ ‘ಆಧುನಿಕ ಸಾಹಿತ್ಯ’ದ ಕುರಿತು ಆರ್.ತಾರಿಣಿ ಶುಭದಾಯಿನಿಯವರು ವಿಚಾರ ಮಂಡಿಸಲಿದ್ದಾರೆ. ಎರಡನೆಯ ಗೋಷ್ಠಿ ‘ಮಾಧ್ಯಮ-ಸ್ವವಿಮರ್ಶೆಯ ನೆಲೆ’ಯಾಗಿದ್ದು ‘ಪತ್ರಿಕೆಯ’ ಕುರಿತು ಡಾ.ನಿರಂಜನ ವಾನಳ್ಳಿ, ‘ದೃಶ್ಯಮಾಧ್ಯಮದ’ದ ಕುರಿತು ಡಾ.ನಿತ್ಯಾನಂದ ಬಿ.ಶೆಟ್ಟಿ ಹಾಗೂ ‘ಸಾಮಾಜಿಕ ಜಾಲತಾಣ’ದ ಕುರಿತು ಎನ್.ರವಿಶಂಕರ್‍ರವರು ಪ್ರಬಂಧ ಮಂಡಿಸಲಿದ್ದಾರೆ. ಮೂರನೇ ಗೋಷ್ಠಿ ‘ಧಾರ್ಮಿಕ ಬಹುತ್ವ-ಸಹಬಾಳ್ವೆಯ ನೆಲೆ’ಯಾಗಿದ್ದು ‘ಆರಾಧನಾ ದೃಷ್ಟಿ’ಯ ಕುರಿತು ಎಸ್.ಷಡಕ್ಷರಿ ಹಾಗೂ ‘ಅನುಭಾವದ ದೃಷ್ಟಿ’ಯ ಕುರಿತು ವೀಣಾ ಬನ್ನಂಜೆಯವರು ವಿಚಾರ ಮಂಡಿಸಲಿದ್ದಾರೆ.
ಏಳು ವಿಶೇಷೋಪನ್ಯಾಸಗಳು
ಈ ಸಮ್ಮೇಳನದಲ್ಲಿ ಒಟ್ಟು 07 ವಿಶೇಷೋಪನ್ಯಾಸಗಳಿದ್ದು ಜೀವನವಿಧಾನ-ಸಮಸ್ಯೆಗಳು ಮತ್ತು ಸವಾಲುಗಳು – ಡಾ.ಜಿ.ಬಿ.ಹರೀಶ್, ಚಿತ್ರಕಲೆ, ರಂಗಭೂಮಿ ಮತ್ತು ಪ್ರದರ್ಶನ ಕಲೆ – ಡಾ.ಡಿ.ಎಸ್.ಚೌಗಲೆ, ಶಾಲಾ ಶಿಕ್ಷಣದ ಸ್ಥಿತಿಗತಿ – ಸಾಧ್ಯತೆಗಳು ಮತ್ತು ಸವಾಲುಗಳು – ಪ್ರೊ.ನಿರಂಜನಾರಾಧ್ಯ ವಿ.ಪಿ., ಕಲಾಭಿರುಚಿ – ಎ.ಈಶ್ವರಯ್ಯ, ಕಾಸರಗೋಡಿನ ಕನ್ನಡಭಾಷಾ ಅಲ್ಪಸಂಖ್ಯಾತರ ಸಮಸ್ಯೆಗಳು – ಮುರಳೀಧರ ಬಳ್ಳಕ್ಕುರಾಯ, ನಂಬಿಕೆ ಮತ್ತು ವೈಚಾರಿಕತೆ – ಡಾ.ರಂಜಾನ್ ದರ್ಗಾ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ – ಪ್ರೊ.ರವೀಂದ್ರ ರೇಷ್ಮೆಯವರು ವಿಚಾರ ಮಂಡಿಸಲಿದ್ದಾರೆ.
ಕವಿಸಮಯ-ಕವಿನಮನದಲ್ಲಿ ಒಂಬತ್ತು ಪ್ರಸಿದ್ಧ ಕವಿಗಳು
ಸಮ್ಮೇಳನದ ಮೂರು ದಿನಗಳು ಕವಿಸಮಯ-ಕವಿನಮನವೆಂಬ ಕವಿಗಳನ್ನು ಗೌರವಿಸುವ ವಿಶಿಷ್ಟ ಕಾರ್ಯಕ್ರಮವಿದ್ದು, ಒಬ್ಬ ಕವಿಗೆ ತನ್ನ ಅನುಭವಗಳನ್ನು ಹಂಚಿಕೊಳ್ಳಲು ಏಳು ನಿಮಿಷಗಳ ಕಾಲಾವಧಿ ಇರುತ್ತದೆ. ಜೊತೆಗೆ ಒಂದು ಕವನವನ್ನು ವಾಚಿಸುವುದಕ್ಕೂ ಅವಕಾಶ ಮಾಡಿಕೊಡಲಾಗಿದೆ. ಕೊನೆಗೆ ಆ ಕವನವನ್ನು ಸಂಗೀತಕ್ಕೆ ಅಳವಡಿಸಿ ಹಾಡುವುದರೊಂದಿಗೆ ಕುಂಚಕ್ಕೂ ಅಳವಡಿಸಲಾಗುತ್ತದೆ. ಒಬ್ಬ ಕವಿಗೆ 20 ನಿಮಿಷಗಳ ಕಾಲಾವಧಿ ಇರುವ ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ಊರುಗಳ ಎಂಟು ಪ್ರಸಿದ್ಧ ಕವಿಗಳಿಗೆ ಅವಕಾಶ ನೀಡಲಾಗಿದೆ.
ಜಯಪ್ಪ ಹೊನ್ನಾಳಿ ಮೈಸೂರು, ಡಾ.ಎಂ ಮಹ್ಮದ್ ಬಾಷಾ ಗೂಳ್ಯಂ ಬೆಂಗಳೂರು, ಪ್ರೊ. ಎಚ್.ರಮೇಶ ಕೆದಿಲಾಯ ಮಂಗಳೂರು, ಅಪ್ಪಾ ಸಾಹೇಬ ಅಲಿಬಾದಿ ಅಥಣಿ, ಡಾ.ಪಿ.ಚಂದ್ರಿಕ ಬೆಂಗಳೂರು, ಡಾ. ಲತಾ ಗುತ್ತಿ ಬೆಂಗಳೂರು, ಡಾ.ಆನಂದ್ ಋಗ್ವೇದಿ ದಾವಣಗೆರೆ, ರೇಖಾ ಕಾಖಂಡಕಿ ಬೆಂಗಳೂರು ಮತ್ತು ವಿ.ಎಸ್.ಶ್ಯಾನ್‍ಭಾಗ್ ಮುಂಬೈ ಈ ಸಲದ ನುಡಿಸಿರಿಯ ಕವಿಗಳು.
ಎರಡು ಸಂಸ್ಮರಣೆ
ಕನ್ನಡ ನಾಡು-ನುಡಿ-ಸಂಸ್ಕøತಿಗಾಗಿ ಸೇವೆಸಲ್ಲಿಸಿ ಇತ್ತೀಚೆಗೆ ನಿಧನರಾದವರಿಗೆ ಸಲ್ಲಿಸುವ ಗೌರವಾರ್ಪಣೆ ‘ಸಂಸ್ಮರಣೆ’ ಕಾರ್ಯಕ್ರಮ. ಈ ವರ್ಷ ನಮ್ಮನ್ನಗಲಿದ ಈರ್ವರು ಮಹನೀಯರನ್ನು ಸಂಸ್ಮರಣೆಯ ಮೂಲಕ ನೆನಪಿಸಿಕೊಳ್ಳಲಿದ್ದೇವೆ. ರಂಗಭೂಮಿ ಖ್ಯಾತರಾದ ‘ನಾಡೋಜ ಏಣಗಿ ಬಾಳಪ್ಪ’ನವರ ಕುರಿತು ಡಾ.ಗಣೇಶ್ ಅಮೀನಗಡ ಹಾಗೂ ಯಕ್ಷಗಾನ ಖ್ಯಾತರಾದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಕುರಿತು ವಿದ್ವಾನ್ ಡಾ.ಉಮಾಕಾಂತ ಭಟ್ ಮೇಲುಕೋಟೆಯವರು ಮಾತನಾಡಲಿದ್ದಾರೆ.
ಶತಮಾನದ ನಮನ
ಕನ್ನಡದ ಖ್ಯಾತ ಸಾಹಿತಿಗಳಾದ ಎಂ.ಗೋಪಾಲಕೃಷ್ಣ ಅಡಿಗ ಹಾಗೂ ಶ್ರೀಮತಿ ಎಂ.ಕೆ.ಇಂದಿರಾ ಅವರ ಜನ್ಮಶತಮಾನೋತ್ಸವ ವರ್ಷವಿದು. ಈ ಸಂದರ್ಭದಲ್ಲಿ ಈ ಈರ್ವರು ಸಾಹಿತಿಗಳನ್ನು ಕ್ರಮವಾಗಿ ಎಸ್.ಆರ್.ವಿಜಯಶಂಕರ್ ಹಾಗೂ ಭುವನೇಶ್ವರಿ ಹೆಗಡೆಯವರು ಪರಿಚಯ ಮಾಡಿಕೊಡಲಿದ್ದಾರೆ.
ನನ್ನ ಕತೆ ನಿಮ್ಮ ಜೊತೆ
ಕನ್ನಡ ನಾಡಿನಲ್ಲಿ ಖ್ಯಾತರಾದ ವ್ಯಕ್ತಿಯೊಬ್ಬರು ತನ್ನ ಬದುಕಿನ ಏಳುಬೀಳುಗಳನ್ನು ಪರಿಚಯಿಸುವುದು ನನ್ನ ಕತೆ ನಿಮ್ಮ ಜೊತೆ ಕಾರ್ಯಕ್ರಮ ಈ ವರ್ಷ ಸಾಹಿತ್ಯ-ಸಂಸ್ಕøತಿ ಕ್ಷೇತ್ರಗಳಲ್ಲಿ ಹೆಸರು ಮಾಡಿದ ಕಾಸರಗೋಡು ಚಿನ್ನ, ಕಾರ್ಗಿಲ್ ಯುದ್ಧದಲ್ಲಿ ವೀರಸಾಹಸ ಮೆರೆದ ಕ್ಯಾಪ್ಟನ್ ನವೀನ್ ನಾಗಪ್ಪ ಹಾಗೂ ಶುದ್ಧ ಹಸ್ತ ಮತ್ತು ನ್ಯಾಯನಿಷ್ಠುರತೆಗೆ ಹೆಸರುವಾಸಿಯಾದ ನಾಡೋಜ ಡಾ.ಎನ್.ಸಂತೋಷ ಹೆಗ್ಡೆಯವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳಲಿದ್ದಾರೆ.
15 ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ
ಕನ್ನಡ ನಾಡು-ನುಡಿ-ಸಂಸ್ಕøತಿಗಾಗಿ ದುಡಿದ ಮಹನೀಯರನ್ನು ಆಳ್ವಾಸ್ ನುಡಿಸಿರಿ ಪ್ರಶಸ್ತಿನೀಡಿ ಸಮಾರೋಪ ಸಮಾರಂಭದಲ್ಲಿ ಗೌರವಿಸಲಾಗುತ್ತದೆ. ಈ ಗೌರವವು 25,000/- ನಗದು ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತದೆ. ಅತ್ಯಂತ ವಿನಮ್ರತೆಯಿಂದ ಸಾಧಕರನ್ನು ಗೌರವಿಸುವ ಈ ಸನ್ಮಾನ ಕಾರ್ಯಕ್ರಮದಲ್ಲಿ 15 ಮಂದಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಗುತ್ತದೆ. ಈ ವರ್ಷದ ಆಳ್ವಾಸ್ ನುಡಿಸಿರಿ ಪುರಸ್ಕøತರ ಹೆಸರುಗಳು ಇಂತಿವೆ.
ಅತಿವಂದನೀಯ ಬಿಷಪ್ ಹೆನ್ರಿ ಡಿ’ಸೋಜ, ಶ್ರೀ ಎಚ್.ಎಸ್.ದೊರೆಸ್ವಾಮಿ, ನಾಡೋಜ ಡಾ.ಎನ್.ಸಂತೋಷ್ ಹೆಗ್ಡೆ, ಡಾ.ತೇಜಸ್ವಿ ಕಟ್ಟೀಮನಿ, ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ, ಡಾ.ವಿಜಯಾ ದಬ್ಬೆ, ಪ್ರೊ.ಕೆ.ಬಿ.ಸಿದ್ದಯ್ಯ, ಪ್ರೊ.ಜಿ.ಎಚ್.ಹನ್ನೆರಡುಮಠ, ಪ್ರೊ. ಬಿ.ಸುರೇಂದ್ರ ರಾವ್, ಡಾ.ಎಂ.ಪ್ರಭಾಕರ ಜೋಶಿ, ಪದ್ಮಶ್ರೀ ಪುರಸ್ಕøತ ಗಿರೀಶ್ ಭಾರದ್ವಾಜ್, ಶ್ರೀ ಪದ್ಮರಾಜ ದಂಡಾವತಿ, ಶ್ರೀಮತಿ ರತ್ನಮಾಲಾ ಪ್ರಕಾಶ್, ಡಾ.ತೋನ್ಸೆ ವಿಜಯ್‍ಕುಮಾರ್ ಶೆಟ್ಟಿ, ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ.
ಆಳ್ವಾಸ್ ಕೃಷಿಸಿರಿ 2017
ಸಾಹಿತ್ಯ-ಸಂಸ್ಕøತಿಗಳ ಜೊತೆಗೆ ಅನ್ನವನ್ನೂ, ಅನ್ನದಾತರನ್ನೂ ಗೌರವಿಸುವ ಕಾರ್ಯಕ್ರಮ ಆಳ್ವಾಸ್ ಕೃಷಿಸಿರಿ. ದಶಂಬರ 1, 2 ಮತ್ತು 3ನೇ ದಿನಾಂಕಗಳಂದು ನಡೆಯುವ ಈ ಕೃಷಿಸಿರಿಯ ಉದ್ಘಾಟನಾ ಸಮಾರಂಭವು ನವೆಂಬರ್ 30ನೇ ದಿನಾಂಕದಂದು ಮುಂಡ್ರುದೆಗುತ್ತು ರಾಮಮೋಹನ ರೈ ಕೃಷಿ ಆವರಣದಲ್ಲಿ ನಡೆಯಲಿದೆ.
ಭಾರತ ಸರಕಾರದ ಮಾಜಿ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ಎಚ್.ಡಿ.ದೇವೇಗೌಡರು ಉದ್ಘಾಟಿಸಲಿರುವ ಆಳ್ವಾಸ್ ಕೃಷಿಸಿರಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಧರ್ಮಸ್ಥಳದ ಶ್ರೀ ಡಿ.ಹರ್ಷೇಂದ್ರ ಕುಮಾರ್‍ರವರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿಸಚಿವರಾದ ಶ್ರೀ ಕೆ.ಅಮರನಾಥ ಶೆಟ್ಟಿ ಕೃಷಿಬೆಲೆ ಆಯೋಗದ ಅಧ್ಯಕ್ಷರಾದ ಶ್ರೀ ಜಿ.ಎನ್.ಪ್ರಕಾಶ್ ಕಮ್ಮರಡಿಯವರು ಪಾಲ್ಗೊಳ್ಳಲಿದ್ದಾರೆ. ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಡಾ.ವೇಣುಗೋಪಾಲ್ ಹಾಗೂ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕರರಾದ ಡಾ| ಆನಂದ್‍ರವರ ಗೌರವ ಉಪಸ್ಥಿತಿ ಇರುತ್ತದೆ.
ಜಾನುವಾರು ಪ್ರದರ್ಶನ, ಬೆಕ್ಕುಗಳ ಪ್ರದರ್ಶನ, ಬೆಕ್ಕುಗಳ ಸೌಂದರ್ಯ ಪ್ರದರ್ಶನ, ಶ್ವಾನ-ಶ್ವಾನಮರಿ-ಶ್ವಾನ ಪ್ರಾಮಾಣಿಕತೆ ಹಾಗೂ ಶ್ವಾನ ಸೌಂದರ್ಯ ಪ್ರದರ್ಶನ, 600ಕ್ಕೂ ಮಿಕ್ಕಿ ಬೃಹತ್ ಮತ್ಸ್ಯಾಲಯಗಳ ಮೂಲಕ ಮತ್ಸ್ಯಪ್ರದರ್ಶನ, 500ಕ್ಕೂ ಮಿಕ್ಕಿ ಸಮುದ್ರ ಚಿಪ್ಪುಗಳ ಪ್ರದರ್ಶನ, ವಿದೇಶಿ ಪಕ್ಷಿ ಬೋನ್ಸಾಯಿ ಕೃಷಿ-ಪುಷ್ಪ-ನ್ಯೂಜಿಲ್ಯಾಂಡ್ ಮೂಲದ ಆಹಾರಕ್ಕಾಗಿ ಬಳಸುವ ಬಣ್ಣರ ಸಸ್ಯಗಳು-ತರಕಾರಿ ಮತ್ತು ಹಣ್ಣುಗಳಲ್ಲಿ ಕಲಾಕೃತಿ ರಚನೆ-44 ತಳಿ ಬಿದಿರು ಗಿಡ – 40 ತಳಿ ಬಿದಿರು, ಕೃಷಿ ಸಂಬಂಧಿ ಗುಡಿಕೈಗಾರಿಕೆಗಳು-ಎರಡು ಎಕರೆ ಪ್ರದೇಶದಲ್ಲಿ ನೈಜ ತರಕಾರಿ ಕೃಷಿ-250ಕ್ಕೂ ಮಿಕ್ಕಿ ರಾಜ್ಯಮಟ್ಟದ ಕೃಷಿ ಮಳಿಗೆಗಳ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ.
ದಶಂಬರ 01ರಂದು ಜಾನುವಾರು ಪ್ರದರ್ಶನ ಸಂಜೆ 4.30ರಿಂದ 6.00ರ ವರೆಗೆ ಓಟದ ಕೋಣಗಳ ಸೌಂದರ್ಯದ ಸ್ಪರ್ಧೆಯಿದ್ದು ವಿಜೇತ ಕೋಣಗಳಿಗೆ 50,000, 30,000 ಮತ್ತು 20,000 ಬಹುಮಾನಗಳಿವೆ. ಅಂತೆಯೇ ಕೋಣ ಓಡಿಸುವವರ ಸೌಂದರ್ಯ ಸ್ಪರ್ಧೆಯಿದ್ದು 10,000 ಮತ್ತು 7,000 ಬಹುಮಾನಗಳನ್ನು ಫೋಷಿಸಲಾಗಿದೆ.
ಯಕ್ಷಗಾನ ಕಲಾವಿದ, ಬಣ್ಣಹಚ್ಚಿಕೊಂಡೇ ಬದುಕಿಗೆ ವಿದಾಯ ಹೇಳಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿ ವೇದಿಕೆ ಕೃಷಿಸಿರಿಯಲ್ಲಿದ್ದು ಮೂರು ದಿನಗಳೂ ದಿನವಿಡೀ ಸಾಂಸ್ಕøತಿಕ ಕಾರ್ಯಕ್ರಮಗಳಿಂದ ಕಳೆಗಟ್ಟಲಿದೆ.
ತುಳುನಾಡ ಐಸಿರಿ 2017
ಆಳ್ವಾಸ್ ನುಡಿಸಿರಿ ನಡೆಯುವ ಮೂರು ದಿನಗಳೂ ಸಂಜೆ 6.00 ಗಂಟೆಯಿಂದ ತುಳು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ತುಳು ಸಾಧಕರು, ತುಳು-ಕನ್ನಡ ಸಾಹಿತಿಗಳೂ ಆಗಿರುವ ನಾಡೋಜ ಕಯ್ಯಾರ ಕಿಞಂಣ್ಣ ರೈಯವರ ಹೆಸರಿನ ವೇದಿಕೆಯಲ್ಲಿ ಈ ಕಾರ್ಯಕ್ರಮಗಳು ನಡೆಯುತ್ತಿದ್ದು ದಶಂಬರ 01ರಂದು ಸಂಜೆ 5.30ಕ್ಕೆ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿದೆ. ಕರ್ನಾಟಕ ತುಳು ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎ.ಸಿ.ಭಂಡಾರಿಯವರಿಂದ ಉದ್ಘಾಟನೆಗೊಳ್ಳುವ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಉಪಕುಲಪತಿಗಳೂ, ತುಳು ಸಂಶೋಧಕರೂ ಆಗಿರುವ ಪ್ರೊ.ಬಿ.ಎ.ವಿವೇಕ ರೈಯವರು ವಹಿಸಿಕೊಳ್ಳಲಿದ್ದಾರೆ.
ಆಳ್ವಾಸ್ ನುಡಿಸಿರಿಯೊಂದಿಗೆ ವಿವಿಧ ಸಿರಿಗಳು
ರಾಜ್ಯದ 35 ಚಿತ್ರಕಲಾವಿದರಿಂದ ಆಳ್ವಾಸ್ ಚಿತ್ರಸಿರಿ, ದೇಶದ 2000ಕ್ಕೂ ಮಿಕ್ಕಿ ಛಾಯಾಚಿತ್ರಕಾರರ ಛಾಯಾಚಿತ್ರಗಳ ಪ್ರದರ್ಶನ ಮತ್ತು ಸ್ಪರ್ಧೆಯ ಆಳ್ವಾಸ್ ಛಾಯಾಚಿತ್ರಸಿರಿ, ಚುಕ್ಕಿ ಚಿತ್ರ ಕಲಾವಿದರ ಚುಕ್ಕಿ ಚಿತ್ರಗಳ ರಚನೆ ಮತ್ತು ಪ್ರದರ್ಶನದ ಆಳ್ವಾಸ್ ಚುಕ್ಕಿ ಚಿತ್ರಸಿರಿ, ಗಾಳಿಪಟೋತ್ಸವದ ಆಳ್ವಾಸ್ ಗಾಳಿಪಟಸಿರಿ, ಎಸ್.ಎಸ್.ಎಲ್.ಸಿವರೆಗೆ ಕನ್ನಡ ಮಾಧ್ಯಮಗಳಲ್ಲಿ ಕಲಿತವರಿಗಾಗಿ ಮೊತ್ತಮೊದಲ ಬಾರಿಗೆ ಉದ್ಯೋಗಾವಕಾಶ ನೀಡುವ ಆಳ್ವಾಸ್ ಉದ್ಯೋಗಸಿರಿ, ಕನ್ನಡ ನಾಟಕಗಳ ಪ್ರದರ್ಶನ ‘ಆಳ್ವಾಸ್ ರಂಗಸಿರಿ’, ಕನ್ನಡ ಚಲನಚಿತ್ರ ಪ್ರದರ್ಶನದ ‘ಆಳ್ವಾಸ್ ಸಿನಿಸಿರಿ’ , ರಾಜ್ಯದ 30 ವ್ಯಂಗ್ಯಚಿತ್ರ ಕಲಾವಿದರಿಂದ ವ್ಯಂಗ್ಯಚಿತ್ರ ರಚನೆ ಮತ್ತು ಪ್ರದರ್ಶನದ ಆಳ್ವಾಸ್ ವ್ಯಂಗ್ಯಚಿತ್ರಸಿರಿ, ಗೂಡುದೀಪಗಳ ಪ್ರದರ್ಶನದ ಆಳ್ವಾಸ್ ಗೂಡುದೀಪಸಿರಿ, ಯಕ್ಷಗಾನ ಪ್ರದರ್ಶನದ ಆಳ್ವಾಸ್ ಯಕ್ಷಸಿರಿ, ವಿವಿಧ ವಿಜ್ಞಾನ ಮಾದರಿಗಳ ಪ್ರಾತ್ಯಕ್ಷಿಕೆ ಆಳ್ವಾಸ್ ವಿಜ್ಞಾನಸಿರಿಗಳು ಮೇಳೈಸಿ ಆಳ್ವಾಸ್ ನುಡಿಸಿರಿ 2017ಕ್ಕೆ ಬಲನೀಡಲಿವೆ.
ಹನ್ನೆರಡು ವೇದಿಕೆಗಳಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು
ರತ್ನಾಕರವರ್ಣಿ ವೇದಿಕೆ, ನಾಡೋಜ ಏಣಗಿ ಬಾಳಪ್ಪ ವೇದಿಕೆ, ಗೇರುಕಟ್ಟೆ ಗಂಗಯ್ಯ ಶೆಟ್ಟಿ ವೇದಿಕೆ, ಕುವೆಂಪು ಸಭಾಂಗಣ, ಕು.ಶಿ.ಹರಿದಾಸಭಟ್ಟ ವೇದಿಕೆ, ನಾಡೋಜ ಕಯ್ಯಾರ ಕಿಂಞಣ್ಣ ರೈ ವೇದಿಕೆ, ಡಾ.ಶಿವರಾಮ ಕಾರಂತ ಸಭಾಂಗಣ, ಪಳಕಳ ಸೀತಾರಾಮ ಭಟ್ಟ ವೇದಿಕೆ, ಡಾ|ವಿ.ಎಸ್.ಆಚಾರ್ಯ ಸಭಾಭವನದ ಹರೀಶ್ ಆರ್.ಭಟ್ ವೇದಿಕೆ, ಕೆ.ವಿ.ಸುಬ್ಭಣ್ಣ ಬಯಲು ರಂಗಮಂದಿರ, ಪ್ರೊ.ಎಸ್.ರಾಮದಾಸ ತೋಳ್ಪಾಡಿ ವೇದಿಕೆ ಹಾಗೂ ಪುಟ್ಟಣ್ಣ ಕಣಗಾಲ್ ವೇದಿಕೆಗಳಲ್ಲಿ ಆಳ್ವಾಸ್ ನುಡಿಸಿರಿ 2017ರ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.
ಐದು ವೇದಿಕೆಗಳಲ್ಲಿ ಹಗಲು-ರಾತ್ರಿ ಸಾಂಸ್ಕøತಿಕ ಕಾರ್ಯಕ್ರಮ
ಗೇರುಕಟ್ಟೆ ಗಂಗಯ್ಯ ಶೆಟ್ಟಿ ವೇದಿಕೆ, ಕುವೆಂಪು ಸಭಾಂಗಣ, ಡಾ.ಶಿವರಾಮ ಕಾರಂತ ಸಭಾಂಗಣ, ಪಳಕಳ ಸೀತಾರಾಮ ಭಟ್ಟ ವೇದಿಕೆ, ಡಾ| ವಿ.ಎಸ್.ಆಚಾರ್ಯ ಸಭಾಭವನದ ಹರೀಶ್ ಆರ್.ಭಟ್ ವೇದಿಕೆಗಳಲ್ಲಿ ಬೆಳಿಗ್ಗೆಯಿಂದ ರಾತ್ರಿ 10.00 ಗಂಟೆಯವರೆಗೆ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಉಳಿದ 07 ವೇದಿಕೆಗಳಲ್ಲಿ ಸಂಜೆ 06 ಗಂಟೆಯಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಗರಿಗೆದರಲಿವೆ.
ಆಳ್ವಾಸ್ ಆವರಣದಲ್ಲಿ ಕನ್ನಡದ ಕಲರವ
ಆಳ್ವಾಸ್ ನುಡಿಸಿರಿಯ ಮೂರುದಿನಗಳಲ್ಲಿ ಆಳ್ವಾಸ್ ಸಂಪೂರ್ಣ ಆವರಣವನ್ನು ಕನ್ನಡದ ಕಲರವದಿಂದ ಕಳೆಕಟ್ಟುವಂತೆ ಮಾಡಲಾಗುತ್ತದೆ. ದೇಸಿ ಕ್ರೀಡೆಗಳಾದ ಕುಸ್ತಿ ಮತ್ತು ದೇಹಧಾಢ್ರ್ಯ ಸ್ಪರ್ಧೆ, ದೇಸಿ ಹಾಡುಗಾರರ ತಂಡ, ದೇಸಿ ಸಾಂಸ್ಕøತಿಕ ತಂಡ, ದೇಸಿ ವಾದ್ಯ ಮೇಳಗಳ ತಂಡಗಳೇ ಮೊದಲಾದ ಹಲವು ತಂಡಗಳು ಆಳ್ವಾಸ್ ಆವರಣವನ್ನು ಕನ್ನಡಮಯವನ್ನಾಗಿ ಮಾಡಲಿವೆ.
ಅಧ್ಯಕ್ಷರ ಜೊತೆಗಿನ ಸಂವಾದದ ವಿಶಿಷ್ಟ ಕಾರ್ಯಕ್ರಮ
ಸಮ್ಮೇಳನದ ಸರ್ವಾಧ್ಯಕ್ಷರು ಹಾಗೂ ಸಮ್ಮೇಳನದ ಕಾರ್ಯಾಧ್ಯಕ್ಷರ ಜೊತೆಗೆ ಸಾರ್ವಜನಿಕರಿಗೆ ಮುಕ್ತ ಸಂವಾದ ನಡೆಸುವ ಅವಕಾಶಗಳನ್ನು ಎರಡು ದಿನಗಳ ಕಾಲ ಡಾ| ವಿ.ಎಸ್.ಆಚಾರ್ಯ ಸಭಾಂಗಣದ ಹರೀಶ್ ಆರ್.ಭಟ್ ವೇದಿಕೆಯಲ್ಲಿ ಏರ್ಪಡಿಸಲಾಗಿದೆ. ಈ ಸಂವಾದ ಕಾರ್ಯಕ್ರಮವು ಬೆಳಗ್ಗೆ 07.05ರಿಂದ 08.00ರವರೆಗೆ ನಡೆಯಲಿದ್ದು ದಿನಾಂಕ 02.12.2017ನೇ ಶನಿವಾರ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ನಾಗತಿಹಳ್ಳಿ ಚಂದ್ರಶೇಖರ್ ಅವರೊಂದಿಗೆ ಹಾಗೂ ದಿನಾಂಕ 03.12.2017ನೇ ಭಾನುವಾರ ಕಾರ್ಯಾಧ್ಯಕ್ಷರಾದ ಡಾ| ಎಂ. ಮೋಹನ ಆಳ್ವರೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಎರಡು ಕಡೆಗಳಲ್ಲಿ ಭೋಜನ ತಯಾರಿ
ಈ ವರ್ಷ ಅತೀ ಹೆಚ್ಚು ಕನ್ನಡಾಭಿಮಾನಿಗಳನ್ನು ಸಮ್ಮೇಳನಕ್ಕೆ ನಿರೀಕ್ಷಿಸುತ್ತಿದ್ದು ಊಟೋಪಚಾರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದಕ್ಕೆ ಎರಡು ಕಡೆ ಬೋಜನದ ತಯಾರಿ ಮಾಡಲಾಗುತ್ತದೆ. ದಿನವೊಂದಕ್ಕೆ ಒಂದು ಲಕ್ಷ ಮಂದಿಯನ್ನು ನಿರೀಕ್ಷಿಸುತ್ತಿದ್ದು ಉತ್ತಮ ಅತಿಥಿ ಸತ್ಕಾರಕ್ಕಾಗಿ ಎಚ್ಚರ ವಹಿಸಲಾಗುವುದು.
ಮೂರು ದಿನಗಳ ಕಾಲ ನಡೆಯುವ ಆಳ್ವಾಸ್ ನುಡಿಸಿರಿ – 2017 ಸಾಹಿತ್ಯಕ-ವೈಚಾರಿಕ ಗೋಷ್ಠಿಗಳೊಂದಿಗೆ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಹಾಗೂ ಪೂರಕ ವಿಚಾರಗಳೊಂದಿಗೆ ಕರ್ನಾಟಕದ ಸಂಸ್ಕøತಿಯನ್ನು ಆಳ್ವಾಸ್ ಆವರಣದಲ್ಲಿ ಮರುಸೃಷ್ಟಿ ಮಾಡಲಿದೆ. ಅತ್ಯಪೂರ್ವವೂ, ಅನನ್ಯವೂ ಆಗಿರುವ ಆಳ್ವಾಸ್ ನುಡಿಸಿರಿ 2017ನ್ನು ಕನ್ನಡ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಯಶಸ್ವಿಗೊಳಿಸಬೇಕಾಗಿ ಕೇಳಿಕೊಳ್ಳುತ್ತೇನೆ.