Home Mangalorean News Kannada News ಮೂಡುಬಿದಿರೆಯ ಗಣೇಶ್ ಕಾಮತ್‍ಗೆ ಮಂಗಳೂರು ಪ್ರೆಸ್ ಕ್ಲಬ್‍ನ  ವರ್ಷದ ಪ್ರಶಸ್ತಿ

ಮೂಡುಬಿದಿರೆಯ ಗಣೇಶ್ ಕಾಮತ್‍ಗೆ ಮಂಗಳೂರು ಪ್ರೆಸ್ ಕ್ಲಬ್‍ನ  ವರ್ಷದ ಪ್ರಶಸ್ತಿ

Spread the love

ಮೂಡುಬಿದಿರೆಯ ಗಣೇಶ್ ಕಾಮತ್‍ಗೆ ಮಂಗಳೂರು ಪ್ರೆಸ್ ಕ್ಲಬ್‍ನ  ವರ್ಷದ ಪ್ರಶಸ್ತಿ

ಮಂಗಳೂರು: ಎರಡೂ ಕೈಗಳಿಲ್ಲದಿದ್ದರೂ ಕಠಿಣ ಪರಿಶ್ರಮದ  ಮೂಲಕ ಹಲವರ ಬಾಳಿಗೆ ಬೆಳಕಾಗಿರುವ ದೊಡ್ಡ ಉದ್ಯಮವನ್ನು ಕಟ್ಟಿದ ಮೂಡುಬಿದಿರೆಯ  ಸಾಧಕ  ಉದ್ಯಮಿ ಜಿ.ಕೆ ಡೆಕೋರೇಟರ್ಸ್‍ನ ಗಣೇಶ್ ಕಾಮತ್ ಅವರು ಮಂಗಳೂರು ಪ್ರೆಸ್ ಕ್ಲಬ್‍ನ 2017ನೇ ಸಾಲಿನ ವರ್ಷದ ಪ್ರಶಸ್ತಿಗೆ  ಆಯ್ಕೆಯಾಗಿದ್ದಾರೆ.

ಹಂಪಿ ವಿವಿಯ  ವಿಶ್ರಾಂತ ಕುಲಪತಿ ಪ್ರೊ. ಬಿ.ಎ.ವಿವೇಕ್ ರೈ, ರಾಷ್ಟ್ರ ಪ್ರಶಸ್ತಿ ಪುರಸ್ಕøತ ಚಲನ ಚಿತ್ರ ನಿರ್ದೇಶಕ ಸದಾನಂದ ಸುವರ್ಣ ಮತ್ತು ನಿವೃತ್ತ ನಿವೃತ್ತ ಪ್ರಾಧ್ಯಾಪಕರು ಹಾಗೂ ಸಾಮಾಜಿಕ ಕಾರ್ಯಕರ್ತೆ ಪ್ರೊ ರೀಟಾ ನೊರೋನ್ಹಾ ಇವರ ನೇತೃತ್ವದ ತೀರ್ಪುಗಾರರ ಸಮಿತಿಯು ಮಂಗಳೂರು ಪ್ರೆಸ್ ಕ್ಲಬ್ ನ ಮೂರನೇ ವರ್ಷದ ವಾರ್ಷಿಕ ಪ್ರಶಸ್ತಿಗೆ ಗಣೇಶ್ ಕಾಮತ್ ಅವರನ್ನು ಆಯ್ಕೆ ಮಾಡಿದೆ. ಪ್ರಶಸ್ತಿ 10,001 ನಗದು, ಪ್ರಶಸ್ತಿ ಫಲಕ , ಸ್ಮರಣಿಕೆ ಒಳಗೊಂಡಿದೆ.

41ರ ಹರೆಯದ ಗಣೇಶ್ ಕಾಮತ್  ಕಡು ಬಡತನದಲ್ಲಿ  ಬೆಳೆದವರು. ಓದಿದ್ದು ಏಳನೇ ತರಗತಿ. 12ನೇ ವಯಸ್ಸಿಯಲ್ಲೇ ಪೆಂಡಾಲ್ ಉದ್ಯಮದವರ ಬಳಿ ಉದ್ಯೋಗಕ್ಕೆ ಸೇರಿದ್ದರು. 2001ರಲ್ಲಿ ಕಾರ್ಕಳದ ಕ್ರೀಡಾಂಗಣದಲ್ಲಿ  ಫ್ಲಡ್ ಲೈಟ್ ವ್ಯವಸ್ಥೆ ಅಳವಡಿಸುತ್ತಿದ್ದಾಗ ಸಂಭವಿಸಿದ ವಿದ್ಯುತ್ ಆಘಾತ ಅವರ ಬದುಕನ್ನು ಬದಲಾಯಿಸಿತು.

ವಿದ್ಯುತ್ ಆಘಾತದಿಂದಾಗಿ  ಕಾಮತ್ ಎರಡೂ ಕೈಗಳನ್ನು ಕಳೆದುಕೊಂಡಿದ್ದರು.  ಬಳಿಕ  ಆವರಿಗೆ ಎಲ್ಲೂ ಉದ್ಯೋಗ ಸಿಗಲಿಲ್ಲ. ಆಗ ಅವರಿಗೆ ಹೊಳೆದದ್ದು ಮ್ಯೂಸಿಕ್ ಸಿಸ್ಟಮ್.  ಸಂಗೀತ  ಪರಿಕರಗಳನ್ನು
ಖರೀದಿಸಿದ ಅವರು ಮದುವೆ ಸಮಾರಂಭಗಳಿಗೆ ಬಾಡಿಗೆಗೆ ನೀಡ ತೊಡಗಿದರು. ಪ್ರತಿಯೊಂದು ಮದುವೆಗೆ 350 ರೂ. ಆದಾಯ ಸಿಗುತ್ತಿತ್ತು.    ಹೀಗೆ 16 ವರ್ಷಗಳ ಹಿಂದೆ ಮೂಡುಬಿದಿರೆಯಲ್ಲಿ ಕಟ್ಟಿದ ಅವರ ಸಣ್ಣ ಸಂಸ್ಥೆ ಜಿ.ಕೆ. ಡೆಕೋರೇಟರ್ಸ್ ಇಂದು ದೊಡ್ಡ ಉದ್ಯಮ  ಸಂಸ್ಥೆಯಾಗಿ ಬೆಳೆದಿದೆ. ಅವರೊಬ್ಬ  ಯಶಸ್ವಿ ಉದ್ಯಮಿಯಾಗಿ ಬೆಳೆದಿದ್ದಾರೆ.

ನವೋದಯ ಸ್ವಸಹಾಯ ಸಂಘಗಳ ಸಮಾವೇ±ಗಳು , ಪಡುಬಿದ್ರೆಯಲ್ಲಿ ನಡೆದ ವಿಶ್ವ ಕೊಂಕಣಿ ಸಮ್ಮೇಳನ, ಉಡುಪಿಯಲ್ಲಿ ನಡೆದ ಧರ್ಮ ಸಂಸತ್ತು, ಅಡ್ಯಾರ್‍ನಲ್ಲಿ ನಡೆದ ವಿಶ್ವ ತುಳುವೆರೆ ಪರ್ಬೊ ಕಾರ್ಕಳ ಬಾಹುಬಲಿ ಸ್ವಾಮಿಯ ಮಹಾ ಮಸ್ತಕಾಬಿಷೇಕ , ಮೊದಲಾದ ದೊಡ್ಡ ಕಾರ್ಯಕ್ರಮಗಳ ವ್ಯವಸ್ಥೆಯನ್ನು ಜಿ.ಕೆ ಡೆಕೋರೇಟರ್ಸ್ ಸಮರ್ಥವಾಗಿ ನಿರ್ವಹಿಸಿದೆ.

ಗಣೇಶ್ ಕಾಮತ್ ಆರಂಭದಲ್ಲಿ ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ಪೆಂಡಾಲ್ ಒದಗಿಸುತ್ತಿದ್ದರು. ಇದೀಗ ಅವರ ಜಿ.ಕೆ.ಡೆಕೋರೆಟರ್ಸ್  ಸಂಸ್ಥೆ ವಿವಾಹ , ಸಮಾವೇಶ ಮತ್ತಿತರ  ಯಾವುದೇ ದೊಡ್ಡ   ಸಮಾರಂಭಗಳಿಗೂ  ಪೆಂಡಾಲ್, ಧ್ವನಿವರ್ಧಕ, ಚೆಯರ್ ,ಲೈಟಿಂಗ್ಸ್, ಕ್ಯಾಟರಿಂಗ್ ವ್ಯವಸ್ಥೆ ಸೇರಿದಂತೆ ಎಲ್ಲವನ್ನು ಒದಗಿಸುವ ದೊಡ್ಡ ಸಂಸ್ಥೆಯಾಗಿ  ಬೆಳೆದಿದೆ.  ಅವರ  ಸಂಸ್ಥೆಯಲ್ಲಿ  ಸುಮಾರು 45 ಮಂದಿ ನೌಕರರು ದುಡಿಯುತ್ತಿದ್ದಾರೆ.

ಜ.6ರಂದು ಪ್ರಶಸ್ತಿ ಪ್ರದಾನ: 2018, ಜ.6ರಂದು  ಉರ್ವ ಚರ್ಚ್ ಹಾಲ್‍ನಲ್ಲಿ ನಡೆಯಲಿರುವ ಪ್ರೆಸ್ ಕ್ಲಬ್ ದಿನಾಚರಣೆಯಂದು  ಉದ್ಯಮಿ ಜಿ.ಕೆ ಡೆಕೋರೇಟರ್ಸ್‍ನ  ಮಾಲೀಕ ಗಣೇಶ್ ಕಾಮತ್  ಅವರಿಗೆ  ಪ್ರೆಸ್ ಕ್ಲಬ್‍ನ 2017ನೇ ವರ್ಷದ  ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಮಂಗಳೂರು ಪ್ರೆಸ್ ಕ್ಲಬ್‍ನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version