ಮೂಡುಬಿದಿರೆ: ಸ್ಥಳೀಯ ಜೈನ ಪ್ರೌಢಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಸರ್ದಾರ್ ಪಟೇಲ್ ಗ್ರಾಹಕ ಕ್ಲಬ್ ನ ಆಶ್ರಯದಲ್ಲಿ ಮಾನವ ಹಕ್ಕುಗಳ ಬಗೆಗೆ ಅರಿವು ಕಾರ್ಯಕ್ರಮವನ್ನು ಜನವರಿ 6, 2015 ರಂದು ಆಯೋಜಿಸಲಾಗಿತ್ತು. ಪ್ರಾರಂಭದಲ್ಲಿ ಅರಿವು ಕಾರ್ಯಕ್ರಮವನ್ನು ಸಿ.ಡಿ. ಚಿತ್ರದ ಮೂಲಕ ಹೃದಯಕ್ಕೆ ಮುಟ್ಟುವಂತೆ ಪ್ರಸ್ತುತ ಪಡಿಸಿದ ದ.ಕ. ಜಿಲ್ಲಾ ಮಾನವ ಹಕ್ಕುಗಳ ಮತ್ತು ಭೃಷ್ಟಾಚಾರ ನಿರ್ಮೂಲನಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯುವರಾಜ ಜೈನ್‍ರವರು ವಿವಿಧ ಹಕ್ಜುಗಳಾದ ಜೀವಿಸುವ, ಸಮಾನತೆಯ, ಗುಲಾಮಗಿರಿ ವಿರುದ್ಧದ, ಪ್ರಾಮಾಣಿಕ ವಿಚಾರಣಾ, ಸೌಲಭ್ಯ ಪಡೆಯುವ, ಯೋಗ್ಯ ಪರಿಸರದ, ಸಂಚರಿಸುವ, ಏಕಾಂತ-ಗೌಪ್ಯತೆಯ, ಪ್ರತಿಭಟಿಸುವ ಇತ್ಯಾದಿ ಹಕ್ಕುಗಳ ಬಗೆಗೆ ಮಾಹಿತಿ ಒದಗಿಸಿದರು.
ಇನ್ನೋರ್ವ ಅತಿಥಿ ಮೂಡುಬಿದಿರೆ ಮಾಜಿ ಪುರಸಭಾಧ್ಯಕ್ಷ, ಮಂಗಳೂರು ತಾಲ್ಲೂಕು ಮಾನವ ಹಕ್ಕು ಆಯೋಗದ ಅಧ್ಯಕ್ಷ ರತ್ನಾಕರ ದೇವಾಡಿಗರು ಮಾತನಾಡಿ ತಾವು ಅಧಿಕಾರದಲ್ಲಿದ್ದಾಗ ಸಾಮಾನ್ಯ ಬಡವರಿಗೆ ಹೇಗೆ ಲಂಚ ರಹಿತವಾಗಿ ಕೆಲಸ ನಡೆಯಲು ಸಹಾಯ ಮಾಡಿದೆ, ಎಂಬಿತ್ಯಾದಿ ವಿಷಯಗಳನ್ನು ಹಲವಾರು ಉದಾಹರಣೆಗಳೊಂದಿಗೆ ತಿಳಿಸಿದರು.
ಅಲ್ಲದೆ ಪ್ರತೀ ವರ್ಷ ಜೈನ ಹೈಸ್ಕೂಲಿನ ವಿದ್ಯಾರ್ಥಿಗಳಿಗೆ ಮುಂದಿನ ಜೀವನಕ್ಕೆ ಬೇಕಾದ ಈ ಎಲ್ಲಾ ಮಾಹಿತಿಯನ್ನು ನೀಡುತ್ತಿರುವುದು ಪ್ರಶಂಸನೀಯ ಎಂದು ಮೆಚ್ಚುಗೆಯ ಮಾತುಗಳನ್ನಾಡಿ ಸ್ವತ: ಭಾಗವಹಿಸುತ್ತಿರುವ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಗ್ರಾಹಕ ಕ್ಲಬ್ ನ ನಿರ್ದೇಶಕ-ಅಧ್ಯಾಪಕ, ದ.ಕ. ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟದ ಜತೆ ಕಾರ್ಯದರ್ಶಿ, ಸಂಪನ್ಮೂಲ ವ್ಯಕ್ತಿ ರಾಯೀ ರಾಜಕುಮಾರರು ಸ್ವಾಗತಿಸಿ ವಂದಿಸಿದರು.