ಕುಂದಾಪುರ: ಉಡುಪಿ ಜಿಲ್ಲೆಯ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಕುಂದಾಪುರ ಇದರ ಆಶ್ರಯದಲ್ಲಿ ಎಪ್ರಿಲ್ 30, 2016ರಂದು ಒಂದು ದಿನದ ಬೃಹತ್ ಎಂ.ಐ.ಟಿ.ಕೆ ಉದ್ಯೋಗ ಮೇಳ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ಯಶಸ್ವಿಯಾಗಿ ನೆರವೇರಿತು.
ಎಂ.ಐ.ಟಿ.ಕೆ ಉದ್ಯೋಗ ಮೇಳದಲ್ಲಿ 30 ಕ್ಕೂ ಹೆಚ್ಚು ಹೆಸರಾಂತ ಕಂಪನಿಗಳು ಭಾಗವಹಿಸಿದ್ದು, ಜಿಲ್ಲೆಯ ಹಾಗೂ ಹೊರ ಜಿಲ್ಲೆಯ 2000 ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿದ್ದರು. ಪ್ರಮುಖ ಕಂಪನಿಗಳಾದ ಇನ್ಫೋಸಿಸ್, ಎಕ್ಸೆಂಚರ್, ಎಂಫಾಸಿಸ್, ವಿಪ್ರೊ, ವೊಡಾಫೋನ್, ಭಾರತ್ ಆಟೋಮೋಟಿವ್, ಸುಜ್ಲಾನ್, ಫೋಲೀಕ್ಯಾರಿಯರ್, ಎಸ್.ವಿ. ಇನ್‍ಫ್ರಾ, ಉಜ್ವಲಮ್ ಸಾಫ್ಟ್‍ಟೆಕ್, ಡೆಫೋಡಿಲ್, ಮಹಿಂದ್ರಾ ಆಟೋಮೋಟಿವ್, ಆಕ್ಸಿಸ್ ಬ್ಯಾಂಕ್, ಕ್ಯಾನ್‍ಬ್ಯಾಂಕ್ ಸರ್ವಿಸಸ್, ನಕ್ಷತ್ರ ಕನ್ಸ್‍ಸ್ಟ್ರಕ್ಷನ್, ಇಂಟೆಲ್‍ನೆಟ್, ಮಣಪ್ಪುರಂ, ಓರಿಯೆಂಟ್ ಬೆಲ್, ಶ್ರೀ ರಾಜೇಶ್ವರಿ ಎಂಡ್ ಕೋ, ಈಸ್ಟ್ ಇಂಡಿಯಾ ಪ್ರೈವೆಟ್ ಲಿಮಿಟೆಡ್, ಡಿಸ್ಕವರಿ ಕಿಡ್ಸ್, ಏಜಿಸ್, ಮಾಗ್ನಾ ಇನ್ಫೋಟೆಕ್, ಕೆ.ವಿ.ಬಿ., ಎಚ್.ಸಿ.ಎಲ್., ಟಿ.ಎಂ.ಲ್., ಇನ್ನಿತರ ಕಂಪೆನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದವು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಗರಾಭಿವೃದ್ಧಿ ಸಚಿವ ಶ್ರೀಯುತ ವಿನಯ್ ಕುಮಾರ್ ಸೊರಕೆಯವರು ಮಾತನಾಡಿ ಎಂ.ಐ.ಟಿ.ಕೆ ಉದ್ಯೋಗ ಮೇಳ ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ವೇದಿಕೆಯಾಗಿದ್ದು, ಈ ಸುವರ್ಣಾವಕಾಶವನ್ನ್ನು ಕಲ್ಪಿಸಿಕೊಟ್ಟ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದ ಅಧ್ಯಕ್ಷರಾದ ಶ್ರೀಯುತ ಸಿದ್ದಾರ್ಥ ಜೆ. ಶೆಟ್ಟಿಯವರನ್ನು ಅಭಿನಂದಿಸಿದರು. ಇನ್ನೋರ್ವ ಮುಖ್ಯ ಅತಿಥಿ ಶ್ರೀಯುತ ರಮಾನಂದ ನಾಯಕ್, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ ಇವರು ಮಾತನಾಡಿ ಮುಂದಿನ ವರ್ಷಗಳಲ್ಲಿ ಮೂಡ್ಲಕಟ್ಟೆ ತಾಂತ್ರಿಕ ಕಾಲೇಜಿನ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲು ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಸತೀಶ್ ಎಸ್. ಅಂಸಾಡಿಯವರು ಎಂ.ಐ.ಟಿ.ಕೆ ಉದ್ಯೋಗ ಮೇಳದ ಸಮಗ್ರ ಚಿತ್ರಣವನ್ನು ನೀಡಿದರು. ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆಯಾದ ಪ್ರೊ| ಶಶಿಕಲಾರವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ವಿಜ್ಞಾನ, ಕಲೆ, ವಾಣಿಜ್ಯ, ಇಂಜಿನಿಯರಿಂಗ್, ಎಂ.ಬಿ.ಎ., ಸೇರಿದಂತೆ ವಿವಿಧ ಪದವಿ, ಡಿಪ್ಲೊಮಾ, ಐಟಿಐ ಶಿಕ್ಷಣ ಹೊಂದಿದವರು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದು 800ಕ್ಕೂ ಹೆಚ್ಚು ಅಭ್ಯರ್ಥಿಗಳು ಪ್ರತಿಷ್ಟಿತ ಕಂಪೆನಿಗಳ ಉದ್ಯೋಗಕ್ಕೆ ಆಯ್ಕೆಯಾದರು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರವನ್ನು ನೀಡಿದ್ದು ಮೂಡ್ಲಕಟ್ಟೆ ಉದ್ಯೋಗ ಮೇಳದ ವಿಶೇಷತೆಯಾಗಿತ್ತು.