ಮೂರು ದಿನಗಳ ಒಳಗೆ ಸ್ಥಳೀಯರಿಗೆ ಸಾಸ್ತಾನದಲ್ಲಿ ಟೋಲ್ ವಿನಾಯತಿ ರದ್ದು – ನವಯುಗ ಕಂಪೆನಿ
ಉಡುಪಿ: ಸಾಸ್ತಾನದಲ್ಲಿ ಸ್ಥಳೀಯರಿಗೆ ನವಯುಗ ಕಂಪೆನಿ ಟೋಲ್ ನಲ್ಲಿ ನೀಡುತ್ತಿರುವ ವಿನಾಯತಿಯನ್ನು 3 ದಿನದೊಳಗೆ ರದ್ದುಪಡಿಸುವುದಾಗಿ ಕಂಪೆನಿಯ ಪ್ರಾಜೆಕ್ಟ್ ಮ್ಯಾನೇಜರ್ ಶಂಕರ್ ರಾವ್, ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಗುರುವಾರ ಘೋಷಿಸಿದ್ದಾರೆ.
ಕರ್ನಾಟಕ ರಕ್ಷ ಣಾ ವೇದಿಕೆ 24 ದಿನಗಳಿಂದ ಹೆಜಮಾಡಿ ಟೋಲ್ನಲ್ಲಿ ಪಡುಬಿದ್ರಿ ಜಿಪಂ ವ್ಯಾಪ್ತಿಯವರಿಗೆ ಸಂಪೂರ್ಣ ಸುಂಕ ವಿನಾಯಿತಿಗೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಗುರುವಾರ ಭೇಟಿ ನೀಡಿದ್ದು, ಈ ವೇಳೆ ಜಿಲ್ಲಾಧಿಕಾರಿ ಕೇಳಿದ ಪ್ರಶ್ನೆಗೆ ಅವರು ಈ ರೀತಿಯಲ್ಲಿ ಉತ್ತರಿಸಿದ್ದಾರೆ.
ನವಯುಗ ಅಧಿಕಾರಿ ಮುಷ್ಕರ ನಿರತರ ಮನವಿಗೆ ಸ್ಪಂದಿಸಲು ಧನಾತ್ಮಕ ನಿರ್ಧಾರದೊಂದಿಗೆ ಬರುವಂತೆ ನವಯುಗ ಅಧಿಕಾರಿ ಶಂಕರ್ ರಾವ್ ಅವರನ್ನು ಜಿಲ್ಲಾಧಿಕಾರಿ ಕರೆಸಿದ್ದರು. ಅಧಿಕಾರಿಯೊಂದಿಗೆ ಅಭಿಪ್ರಾಯ ಸೂಚಿಸುವಂತೆ ಹೇಳಿದಾಗ ಮೇಲಧಿಕಾರಿ ಗೌರಿನಾಥ್ರೊಂದಿಗೆ ಮೊಬೈಲ್ ಸಂಭಾಷಣೆ ನಡೆಸಿ, ಪಡುಬಿದ್ರಿಯ ಜನತೆಗೆ ಸುಂಕ ವಿನಾಯಿತಿ ನೀಡಲಾಗದು. ಸಾಸ್ತಾನದಲ್ಲಿ ನೀಡಿರುವ ಸುಂಕ ವಿನಾಯಿತಿ ರದ್ದುಪಡಿಸುವ ಇರಾದೆಯಲ್ಲಿದ್ದೇವೆ. ಮುಂದಿನ 3 ದಿನದೊಳಗೆ ಸಾಸ್ತಾನ ಟೋಲ್ ವಿನಾಯಿತಿ ರದ್ದುಗೊಳ್ಳಲಿದೆ. 20 ಕಿ.ಮೀ. ಸುತ್ತಳತೆಯಲ್ಲಿನ ಸ್ಥಳೀಯರು 255 ರೂ.ಗಳ ಪಾಸ್ ಪಡೆದುಕೊಳ್ಳುವಂತೆ ಅಧಿಕಾರಿ ತಿಳಿಸಿರುವುದಾಗಿ ಹೇಳಿದರು.
ಇದರಿಂದ ವಿಚಲಿತರಾದ ಜಿಲ್ಲಾಧಿಕಾರಿ ಈ ಬಗ್ಗೆ ಮೇಲಧಿಕಾರಿಗಳ ಜತೆ ದೂರವಾಣಿ ಮೂಲಕ ಮಾತನಾಡಿದರು. ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ಶಂಕರ್ ರಾವ್ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿ ಪ್ರತಿಭಟಿಸಿದರು. ತಕ್ಷ ಣ ಡಿಸಿ ಅವರನ್ನು ಅಲ್ಲಿಂದ ತೆರಳುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಟೋಲ್ ಸಮಸ್ಯೆ ಸಂಬಂಧಿಸಿದಂತೆ ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ದೇಶ ನದಂತೆ ಜಿಲ್ಲಾಡಳಿತ ಮುಂದಿನ ನಿರ್ಧಾರ ಕೈಗೊಳ್ಳಲಿದೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು. ಈ ಹಿಂದೆಯೂ ಹಲವು ಬಾರಿ ಗಮನಕ್ಕೆ ತರಲಾಗಿದೆ. ಅಲ್ಲದೆ ಜಿಲ್ಲಾಡಳಿತದಿಂದ ವಿವಿಧ ಸ್ತರಗಳಲ್ಲಿ ನಡೆಸಿದ ಸಭೆಗಳಲ್ಲಿಯೂ ನವಯುಗ ಕಂಪನಿಗೆ ಬುದ್ಧಿ ಹೇಳಿದರೂ, ಯಾವುದೇ ಪ್ರಯೋಜನವಾಗಿಲ್ಲ. ಕಂಪನಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿ ಕಾರದ ಒಪ್ಪಂದದಂತೆ ರಾಜ್ಯ ಸರ್ಕಾರದ ನಿರ್ದೇಶನದಂತೆ ಟೋಲ್ ಸಂಗ್ರಹಕ್ಕೆ ಜಿಲ್ಲಾಡಳಿತ ಭದ್ರತೆ ನೀಡಿದೆ ಎಂದರು.
ಒಂದೇ ಜಿಲ್ಲೆಯಲ್ಲಿದ್ದು, ನವ ಯುಗ ಕಂಪನಿ ದ್ವಂದ ನೀತಿ ಅನುಸರಿಸು ತ್ತಿರುವುದು ಸಮಂಜಸವಲ್ಲ. ಸಾಸ್ತಾನ ದಲ್ಲಿ ನೀಡಿದಂತೆ ಹೆಜಮಾಡಿ ಟೋಲ್ ನಲ್ಲಿಯೂ ಸುಂಕ ವಿನಾಯಿತಿ ನೀಡಬೇಕು ಎಂಬ ಪ್ರತಿಭಟನಾಕಾರರ ಬೇಡಿಕೆ ನ್ಯಾಯಯುತವೇ ಆಗಿದೆ. ಜಿಲ್ಲಾಡಳಿತದಿಂದಲೂ ಈ ಬಗ್ಗೆ ಕಂಪನಿಗೆ ತಿಳಿ ಹೇಳಲಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಏನೇ ನಿರ್ಧಾರ ಕೈಗೊಳ್ಳುವಂತಿಲ್ಲ ಎಂದು ಕಂಪನಿಯವರು ತಿಳಿಸಿದ್ದಾರೆ. ನವಯುಗ ಕಂಪನಿ ಕಳಪೆ ಕಾಮಗಾರಿ ವಿರುದ್ಧ ಈಗಾಗಲೇ ಎರಡು ಎಫ್ಐಆರ್ ದಾಖಲಿಸಲಾಗಿದೆ. ಕಂಪನಿ ಕಪ್ಪು ಪಟ್ಟಿಗೆ ಸೇರಿಸಲು ವರದಿ ನೀಡಲಾಗಿದೆ. ನಮ್ಮ ಅಸಹಾಯಕತೆ ಅರ್ಥ ಮಾಡಿಕೊಳ್ಳಿ. ಸಮಸ್ಯೆ ಸರ್ಕಾರದ ಗಮನಕ್ಕೆ ತಂದು ನಿರ್ಧಾರ ತಿಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.
ಪ್ರತಿಭಟನಾಕಾರರಿಗೆ ಉತ್ತರಿಸಿದ ಉಡುಪಿ ಜಿಲ್ಲಾಧಿಕಾರಿ, ನವಯುಗ ಅಧಿಕಾರಿಗಳು, ಸರ್ಕಾರ ದೊಂದಿಗೆ ಚರ್ಚಿಸಿ ಮುಂದಿನ ಮೂರು ದಿನಗಳೊಳಗಾಗಿ ಸಮರ್ಪಕ ನಿರ್ಧಾರಕ್ಕೆ ಬರಲಾಗುವುದು ಎಂದರು. ಈ ಸಂದರ್ಭದಲ್ಲಿ ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳುವಂತೆ ಪ್ರತಿಭಟನಾಕಾ ರರಲ್ಲಿ ಮನವಿ ಮಾಡಿದರು.
ಇದಕ್ಕೆ ಒಪ್ಪಿದ ಪ್ರತಿಭಟನಾಕಾರರು ಮೂರು ದಿನದವರೆಗೆ ಪ್ರತಿಭಟನೆ ಮುಂದೂಡಲಾಗಿದ್ದು, ಸಮರ್ಪಕ ಉತ್ತರ ದೊರೆಯದಿದ್ದಲ್ಲಿ ಮುಂದೆ ನಿರ್ಣಾಯಕ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಹೆದ್ದಾರಿ ಕಾಮಗಾರಿ ವೀಕ್ಷಿಸಿದ ಡಿಸಿಯವರು ಶಂಕರ್ ರಾವ್ರನ್ನು ಮತ್ತೆ ಕರೆಸಿ ಸರ್ವಿಸ್ ರಸ್ತೆ 15 ದಿನದೊಳಗೆ ಮಾಡಿ ಮುಗಿಸುವಂತೆ ಆದೇಶಿಸಿದರು. ಅಷ್ಟರಲ್ಲಿ ಮಾಡದಿದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಇದೇ ವೇಳೆ ಹೆದ್ದಾರಿ ಪಕ್ಕ ಕಡಿದ ಮರಗಳ ಬೃಹತ್ ಬೇರುಗಳನ್ನು ಪೇರಿಸಿಡಲಾಗಿದ್ದು, ಶುಕ್ರವಾರ ಮಧ್ಯಾಹ್ನದೊಳಗೆ ಸ್ಥಳಾಂತರಿಸದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಅರ್ಧಂಬರ್ಧ ಕಾಮಗಾರಿ ನಡೆದ ಪಡುಬಿದ್ರಿ ಸರ್ವಿಸ್ ರಸ್ತೆಗಳಲ್ಲಿ ಧೂಳು ತುಂಬಿ ಸಾರ್ವಜನಿಕರಿಗೆ ತೊಂದರೆಯಾಗುವ ಬಗ್ಗೆ ಡಿಸಿಯವರ ಗಮನ ಸೆಳೆಯಲಾಯಿತು. ಇದಕ್ಕೆ ಸ್ಪಂದಿಸಿದ ಅವರು, ನಿತ್ಯ ಮೂರು ಬಾರಿ ರಸ್ತೆಗೆ ನೀರು ಹರಿಸುವಂತೆ ನಿರ್ದೇಶನ ನೀಡಿದ್ದಲ್ಲದೆ ಈ ಬಗ್ಗೆ ತಾನೇ ನಿಗಾ ವಹಿಸುವುದಾಗಿ ಎಚ್ಚರಿಸಿದರು.
ಪಡುಬಿದ್ರಿ ಗ್ರಾಪಂ ಪಿಡಿಒ ಪಂಚಾಕ್ಷ ರಿ ಸ್ವಾಮಿ ಕೆರೀಮಠ್, ಅಧ್ಯಕ್ಷೆ ದಮಯಂತಿ ವಿ. ಅಮೀನ್, ಉಪಾಧ್ಯಕ್ಷ ಸುಕುಮಾರ್ ಆವರೊಂದಿಗೆ ಪಡುಬಿದ್ರಿ-ಉಡುಪಿ-ಕಾರ್ಕಳ ಬಸ್ ನಿಲ್ದಾಣ ನಿರ್ಮಿಸಲು ಗ್ರಾಪಂ ಠರಾವು ಮಂಡಿಸಿ ನವಯುಗ ಕಂಪನಿಗೆ ರವಾನಿಸಿದ ತಾಣವನ್ನು ಜಿಲ್ಲಾಧಿಕಾರಿ ವೀಕ್ಷಿಸಿದರು. ಜನತೆಗೆ ಸಮಂಜಸವಾಗುವ ರೀತಿಯಲ್ಲಿ ಮುಂದೆ ಇಕ್ಕಟ್ಟಿನ ಸ್ಥಿತಿ ಉದ್ಭವಿಸದಂತೆ ಜನತೆಯ ಅಭಿಪ್ರಾಯ ಪಡೆದು ಬಸ್ ನಿಲ್ದಾಣ ರಚನೆಯನ್ನು ಪರಾಮರ್ಶಿಸುವಂತೆ ಜಿಲ್ಲಾಧಿಕಾರಿ ಗ್ರಾಪಂ ಮುಖ್ಯಸ್ಥರಿಗೆ ತಿಳಿಸಿದರು.
ಉಡುಪಿ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, ಕಾಪು ಕಂದಾಯ ಪರಿವೀಕ್ಷ ಣಾಧಿಕಾರಿ ರವಿಶಂಕರ್, ಗ್ರಾಮ ಲೆಕ್ಕಿಗ ಶ್ಯಾಮ್ಸುಂದರ್, ನವಯುಗ ಅಧಿಕಾರಿ ಶಂಕರ ರಾವ್, ರಾಮಕೃಷ್ಣ, ಶಿವಪ್ರಸಾದ್ ರೈ, ಪಡುಬಿದ್ರಿ ಪೊಲೀಸ್ ಠಾಣಾಧಿಕಾರಿ ಸತೀಶ್ ಎಂ.ಪಿ. ಉಪಸ್ಥಿತರಿದ್ದರು.